ADVERTISEMENT

ಶಿಕ್ಷಣ ಮತ್ತು ಉದ್ಯೋಗ ಉತ್ತೇಜಿಸಲು ‘ಯುವ ನೀತಿ’

ಉದ್ಯಮಶೀಲತೆಗೆ ಪ್ರೋತ್ಸಾಹಕ್ಕೆ ಶಿಫಾರಸು | ಇಲಾಖೆಯ ಪುನರ್‌ರಚನೆಗೂ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಮೇ 2022, 19:30 IST
Last Updated 18 ಮೇ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಶಿಕ್ಷಣ, ಉದ್ಯಮಶೀಲತೆ, ಆರೋಗ್ಯ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಯುವಜನರನ್ನು ಕೇಂದ್ರೀಕರಿಸಿ ಯೋಜನೆಗಳನ್ನು ರೂಪಿಸಬೇಕೆಂಬ ಶಿಫಾರಸುಗಳುಳ್ಳ ‘ಕರ್ನಾಟಕ ಯುವ ನೀತಿ–2022’ರ ಕರಡನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬುಧವಾರ ಪ್ರಕಟಿಸಿದೆ.

ನೂತನ ಯುವ ನೀತಿಯನ್ನು ರೂಪಿಸುವುದಕ್ಕಾಗಿ ಮೈಸೂರಿನ ವಿ– ಲೀಡ್‌ ಸಂಸ್ಥಾಪಕ ಡಾ.ಆರ್‌. ಬಾಲಸುಬ್ರಮಣಿಯಂ ನೇತೃತ್ವದಲ್ಲಿ 2021ರ ಅಕ್ಟೋಬರ್‌ನಲ್ಲಿ 14 ಸದಸ್ಯರ ಸಮಿತಿ ರಚಿಸಲಾಗಿತ್ತು. ಸಮಿತಿಯು ವಿವಿಧ ಹಂತಗಳಲ್ಲಿ ಸಮಾಲೋಚನೆ ನಡೆಸಿ, ಸಿದ್ಧಪಡಿಸಿರುವ ಯುವ ನೀತಿಯ ಕರಡನ್ನು ಇಲಾಖೆಗೆ ಸಲ್ಲಿಸಿತ್ತು. ಅದನ್ನು 2022–2030ರ ಅವಧಿಯಲ್ಲಿ ಅನು ಷ್ಠಾನಕ್ಕೆ ತರಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮುಂದಾಗಿದೆ.

ರಾಜ್ಯದ ಜನಸಂಖ್ಯೆಯಲ್ಲಿ ಯುವ ಜನರ ಪ್ರಮಾಣ, ದುಡಿಯುವ ಜನರಲ್ಲಿ ಅವರ ಪಾಲು, ಶಿಕ್ಷಣ ಪಡೆಯುತ್ತಿರುವ ಯುವಜನರ ಸಂಖ್ಯೆ, ಆರೋಗ್ಯದ ಸಮ ಸ್ಯೆಗಳು ಮತ್ತು ಪರಿಹಾರ, ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು ಮತ್ತಿತರ ಅಂಶಗಳನ್ನು ಆಧರಿಸಿ ನೂತನ ನೀತಿಯನ್ನು ರೂಪಿಸಲಾಗಿದೆ. 2021–22ರಲ್ಲಿ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ 2.11 ಕೋಟಿ (ಶೇಕಡ 29) ಮಂದಿ ಯುವಜನರೇ ಇದ್ದಾರೆ ಎಂಬ ಮಾಹಿತಿ ಕರಡಿನಲ್ಲಿದೆ.

ADVERTISEMENT

ಯುವಜನರು ಶಿಕ್ಷಣದಿಂದ ಹೊರಗುಳಿಯದಂತೆ ಎಚ್ಚರ ವಹಿಸಬೇಕು. ಇದಕ್ಕಾಗಿ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ವಿಶೇಷ ನಿಗಾ ಇರಿಸುವುದು, ಯುವಜನರನ್ನು ವ್ಯಸನಗಳಿಂದ ಮುಕ್ತಗೊಳಿಸಲು ವಿಶೇಷ ಕಾರ್ಯಕ್ರಮ ನಡೆಸುವುದು, ನಿಯಮಿತ ಆರೋಗ್ಯ ತಪಾಸಣೆ ಮತ್ತು ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳಲು ಸೌಲಭ್ಯ ಒದಗಿಸುವುದು, ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ವಿಶೇಷ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಬೇಕೆಂಬ ಶಿಫಾರಸು ಮಾಡಲಾಗಿದೆ.

ಇಲಾಖೆ ಪುನರ್‌ರಚನೆಗೂ ಸಲಹೆ: ಯವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯನ್ನು ಪುನರ್‌ರಚನೆ ಮಾಡಬೇಕು. ಯುವಜನ ಸಬಲೀಕರಣ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಪ್ರತ್ಯೇಕವಾದ ನಿರ್ದೇಶನಾಲಯಗಳನ್ನು ಸ್ಥಾಪಿಸಬೇಕು ಎಂಬ ಸಲಹೆಯನ್ನೂ ಕರಡು ನೀತಿಯಲ್ಲಿ ನೀಡಲಾಗಿದೆ. ಪ್ರತ್ಯೇಕ ಯುವ ಬಜೆಟ್‌ ರೂಪಿಸಬೇಕೆಂಬ ಶಿಫಾರಸನ್ನೂ ಮಾಡಲಾಗಿದೆ.

ಪ್ರಮುಖ ಅಂಶಗಳು

* ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪ್ರತ್ಯೇಕ ಆನ್‌ಲೈನ್‌ ಶಿಕ್ಷಣ ವಿಭಾಗ ಆರಂಭಿಸುವುದು.

* ಉದ್ಯಮಶೀಲತೆ ಪ್ರೋತ್ಸಾಹಿಸಲು ರಾಜ್ಯ ಉದ್ಯಮಶೀಲತಾ ಕೇಂದ್ರ ಸ್ಥಾಪನೆ.

* ಯುವಜನರನ್ನು ಡಿಜಿಟಲ್‌ ವ್ಯಸನದಿಂದ ಮುಕ್ತಗೊಳಿಸಲು ಆಪ್ತಸಲಹೆ.

* ನಾಯಕತ್ವ ರೂಪಿಸಲು ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯಕ್ರಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.