ADVERTISEMENT

ಪರಿಷ್ಕೃತ ಪಠ್ಯ ವಾಪಸ್ ಪಡೆಯಲು ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 12:36 IST
Last Updated 27 ಜೂನ್ 2022, 12:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮರು ಪರಿಷ್ಕರಣೆಗೊಂಡಿರುವ ಪಠ್ಯ ಪುಸ್ತಕಗಳನ್ನು ವಾಪಸ್ ಪಡೆಯಬೇಕು ಎಂದು ರಾಜ್ಯ ಸರ್ಕಾರವನ್ನು ‘ಹಿಂದುಳಿದ, ದಲಿತ ಮಠಾಧೀಶ್ವರರ ಒಕ್ಕೂಟ, ಚಿತ್ರದುರ್ಗ’ ಆಗ್ರಹಿಸಿದೆ.

ಈ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಒಕ್ಕೂಟವು ಪತ್ರ ಬರೆದಿದೆ. ನಿರಂಜನಾನಂದಪುರಿ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿಸೇರಿದಂತೆ ಆರು ಮಂದಿ ಸ್ವಾಮೀಜಿಗಳು ಪತ್ರಕ್ಕೆ ಸಹಿ ಹಾಕಿದ್ದಾರೆ.

ಮರು ಪರಿಷ್ಕರಣೆಗೊಂಡಿರುವ ಪಠ್ಯ ಪುಸ್ತಕಗಳಲ್ಲಿರುವ ಲೋಪಗಳ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

‘ನಾವು ಪಟ್ಟಿ ಮಾಡಿರುವುದು ಸಾಂಕೇತಿಕವಾಗಿ ಕೆಲವು ಮುಖ್ಯಾಂಶಗಳು ಮಾತ್ರ. ಮರು ಪರಿಷ್ಕರಣೆಯು ತುಂಬಾ ಅಸಮತೋಲನಕ್ಕೆ ಕಾರಣವಾಗಿರುವುದು ಇದರಿಂದ ಗೊತ್ತಾಗುತ್ತದೆ. ಹಿಂದುಳಿದ ಮತ್ತು ದಲಿತ ಚೇತನಗಳಿಗೆ ಅನ್ಯಾಯ ಮಾಡಲಾಗಿದೆ. ಸಂವಿಧಾನಾತ್ಮಕ ಸಾಮಾಜಿಕ ನ್ಯಾಯವನ್ನು ಕಡೆಗಣಿಸಲಾಗಿದೆ. ಮರು ಪರಿಷ್ಕರಣೆ ಆಕ್ಷೇಪ ಎತ್ತಿದವರ ಮೇಲೆ ಪ್ರತ್ಯಾರೋಪ ಮಾಡುವ ಬದಲು ಪ್ರಜಾಸತ್ತಾತ್ಮಕವಾಗಿ ಪರ್ಯಾಲೋಚನೆ ಮಾಡಬೇಕಾಗಿದೆ. ನಾವಿಲ್ಲಿ ಇಡಿಯಾಗಿ ಕೈಬಿಟ್ಟ ಅಂಶಗಳನ್ನು ಮಾತ್ರ ಹೇಳಿದ್ದೇವೆ. ಬಿಡಿಬಿಡಿಯಾಗಿ ಸಾಕಷ್ಟು ಆಕ್ಷೇಪಗಳು ಇರುತ್ತವೆ. ಒಟ್ಟಾರೆ ಶಿಕ್ಷಣ ಕ್ಷೇತ್ರದಲ್ಲಿ ಎಂದೂ ಇಲ್ಲದ ವಿವಾದ ಉಂಟಾಗಿ ಕೆಟ್ಟ ಪರಿಣಾಮವನ್ನು ಬೀರುತ್ತಿದೆ. ಆದ್ದರಿಂದ ಮಾನ್ಯ ಮುಖ್ಯ ಮಂತ್ರಿಯವರು ಕೂಡಲೇ ಮಧ್ಯ ಪ್ರವೇಶಿಸಬೇಕು. ಮರುಪರಿಷ್ಕರಣೆ ಪಠ್ಯವನ್ನು ತಡೆಹಿಡಿಯಬೇಕು. ಮರುಪರಿಷ್ಕರಣೆಯನ್ನು ವಿರೋಧ ಮಾಡುತ್ತಿರುವವರ ಅಭಿಪ್ರಾಯವನ್ನು ಕೂಡ ಕೇಳಿ ವಿವಾದವನ್ನು ಸೂಕ್ತವಾಗಿ ಬಗೆಹರಿಸಬೇಕು ಇದು ನಮ್ಮ ಕಳಕಳಿಯ ಮನವಿ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

‘ಹಿಂದುಳಿದ, ದಲಿತ ಮಠಾಧೀಶ್ವರರ ಒಕ್ಕೂಟ, ಚಿತ್ರದುರ್ಗ’ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.