ADVERTISEMENT

Caste Census | ಗಣತಿ ಆ್ಯಪ್‌ನಲ್ಲಿ 33 ಜಾತಿ ನಿಷ್ಕ್ರಿಯ, ಗೊಂದಲಕ್ಕೆ ತೆರೆ

ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 0:30 IST
Last Updated 22 ಸೆಪ್ಟೆಂಬರ್ 2025, 0:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಹಿಂದೂ ಜಾತಿಗಳ ಹೆಸರಿನ ಜೊತೆ ಕ್ರಿಶ್ಚಿಯನ್‌ ಪದ ಸೇರ್ಪಡೆಗೆ ವಿವಿಧ ಸಮುದಾಯಗಳು ಹಾಗೂ ರಾಜಕೀಯ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾದ ಕಾರಣ, ಈ ರೀತಿಯ 33 ಜಾತಿಗಳನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಮೀಕ್ಷೆಗೆ ಸಿದ್ಧಪ‍ಡಿಸಿರುವ ಆ್ಯಪ್‌ನಲ್ಲಿ ನಿಷ್ಕ್ರಿಯಗೊಳಿಸುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದೆ.

‘ಆಕ್ಷೇಪಾರ್ಹ ಎನ್ನಲಾಗಿದ್ದ 33 ಜಾತಿಗಳ ಹೆಸರು ಆ್ಯಪ್‌ನಲ್ಲಿ ಲಭ್ಯವಿರುವುದಿಲ್ಲ. ಆದರೆ, ಜನರು ಸ್ವಯಂಪ್ರೇರಿತವಾಗಿ ತಮ್ಮ ಜಾತಿ, ಧರ್ಮ ಹೇಳಿಕೊಳ್ಳಲು ಸ್ವತಂತ್ರರಾಗಿದ್ದು, ಅದನ್ನು ಗಣತಿದಾರರು ಯಥಾವತ್ತಾಗಿ ದಾಖಲಿಸಿಕೊಳ್ಳುತ್ತಾರೆ. ಆ್ಯಪ್‌ನಲ್ಲಿ ನಿಷ್ಕ್ರಿಯಗೊಳಿಸಲಾದ ಜಾತಿಗಳನ್ನು ಸಮೀಕ್ಷೆ ವೇಳೆ ಜನ ನಮೂದಿಸಲು ಬಯಸಿದರೆ ಗಣತಿದಾರರು ಅದನ್ನೂ ದಾಖಲಿಸಿಕೊಳ್ಳಲಿದ್ದಾರೆ’ ಎಂದು ಆಯೋಗದ ಅಧ್ಯಕ್ಷ ಮಧುಸೂದನ ಆರ್. ನಾಯ್ಕ್‌ ತಿಳಿಸಿದರು.

ADVERTISEMENT

ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ಕಾಂತರಾಜ ಅಧ್ಯಕ್ಷತೆಯ ಆಯೋಗ 2015ರಲ್ಲಿ ನಡೆಸಿದ ಸಮೀಕ್ಷೆಯಲ್ಲೇ ಈ ಜಾತಿಗಳ ಹೆಸರು ದಾಖಲಾಗಿದ್ದವು. ಸಾವಿರಾರು ಜನರು ಈ ಜಾತಿಗಳನ್ನು ಉಲ್ಲೇಖಿಸಿದ್ದರು. ನಾವು ಯಾವುದೇ ಜಾತಿಯನ್ನು ಸೃಷ್ಟಿ ಮಾಡಿಲ್ಲ. ಅದಕ್ಕೂ ನಮಗೂ ಸಂಬಂಧವಿಲ್ಲ. ಸಮೀಕ್ಷೆಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಮೊಬೈಲ್‌ ಆ್ಯಪ್‌ನ ಡ್ರಾಪ್‌ಡೌನ್‌ನಲ್ಲಿ ಈ ಹಿಂದೆ ಉಲ್ಲೇಖಗೊಂಡಿದ್ದ ಜಾತಿಗಳ ಪಟ್ಟಿಯನ್ನು ದಾಖಲಿಸಲಾಗಿತ್ತು. ಈ ಜಾತಿಗಳ ಪಟ್ಟಿಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಅದು ಸಾರ್ವಜನಿಕ ದಾಖಲೆಯೂ ಅಲ್ಲ. ಹೀಗಿದ್ದರೂ ಅನಗತ್ಯವಾಗಿ ವಿವಾದ ಸೃಷ್ಟಿಸಲಾಗಿದೆ’ ಎಂದರು.

‘ಸಮೀಕ್ಷೆ ಪೂರ್ಣಗೊಂಡ ಬಳಿಕ ಲಭ್ಯವಾದ ದತ್ತಾಂಶವನ್ನು ಆಯೋಗ ವಿಶ್ಲೇಷಿಸಿ, ನಂತರ ವಿವಿಧ ಜಾತಿ, ಸಮುದಾಯಗಳಿಗೆ ನೀಡಬೇಕಾದ ಅನುಕೂಲತೆಗಳ ಬಗ್ಗೆ ಶಿಫಾರಸುಗಳ ಸಹಿತ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ’ ಎಂದರು.

ಜಿಬಿಎ– ಸಮೀಕ್ಷೆ ವಿಳಂಬ:

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ಶಿಕ್ಷಕರು ಹಾಗೂ ಇತರರಿಗೆ ತರಬೇತಿ ಪ್ರಗತಿಯಲ್ಲಿ ಇರುವುದರಿಂದ ಎರಡು ದಿನ ತಡವಾಗಿ ಸಮೀಕ್ಷೆ ಶುರುವಾಗಲಿದೆ. ಹೀಗಾಗಿ ಸಮೀಕ್ಷೆ ಮುಕ್ತಾಯದ ಅವಧಿ ಸಹ ಅ.7ರ ಬದಲಿಗೆ ಒಂದೆರಡು ದಿನ ವಿಸ್ತರಣೆಯಾಗಲಿದೆ ಎಂದು ಅವರು ತಿಳಿಸಿದರು.

ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ಜಾತಿ ಉಳಿಸಿಕೊಂಡರೆ, ಧರ್ಮ ಬದಲಾಗುತ್ತದೆ. ಜಾತಿ ಬದಲಾಗದು. ಹೀಗಾಗಿ ಮತಾಂತರಗೊಂಡವರನ್ನು ಕ್ರೈಸ್ತರೆಂದೇ ಪರಿಗಣಿಸಲಾಗುತ್ತದೆ
ಕೆ.ಎ. ದಯಾನಂದ, ಆಯೋಗದ ಸದಸ್ಯ ಕಾರ್ಯದರ್ಶಿ

ನಿಷ್ಕ್ರಿಯಗೊಳಿಸಿರುವ ಜಾತಿಗಳು

ಅಕ್ಕಸಾಲಿಗ ಕ್ರಿಶ್ಚಿಯನ್‌, ಬಣಜಿಗ ಕ್ರಿಶ್ಚಿಯನ್‌, ಬಾರಿಕಾರ್‌ ಕ್ರಿಶ್ಚಿಯನ್‌, ಬೆಸ್ತರು ಕ್ರಿಶ್ಚಿಯನ್‌, ಬಿಲ್ಲವ ಕ್ರಿಶ್ಚಿಯನ್‌, ಬ್ರಾಹ್ಮಣ ಕ್ರಿಶ್ಚಿಯನ್‌, ಚರೋಡಿ ಕ್ರಿಶ್ಚಿಯನ್‌, ದೇವಾಂಗ ಕ್ರಿಶ್ಚಿಯನ್‌, ಈಡಿಗ ಕ್ರಿಶ್ಚಿಯನ್‌, ಗೊಲ್ಲಕ್ರಿಶ್ಚಿಯನ್‌, ಗೊಂಡ ಲಾಲಗೊಂಡ ಕ್ರಿಶ್ಚಿಯನ್‌, ಗೌಡಿ ಕ್ರಿಶ್ಚಿಯನ್‌, ಜಲಗಾರ ಕ್ರಿಶ್ಚಿಯನ್‌, ಜಂಗಮ ಕ್ರಿಶ್ಚಿಯನ್‌, ಕಮ್ಮ ಕ್ರಿಶ್ಚಿಯನ್‌, ಕಮ್ಮ ನಾಯ್ಡು ಕ್ರಿಶ್ಚಿಯನ್‌, ಕಂಸಾಳಿ/ ಕಂಸಾಳೆ ಕ್ರಿಶ್ಚಿಯನ್‌, ಕುರುಬ ಕ್ರಿಶ್ಚಿಯನ್‌, ಮಡಿವಾಳ ಕ್ರಿಶ್ಚಿಯನ್‌, ಮಾಂಗ ಕ್ರಿಶ್ಚಿಯನ್‌, ಮೊದಲಿಯಾರ್‌ ಕ್ರಿಶ್ಚಿಯನ್‌, ನಾಡಾರ್‌ ಕ್ರಿಶ್ಚಿಯನ್‌, ನೇಕಾರ ಕ್ರಿಶ್ಚಿಯನ್‌, ಪಡಯಾಚಿ ಕ್ರಿಶ್ಚಿಯನ್‌, ರೆಡ್ಡಿ ಕ್ರಿಶ್ಚಿಯನ್‌, ಸೆಟ್ಟಿ ಬಲಿಜ ಕ್ರಿಶ್ಚಿಯನ್‌, ಸುದ್ರಿ ಕ್ರಿಶ್ಚಿಯನ್‌, ತಿಗಳ/ ಥಿಗಳ ಕ್ರಿಶ್ಚಿಯನ್‌, ತುಳು ಕ್ರಿಶ್ಚಿಯನ್‌, ವೈಶ್ಯ/ ಶೆಟ್ರು ಕ್ರಿಶ್ಚಿಯನ್‌, ವಿಶ್ವಕರ್ಮ ಕ್ರಿಶ್ಚಿಯನ್‌, ಒಕ್ಕಲಿಗ ಕ್ರಿಶ್ಚಿಯನ್‌, ವೈಶ್ಯ ಬ್ರಾಹ್ಮಣ ಕ್ರಿಶ್ಚಿಯನ್‌

148 ಜಾತಿಗಳ ಹೆಸರು ಸೇರ್ಪಡೆ

‘ಜಾತಿಗಳ ಪಟ್ಟಿಯನ್ನು ಪ್ರಕಟಿಸಿ, ಈಗಾಗಲೇ ಯಾವುದಾದರು ಜಾತಿಯ ಹೆಸರು ಬಿಟ್ಟು ಹೋಗಿದ್ದರೆ ಸೇರ್ಪಡೆಗೂ ಕಾಲಾವಕಾಶ ನೀಡಲಾಗಿತ್ತು. ಅದರಂತೆ 148 ಜಾತಿಗಳ ಹೆಸರು ಸೇರ್ಪಡೆ ಮಾಡಲಾಗಿತ್ತು. ಆ ಮೂಲಕ 1,413 ಜಾತಿಗಳ ಜತೆಗೆ 148 ಜಾತಿಗಳನ್ನು ಸೇರಿಸಿ 1,561 ಜಾತಿಗಳ ಪಟ್ಟಿಯನ್ನು ಆ್ಯಪ್‌ನ ಡ್ರಾಪ್‌ಡೌನ್‌ನಲ್ಲಿ ಹಾಕಲಾಗಿತ್ತು. ಆದರೆ, ಈ ಪಟ್ಟಿಯ ಬಗ್ಗೆ ಜನರಲ್ಲಿ ಗೊಂದಲ ಸೃಷ್ಟಿಯಾಗಿರುವ ಬಗ್ಗೆ ಸಚಿವರ ತಂಡ ಕಳಕಳಿ ವ್ಯಕ್ತಪಡಿಸಿತ್ತು. ಹೀಗಾಗಿ ಆಯೋಗದ ಸದಸ್ಯರೊಂದಿಗೆ ಚರ್ಚಿಸಿ 33 ಜಾತಿಗಳನ್ನು ನಿಷ್ಕ್ರಿಯಗೊಳಿಸಲು ತೀರ್ಮಾನಿಸಲಾಯಿತು’ ಎಂದು ಅವರು ವಿವರಿಸಿದರು.

‘ಪುನರಾವರ್ತಿತ ಇಲ್ಲವೇ ಜಾತಿ ಹೆಸರಿನ ಉಲ್ಲೇಖ ಹಿಂದೆ-ಮುಂದೆ ದಾಖಲಾಗಿದ್ದರೂ ಒಟ್ಟಿಗೆ ಪರಿಗಣಿಸಲಾಗುತ್ತದೆ. ಉದಾಹರಣೆಗೆ ಅಕ್ಕಸಾಲಿಗ ಲಿಂಗಾಯತ, ಲಿಂಗಾಯತ ಅಕ್ಕಸಾಲಿಗ ಎಂಬುದಾಗಿ ನಮೂದಿಸಿದರೂ ಎರಡನ್ನೂ ಒಂದೇ ಎಂದು ಪರಿಗಣಿಸಲಾಗುವುದು’ ಎಂದು ಅವರು ಸ್ಪಷ್ಟಪಡಿಸಿದರು.

ವೀರಶೈವ ಮಹಾಸಭಾ ಧರ್ಮದ ಕಾಲಂನಲ್ಲಿ ‘ಇತರೆ’ ಅಥವಾ ‘ವೀರಶೈವ ಲಿಂಗಾಯತ ಧರ್ಮ’ ಎಂಬುದಾಗಿ ದಾಖಲಿಸುವಂತೆ ಕರೆ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಅವರು, ‘ಧರ್ಮದ ಕಾಲಂನಲ್ಲಿ ಸ್ವಇಚ್ಛೆಯಿಂದ ಏನು ಬೇಕಾದರೂ ನಮೂದಿಸಿಕೊಳ್ಳಬಹುದು. ಆದರೆ, ಜಾತಿ ಕಾಲಂನಲ್ಲಿ ಲಿಂಗಾಯತ, ವೀರಶೈವ ಲಿಂಗಾಯತ ಎಂಬುದಾಗಿ ದಾಖಲಿಸಿದರೆ ಅವುಗಳನ್ನು ಒಟ್ಟುಗೂಡಿಸಿಯೇ ವಿಶ್ಲೇಷಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.