
ಬೆಂಗಳೂರು: ರಾಜ್ಯ ಶಿಕ್ಷಣ ನೀತಿಯ ಅಂತಿಮ ವರದಿ ಸಲ್ಲಿಸಿ ಆರು ತಿಂಗಳಾಗಿದ್ದು, ವರದಿ ಕುರಿತು ಸಾರ್ವಜನಿಕ ಚರ್ಚೆಗೆ ಅವಕಾಶ ನೀಡಬೇಕು. ಶಿಫಾರಸುಗಳನ್ನು ಜಾರಿಗೊಳಿಸುವ ಕುರಿತು ಬಜೆಟ್‌ನಲ್ಲೇ ಘೋಷಿಸಬೇಕು ಎಂದು ‘ಕರ್ನಾಟಕ ಶಾಲಾ ಶಿಕ್ಷಣದ ಸ್ಥಿತಿಗತಿ’ ಕುರಿತ ವಿಚಾರ ಸಂಕಿರಣದಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ, ನೀತಿ ನಿರೂಪಣೆಗಾಗಿ ಸಂಶೋಧನಾ ಸಂಸ್ಥೆ ಈ ವಿಚಾರ ಸಂಕಿರಣ ಆಯೋಜಿಸಿದ್ದವು.
ಶಿಕ್ಷಣ ನೀತಿಯ ಅನುಷ್ಠಾನದ ಭಾಗೀದಾರರಾದ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು, ಪೋಷಕರು, ಶಿಕ್ಷಣ ತಜ್ಞರು ಹಾಗೂ ರಾಜ್ಯದ ಎಲ್ಲಾ ನಾಗರಿಕರು ಶಿಕ್ಷಣ ನೀತಿಯ ಆಶಯ, ಪ್ರಸ್ತಾವ ಮತ್ತು ಶಿಫಾರಸುಗಳನ್ನು ತಿಳಿದುಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ. ಒಂದು ಶಿಕ್ಷಣ ನೀತಿಯ ಕೇವಲ ಕೆಲವೇ ತಜ್ಞರ ವರದಿಯಾಗಿರದೇ, ನಾಡಿನ ಚಿಂತನೆಯ ಭಾಗವಾಗುವುದು ಮತ್ತು ಎಲ್ಲರ ಅಭಿಪ್ರಾಯಗಳು ನೀತಿಯ ಅನುಷ್ಠಾನಕ್ಕೆ ಮಾರ್ಗದರ್ಶಿಯಾಗುವುದು ಕರ್ತವ್ಯವಾಗಿದೆ ಎಂದು ಹಲವು ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದರು.
ಶಿಕ್ಷಣ ನೀತಿಯ ವರದಿಯು ಶಿಕ್ಷಣದ ಜತೆಗೆ ಅನೇಕ ಅರ್ಥಪೂರ್ಣ ಸಾಮಾಜಿಕ, ಸಾಂಸ್ಕೃತಿಕ ವಿಚಾರಗಳನ್ನು ಒಳಗೊಂಡಿರುತ್ತದೆ. ಇಂತಹ ನೀತಿಯ ಮೂಲಕ ರಾಜ್ಯವು ನಾಡು, ನುಡಿ, ಶಿಕ್ಷಣ, ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಕುರಿತ ತನ್ನ ಆಶೋತ್ತರಗಳನ್ನು ಅಭಿವ್ಯಕ್ತಿಸುತ್ತದೆ. ಅವುಗಳ ಅನುಷ್ಠಾನ ಸಾಮುದಾಯಿಕವಾದ ಪ್ರಯತ್ನಗಳ ಕಾರ್ಯಸೂಚಿಯೂ ಆಗಿರುತ್ತದೆ. ಹಾಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 6ರಂದು ಮಂಡಿಸಲಿರುವ ಬಜೆಟ್‌ನಲ್ಲೇ ಈ ಕುರಿತು ನಿಲುವು ಪ್ರಕಟಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಕದ ಶಾಲಾ ಶಿಕ್ಷಣ ಕ್ಷೇತ್ರದಲ್ಲಿನ ಸ್ಥಿತಿಗತಿ ಹಾಗೂ ಬಿಕ್ಕಟ್ಟುಗಳ ಕುರಿತು ಚರ್ಚಿಸಲಾಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ವಿವಿಧ ವಿಷಯಗಳ ತಜ್ಞರಾದ ಜಿ.ರಾಮಕೃಷ್ಣ, ರಾಜೇಂದ್ರ ಚೆನ್ನಿ, ಸಬಿಹಾ ಭೂಮಿಗೌಡ, ವಿ.ಪಿ. ನಿರಂಜನಾರಾಧ್ಯ, ಟಿ.ಆರ್.ಚಂದ್ರಶೇಖರ್, ಬಸವರಾಜ ಗುರಿಕಾರ ಮತ್ತಿತರರು ಸಂಕಿರಣದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.