
ಕೆಎಸ್‌ಬಿಸಿ ಲಾಂಛನ
ಬೆಂಗಳೂರು: ‘ರೀಲ್ಸ್ ಮೂಲಕ ಸಾರ್ಜನಿಕರಿಗೆ ಕಾನೂನು ಸಲಹೆ ನೀಡುವ ನೆಪದಲ್ಲಿ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಮತ್ತು ವೃತ್ತಿ ಘನತೆಗೆ ಅಪಚಾರ ಎಸಗಿದ್ದಾರೆ’ ಎಂಬ ಆರೋಪದಡಿ ಒಬ್ಬ ಮಹಿಳೆ ಸೇರಿದಂತೆ ಐವರು ವಕೀಲರ ಸನ್ನದು ಅಮಾನತುಗೊಳಿಸಿದ್ದ ಆದೇಶವನ್ನು ‘ಕರ್ನಾಟಕ ರಾಜ್ಯ ವಕೀಲರ ಪರಿಷತ್’ (ಕೆಎಸ್‌ಬಿಸಿ) ಹಿಂಪಡೆದಿದೆ.
‘ಈ ಕುರಿತಂತೆ ಕೆಎಸ್‌ಬಿಸಿ ನಡೆಸಿದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ’ ಎಂದು ಪರಿಷತ್ ಅಧ್ಯಕ್ಷ ವಿ.ಡಿ.ಕಾಮರಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಂತೆಯೇ ‘ಪರಿಷತ್ ವಿರುದ್ಧ ಮತ್ತು ರೀಲ್ಸ್ ವಿಚಾರದ ಕುರಿತಂತೆ ಯಾವುದೇ ವಕೀಲರು ಪರ-ವಿರೋಧದ ಆರೋಪ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ಬಳಕೆ ಮಾಡಕೂಡದು. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಸೂಕ್ತ ಮತ್ತು ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡಿದ ಆರೋಪದಡಿ ಬೆಂಗಳೂರಿನ ವಿನಯ್ ಕುಮಾರ್ ಜಿ.ಮಂಜುನಾಥ್ ಮತ್ತು ರೇಣುಕಾ ದೇವಿ ಅಲಿಯಾಸ್ ರೇಣುಕಾ ಹಿರೇಮಠ ಮೈಸೂರಿನ ವಿ.ರವಿಕುಮಾರ್ ಮತ್ತು ಹುಣಸೂರಿನ ಎನ್.ಪುಟ್ಟೇಗೌಡ ಅವರ ಸನ್ನದು ಅಮಾನತುಗೊಳಿಸಿ ಪರಿಷತ್ ಇತ್ತೀಚೆಗೆ ನಿರ್ಣಯ ಕೈಗೊಂಡಿತ್ತು. ಈ ನಿರ್ಣಯವನ್ನು ವಿರೋಧಿಸಿ ಮೈಸೂರಿನ ಯುವ ವಕೀಲ ಮತ್ತು ‘ಕಬಿನಿ ಉಳಿಸಿ’ ಹೋರಾಟಗಾರ ವಿ.ರವಿಕುಮಾರ್ ಅವರು ರಾಜ್ಯ ವಕೀಲರ ಪರಿಷತ್ ಸದಸ್ಯರೂ ಆದ ಪದಾಂಕಿತ ಹಿರಿಯ ವಕೀಲರೊಬ್ಬರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಾಗ್ದಾಳಿ ನಡೆಸಿ ವಿರೋಧ ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.