ADVERTISEMENT

ಸಾರಿಗೆ ನೌಕರರ ಸಮಸ್ಯೆಗೆ ಬಿಜೆಪಿ ಹೊಣೆ: ಸಚಿವ ರಾಮಲಿಂಗಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 14:40 IST
Last Updated 18 ಡಿಸೆಂಬರ್ 2025, 14:40 IST
<div class="paragraphs"><p>&nbsp;ಸಚಿವ ರಾಮಲಿಂಗಾರೆಡ್ಡಿ </p></div>

 ಸಚಿವ ರಾಮಲಿಂಗಾರೆಡ್ಡಿ

   

ಪ್ರಜಾವಾಣಿ ಚಿತ್ರ/ ರಂಜು ಪಿ

ಸುವರ್ಣ ವಿಧಾನಸೌಧ (ಬೆಳಗಾವಿ): ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರದ ನಿರ್ಧಾರದಿಂದಾಗಿ ಸಾರಿಗೆ ನಿಗಮಗಳ ನೌಕರರಿಗೆ ನೀಡಬೇಕಿದ್ದ 38 ತಿಂಗಳ ಹೆಚ್ಚುವರಿ ವೇತನ ಬಾಕಿ ಪಾವತಿಸಲು ಸಮಸ್ಯೆಯಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ADVERTISEMENT

ಶೂನ್ಯ ವೇಳೆಯಲ್ಲಿ ಬಿಜೆಪಿಯ ಸಿ.ಟಿ.ರವಿ ಅವರ ಪ್ರಸ್ತಾವಕ್ಕೆ ಉತ್ತರ ನೀಡಿದ ಅವರು, ಶ್ರೀನಿವಾಸಮೂರ್ತಿ ನೇತೃತ್ವದ ಸಮಿತಿಯ ಶಿಫಾರಸು ಆಧಾರದಲ್ಲಿ ಹಿಂದಿನ ಬಿಜೆಪಿ ಸರ್ಕಾರ 2023ರ ಮಾರ್ಚ್‌ 1ರಿಂದ ಜಾರಿಗೆ ಬರುವಂತೆ ವೇತನ ಪರಿಷ್ಕರಣೆ ಅಧಿಸೂಚನೆ ಹೊರಡಿಸಿತ್ತು. ಮೂಲವೇತನದ ಶೇ 15ರಷ್ಟು ಪರಿಷ್ಕರಣೆ ಮಾಡಲಾಗಿತ್ತು. ಆದರೆ, ಹೆಚ್ಚುವರಿ ವೇತನ ಬಾಕಿ ಪಾವತಿಸಿರಲಿಲ್ಲ. ಹಿಂದಿನ ವೇತನ ಬಾಕಿ ಕುರಿತು ಅಂದು ಸ್ಪಷ್ಟ ಆದೇಶ ಹೊರಡಿಸದ ಕಾರಣ ಇಂದಿಗೂ ಸಮಸ್ಯೆ ಬಗೆಹರಿದಿಲ್ಲ ಎಂದರು.

ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಅಂದು ಸ್ಪಷ್ಟ ನಿರ್ಧಾರ ತೆಗೆದುಕೊಂಡಿದ್ದರೆ ಸಮಸ್ಯೆ ಮುಂದುವರಿಯುತ್ತಿರಲಿಲ್ಲ. ಆದರೂ ನಾಲ್ಕೂ ಸಾರಿಗೆ ನಿಗಮಗಳ ನೌಕರರು ಮುಷ್ಕರ ನಡೆಸಲು ಆಸ್ಪದ ನೀಡದಂತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ನೌಕರರ ಪರ ರಾಜ್ಯ ಸರ್ಕಾರ ನಿಲ್ಲಲಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.