ADVERTISEMENT

‘ಟಿಪ್ಪು ಪಾಠ ತೆಗೆದರೆ ಇತಿಹಾಸಕ್ಕೆ ಮೋಸ’

ಇತಿಹಾಸ ತಜ್ಞೆ ಡಾ.ವಸುಂಧರಾ ಫಿಲಿಯೋಜಾ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 19:49 IST
Last Updated 11 ನವೆಂಬರ್ 2019, 19:49 IST
ಕರ್ನಾಟಕ ಇತಿಹಾಸ ಅಕಾಡೆಮಿಯು ಇತಿಹಾಸ ತಜ್ಞೆ ಡಾ.ವಸುಂಧರಾ ಫಿಲಿಯೋಜಾ ಅವರಿಗೆ ಮೈಸೂರಿನಲ್ಲಿ ಸೋಮವಾರ ‘ಇತಿಹಾಸ ಸಂಸ್ಕೃತಿಶ್ರೀ’ ಪ್ರಶಸ್ತಿ ಹಾಗೂ ₹ 1 ಲಕ್ಷ ನಗದು ನೀಡಿ ಗೌರವಿಸಿತು. ವಸುಂಧರಾ ಪತಿ ಫಿಲಿಯೋಜಾ, ಅಕಾಡೆಮಿ ಅಧ್ಯಕ್ಷ ಡಾ.ದೇವರಕೊಂಡಾರೆಡ್ಡಿ ಇದ್ದಾರೆ
ಕರ್ನಾಟಕ ಇತಿಹಾಸ ಅಕಾಡೆಮಿಯು ಇತಿಹಾಸ ತಜ್ಞೆ ಡಾ.ವಸುಂಧರಾ ಫಿಲಿಯೋಜಾ ಅವರಿಗೆ ಮೈಸೂರಿನಲ್ಲಿ ಸೋಮವಾರ ‘ಇತಿಹಾಸ ಸಂಸ್ಕೃತಿಶ್ರೀ’ ಪ್ರಶಸ್ತಿ ಹಾಗೂ ₹ 1 ಲಕ್ಷ ನಗದು ನೀಡಿ ಗೌರವಿಸಿತು. ವಸುಂಧರಾ ಪತಿ ಫಿಲಿಯೋಜಾ, ಅಕಾಡೆಮಿ ಅಧ್ಯಕ್ಷ ಡಾ.ದೇವರಕೊಂಡಾರೆಡ್ಡಿ ಇದ್ದಾರೆ   

ಮೈಸೂರು: ‘ಪಠ್ಯದಿಂದ ಟಿಪ್ಪು ಪಾಠ ತೆಗೆಯುವುದು ಇತಿಹಾಸಕ್ಕೆ ಮೋಸ ಮಾಡಿದಂತೆ’ ಎಂದು ಇತಿಹಾಸ ತಜ್ಞೆ ಡಾ.ವಸುಂಧರಾ ಫಿಲಿಯೋಜಾ ತಿಳಿಸಿದರು.

ಕರ್ನಾಟಕ ಇತಿಹಾಸ ಅಕಾಡೆಮಿಯು ಮೈಸೂರಿನ ಸ್ವಗೃಹದಲ್ಲಿ ಸೋಮವಾರ ನೀಡಿದ ‘ಇತಿಹಾಸ ಸಂಸ್ಕೃತಿಶ್ರೀ’ ಪ್ರಶಸ್ತಿ ಹಾಗೂ ₹ 1 ಲಕ್ಷ ನಗದು ಸ್ವೀಕರಿಸಿ ಮಾತನಾಡಿದರು.

‘ಹಂಪಿಯನ್ನು 1790ರ ಆಸುಪಾಸಿನಲ್ಲಿ ಬ್ರಿಟಿಷರು ಯಾವ ರಾಜ್ಯಕ್ಕೆ ಸೇರ್ಪಡೆಗೊಳಿಸಬೇಕು ಎಂಬ ವಿಷಯ ಪ್ರಸ್ತಾಪಿಸಿದಾಗ, ಮರಾಠಿಗರು ಮಹಾರಾಷ್ಟ್ರಕ್ಕೆ ಸೇರ್ಪಡೆಗೊಳಿಸುವಂತೆ, ಹೈದರಾಬಾದಿನ ನಿಜಾಮರು ತಮ್ಮ ರಾಜ್ಯಕ್ಕೆ ಸೇರ್ಪಡೆಗೊಳಿಸಿ ಎಂದು ಪ್ರಬಲ ಹಕ್ಕೊತ್ತಾಯ ಮಂಡಿಸಿದ್ದರು. ಆಗ ಶ್ರೀರಂಗಪಟ್ಟಣದ ಅರಸನಾಗಿದ್ದ ಟಿಪ್ಪು ಸುಲ್ತಾನ್, ಹಂಪಿ ಕರ್ಣಾಟಕ ರಾಜ್ಯಕ್ಕೆ ಸೇರಬೇಕು ಎಂದು ಪ್ರಬಲ ಹಕ್ಕೊತ್ತಾಯದ ಜತೆಗೆ ಹಟ ಹಿಡಿದ ಪರಿಣಾಮ ಶತಮಾನಗಳಿಂದಲೂ ಹಂಪಿ ಕರ್ನಾಟಕದಲ್ಲೇ ಉಳಿದುಕೊಳ್ಳಲು ಸಾಧ್ಯವಾಯಿತು. ಇದನ್ನು ಬ್ರಿಟಿಷ್ ಲೇಖಕರು ತಮ್ಮ ಕೃತಿಗಳಲ್ಲಿ ದಾಖಲಿಸಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಇತಿಹಾಸ ಪುನರ್‌ ರಚಿಸಿ: ‘ಇತಿಹಾಸವನ್ನು ಇತಿಹಾಸಕಾರರು ಪುನರ್‌ ರಚಿಸಬೇಕಿದೆ’ ಎಂದೂ ಹೇಳಿದರು.

‘ಟಿಪ್ಪು ಅರಸನಾಗುವ ಮುನ್ನ ಶ್ರೀರಂಗಪಟ್ಟಣದಲ್ಲಿ ಬ್ರಿಟಿಷರು ಮೆರೆದ ಅಟ್ಟಹಾಸ, ದೌರ್ಜನ್ಯಕ್ಕೆ ಲೆಕ್ಕವಿಲ್ಲ. ಇದನ್ನು ಕೊನೆಗಾಣಿಸಿದವ ಟಿಪ್ಪು. ಆದರೆ, ಎಲ್ಲಿಯೂ ಬ್ರಿಟಿಷರ ಕ್ರೂರತೆ ದಾಖಲಾಗಿಲ್ಲ. ಟಿಪ್ಪು ಅನೇಕ ಒಳ್ಳೆಯ ಕೆಲಸ ಮಾಡಿದ್ದಾನೆ, ಕೆಟ್ಟದ್ದನ್ನೂ ಮಾಡಿದ್ದಾನೆ. ಈ ಎರಡನ್ನೂ ದಾಖಲಿಸುವುದು, ನೈಜ ಇತಿಹಾಸವನ್ನು ಮುಂದಿನ ಪೀಳಿಗೆಗೆ ನೀಡುವುದು ಇತಿಹಾಸಕಾರರ ಆದ್ಯ ಕರ್ತವ್ಯವಾಗಬೇಕಿದೆ’ ಎಂದು ನುಡಿದರು.

ಅಕಾಡೆಮಿ ಅಧ್ಯಕ್ಷ ಡಾ.ದೇವರಕೊಂಡಾರೆಡ್ಡಿ, ‘ಇತಿಹಾಸದ ಪುನರ್‌ ರಚನೆ ನಡೆಯಲೇಬೇಕು. ಇದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ರಚನೆ ಸಂದರ್ಭ ಯಾವ ‘ಇಸಂ’ ಸೇರುತ್ತದೆ ಎಂಬುದೇ ಗೊತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.