ADVERTISEMENT

ಮತಾಂತರಕ್ಕಾಗಿಯೇ ಮದುವೆ ಆಗುವುದನ್ನು ತಡೆಯಲು ಶೀಘ್ರವೇ ಕಾನೂನು: ಸಚಿವ ಸಿ.ಟಿ. ರವಿ

ಉತ್ತರಪ್ರದೇಶ, ಹರಿಯಾಣ ಮಾದರಿಯಲ್ಲಿ ಹೆಜ್ಜೆ: ಸಚಿವ ಸಿ.ಟಿ. ರವಿ

ಎಸ್.ರವಿಪ್ರಕಾಶ್
Published 3 ನವೆಂಬರ್ 2020, 19:22 IST
Last Updated 3 ನವೆಂಬರ್ 2020, 19:22 IST
 ಸಚಿವ ಸಿ.ಟಿ. ರವಿ
ಸಚಿವ ಸಿ.ಟಿ. ರವಿ   

ಬೆಂಗಳೂರು: ‘ರಾಜ್ಯದಲ್ಲಿ ‘ಲವ್‌ ಜಿಹಾದ್’ ಮಟ್ಟ ಹಾಕಲು ಮತ್ತು ಮತಾಂತರಕ್ಕಾಗಿಯೇ ಮದುವೆ ಆಗುವುದನ್ನು ತಡೆಯಲು ಶೀಘ್ರವೇ ಕಠಿಣ ಕಾನೂನು ತರಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ತಿಳಿಸಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಅವರು, ‘ಲವ್‌ ಜಿಹಾದ್‌ ತಡೆಗೆ ನಮ್ಮ ರಾಜ್ಯದಲ್ಲೂ ಕಾನೂನು ತರುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಸಚಿವ ರವಿ, ‘ಕೇವಲ ಮದುವೆಗಾಗಿ ಮತಾಂತರ ಆಗುವಂತಿಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಈ ತೀರ್ಪನ್ನು ಆಧರಿಸಿ ಉತ್ತರಪ್ರದೇಶ ಮತ್ತು ಹರಿಯಾಣ ರಾಜ್ಯಗಳೂಕಾನೂನು ರೂಪಿಸಲು ಮುಂದಾಗಿವೆ. ‘ಜಿಹಾದಿ ಶಕ್ತಿಗಳು ನಮ್ಮ ಸಹೋದರಿಯರ ಘನತೆ, ಗೌರವಗಳನ್ನು ಹರಣ ಮಾಡುವುದನ್ನು ಸುಮ್ಮನೆ ನೋಡುತ್ತಾ ಕೈಕಟ್ಟಿ ಕೂರಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು.

‘ಜಿಹಾದ್‌ ಮಾದರಿಯಲ್ಲಿ ಮತಾಂತರದಂತಹ ಕೃತ್ಯದಲ್ಲಿ ತೊಡಗಿದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ನೆರೆಯ ಕೇರಳದಲ್ಲಿ ಲವ್‌ ಜಿಹಾದ್‌ ಮೂಲಕ ಸಾಕಷ್ಟು ಹೆಣ್ಣು ಮಕ್ಕಳನ್ನು ಸಿರಿಯಾ ಮುಂತಾದ ಕಡೆಗೆ ಸಾಗಿಸಿದ್ದು, ಎಲ್ಲರಿಗೂ ಗೊತ್ತೇ ಇದೆ’ ಎಂದು ಹೇಳಿದರು.

ದೊಡ್ಡ ಮಟ್ಟದಲ್ಲಿ ‘ಲವ್ ಜಿಹಾದ್‌’: ‘ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ‘ಲವ್‌ ಜಿಹಾದ್‌’ ನಡೆಯುತ್ತಿದೆ. ಈ ಬಗ್ಗೆ ಸಾಕಷ್ಟು ಕುಟುಂಬಗಳು ನೋವು ಅನುಭವಿಸಿ ಮಾತನಾಡದ ಸ್ಥಿತಿ ತಲುಪಿ, ಅಸಹಾಯಕವಾಗಿವೆ. ಅವರ ಕಣ್ಣಲ್ಲಿ ನೀರಲ್ಲ, ರಕ್ತ ಬರುತ್ತಿದೆ. ಇದೊಂದು ದೊಡ್ಡ ಮೋಸದ ಜಾಲ. ವ್ಯಕ್ತಿಗತ ಜಾಗೃತಿ ಇಲ್ಲದಿದ್ದಾಗ ಕಾನೂನಿನ ಮೂಲಕ ಸರ್ಕಾರವೇ ಇಂತಹ ವಂಚನೆಗಳನ್ನು ತಡೆಯಬೇಕಾಗುತ್ತದೆ. ಕಣ್ಣಿಗೆ ಕಾಣುವಂತೆ ಮೋಸ ನಡೆಯುತ್ತಿದ್ದರೂ ನೋಡಿಕೊಂಡು ನಾವು ಸುಮ್ಮನೆ ಇರಲು ಆಗುತ್ತದೆಯೇ’ ಎಂದು ಅವರು ಪ್ರಶ್ನಿಸಿದರು.

‘ಮದುವೆಯಾಗಿ ಮತಾಂತರ ಮಾಡುವುದು ಅಥವಾ ಮತಾಂತರ ಕ್ಕಾಗಿ ಮದುವೆ ಆಗುವುದು ತಪ್ಪು ಎಂದು ನ್ಯಾಯಾಲಯವೇ ಹೇಳಿದೆ. ಹೀಗಾಗಿ ನಮ್ಮ ರಾಜ್ಯದಲ್ಲೂ ಕಾನೂನು ರೂಪಿಸುವ ಅಗತ್ಯವಿದೆ. ದಕ್ಷಿಣ ಕನ್ನಡ, ಮೈಸೂರು, ಉತ್ತರ ಕರ್ನಾಟಕ ಮುಂತಾದ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಕಾನೂನು ಮಾಡುವ ಸಂಬಂಧ ಸೂಕ್ತ ವೇದಿಕೆಯಲ್ಲಿ ಪ್ರಸ್ತಾಪಿಸುತ್ತೇನೆ’ ಎಂದು ರವಿ ಹೇಳಿದರು.

ಅಧಿಕಾರ ಅನುಭವಿಸುವುದಕ್ಕೆ ಬಂದವರಲ್ಲ

‘ನಮ್ಮಲ್ಲಿ ಬಹಳ ಜನ ಅಧಿಕಾರ ಮುಗಿಸಿಕೊಂಡು ಹೋಗಲಿಕ್ಕೆ ಬಂದಿದ್ದೇವೆ ಎಂದುಕೊಂಡ ಹಾಗಿದೆ. ಆದರೆ, ಅಧಿಕಾರದ ಕುರ್ಚಿಯಲ್ಲಿ ಕುಳಿತು ಹೋಗಲು ನಾವು ಬಂದವರಲ್ಲ’ ಎಂದು ಸಿ.ಟಿ. ರವಿ ಹೇಳಿದರು.

‘ಲವ್‌ ಜಿಹಾದ್ ತಡೆಗೆ ಕಾನೂನು ತರುವ ಬಗ್ಗೆನಮ್ಮ ಸರ್ಕಾರದಲ್ಲಿ ಇನ್ನೂ ಚರ್ಚೆ ಆರಂಭವಾಗಿಲ್ಲ. ನಾನೇ ಈ ಚರ್ಚೆಗೆ ಚಾಲನೆ ನೀಡಿದ್ದೇನೆ. ನಾನು ಪಕ್ಷದ ವರಿಷ್ಠರಿಗೆ ಒಂದು ಮಾತನ್ನು ಕೇಳಿದ್ದೇನೆ. ನಾವು ಅಧಿಕಾರ ಹಿಡಿಯುವ ಉದ್ದೇಶವೇನು? ನಮ್ಮ ಅಲ್ಪಾವಧಿಯ ಗುರಿ ಏನು? ದೀರ್ಘಾವಧಿಯ ಗುರಿ ಏನು? ಬಡತನ ನಿವಾರಣೆ ಯಾವ ರೀತಿ ಇರಬೇಕು. ನಮ್ಮ ಐಡಿಯಾಲಜಿಗೆ ಸಂಬಂಧಿಸಿದಂತೆ ನಾವು ಹೇಗೆ ಇರಬೇಕು. ಕೇವಲ ಅಧಿಕಾರಕ್ಕೆ ಮಾತ್ರ ಇರುವುದಾದರೆ ನಮ್ಮ ಪಕ್ಷದ ಅಗತ್ಯವೇನಿದೆ ಎಂದು ಅವರಿಗೂ ಪ್ರಶ್ನಿಸಿ ದ್ದೇನೆ’ ಎಂದು ತಮ್ಮ ಪಕ್ಷದ ನಾಯಕರ ವಿರುದ್ಧವೂ ಅವರು ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.