ADVERTISEMENT

Strike Suspension | ಸಾರಿಗೆ ಮುಷ್ಕರಕ್ಕೆ ಎರಡು ದಿನ ತಡೆ

ಮುಷ್ಕರ ಮುಂದುವರಿಸಿದರೆ ಎಸ್ಮಾದಡಿ ಬಂಧಿಸುವಂತೆ ಸರ್ಕಾರಕ್ಕೆ ಸೂಚನೆ: ಹೈಕೋರ್ಟ್‌ ತೀರ್ಪು ಆಧರಿಸಿ ಮುಂದಿನ ಹೆಜ್ಜೆ– ಜಂಟಿ ಕ್ರಿಯಾಸಮಿತಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 16:15 IST
Last Updated 5 ಆಗಸ್ಟ್ 2025, 16:15 IST
<div class="paragraphs"><p>ಸಾರಿಗೆ ಮುಷ್ಕರ </p></div>

ಸಾರಿಗೆ ಮುಷ್ಕರ

   

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಶುರುವಾಗಿದ್ದ ಸಾರಿಗೆ ನಿಗಮಗಳ ನೌಕರರ ಮುಷ್ಕರಕ್ಕೆ ಎರಡು ದಿನ ತಡೆ ಬಿದ್ದಿದೆ.

‘ಮುಷ್ಕರ ನಡೆಸಿದರೆ ಬಂಧಿಸಿ’ ಎಂದು ಹೈಕೋರ್ಟ್ ಸರ್ಕಾರ ಸೂಚಿಸಿತ್ತು. ಗುರುವಾರ(ಆ.7) ಮತ್ತೆ ಈ ವಿಷಯ ಕೋರ್ಟ್‌ ಮುಂದೆ ಬರಲಿದ್ದು, ಅಲ್ಲಿಯವರೆಗೆ ಮುಷ್ಕರ ನಡೆಸದಿರಲು ನೌಕರರ ಸಂಘಟನೆಗಳು ನಿರ್ಧರಿಸಿವೆ.

ADVERTISEMENT

ವೇತನ ಪರಿಷ್ಕರಣೆ, 38 ತಿಂಗಳ ಹೆಚ್ಚುವರಿ ವೇತನ ಬಾಕಿ ಪಾವತಿ ಸೇರಿದಂತೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮಂಗಳವಾರದಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿತ್ತು. ಈ ಬಗ್ಗೆ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ವಿಭಾಗೀಯ ಪೀಠ, ಒಂದು ದಿನ ತಡೆ ನೀಡಿ ಆದೇಶಿಸಿತ್ತು. ಹಾಗಿದ್ದರೂ ಕೆಲವು ನಿಗಮಗಳ ನೌಕರರು ಮುಷ್ಕರ ಮುಂದುವರಿಸಿದ್ದರು. ಹೀಗಾಗಿ, ದೂರ ಪ್ರಯಾಣದ ಕೆಎಸ್ಆರ್‌ಟಿಸಿ ಬಸ್‌ಗಳು ಮಂಗಳವಾರ ಬೆಳಿಗ್ಗೆ ರಸ್ತೆಗಿಳಿಯಲಿಲ್ಲ. ಮುಷ್ಕರ ಆರಂಭವಾದ ಕೆಲ ಗಂಟೆಗಳಲ್ಲೇ ಹೈಕೋರ್ಟ್‌ ಚಾಟಿ ಬೀಸಿತು. ಹೀಗಾಗಿ, ಮಧ್ಯಾಹ್ನದ ವೇಳೆಗೆ ನೌಕರರು ಕೆಲಸಕ್ಕೆ ಮರಳಿದರು. ರಾತ್ರಿ ಹೊತ್ತಿಗೆ ವಿವಿಧ ನಿಗಮಗಳ ಶೇಕಡ 80.04ರಷ್ಟು ಬಸ್‌ಗಳು ರಸ್ತೆಗಿಳಿದವು.

ಬಿಎಂಟಿಸಿ ಬಿಟ್ಟು, ಉಳಿದ ನಿಗಮಗಳ ವ್ಯಾಪ್ತಿಯಲ್ಲಿ ನಡೆದ ಮುಷ್ಕರ ಮಧ್ಯಾಹ್ನದವರೆಗೆ ಭಾಗಶಃ ಯಶಸ್ವಿಯಾಯಿತು. ಶೇ 40ರಷ್ಟು ಬಸ್‌ ಸೇವೆ ಸ್ಥಗಿತಗೊಂಡಿರೆ, ಶೇ 60ರಷ್ಟು ಬಸ್‌ಗಳು ಸಂಚರಿಸಿದವು. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕ, ಮೈಸೂರು ಹಾಗೂ ಬೆಂಗಳೂರು ಭಾಗದಲ್ಲಿ ಅಂತರ ಜಿಲ್ಲಾ ಪ್ರಯಾಣದ ಬಸ್‌ಗಳ ಸಂಚಾರ ಬಹುತೇಕ ಸ್ಥಗಿತಗೊಂಡಿದ್ದವು. ಆದರೆ, ಆಯಾ ಜಿಲ್ಲೆಯ ಒಳಗೆ ಬಸ್‌ಗಳ ಸಂಚಾರ ಸಹಜವಾಗಿತ್ತು. ಕಲಬುರಗಿ, ದಾವಣಗೆರೆ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಬಸ್‌ ಸಂಚಾರ ಬಹುತೇಕ ಸ್ಥಗಿತಗೊಂಡಿತ್ತು. ಉಳಿದ ಕೆಲ ಜಿಲ್ಲೆಗಳಲ್ಲಿ ಭಾಗಶಃ, ಕೆಲ ಜಿಲ್ಲೆಗಳಲ್ಲಿ ಬಸ್‌ ಸಂಚಾರ ನಿತ್ಯದಂತೆ ಇದ್ದವು. 

ಕೊಪ್ಪಳ, ಹುಬ್ಬಳ್ಳಿ, ಧಾರವಾಡ, ಕೋಲಾರ ಜಿಲ್ಲೆಯ ಕೆಲವೆಡೆ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಕೆಲ ಬಸ್‌ಗಳ ಗಾಜುಗಳನ್ನು ಒಡೆದು ಹಾಕಲಾಗಿದೆ. ಹಲವು ಮಾರ್ಗಗಳಲ್ಲಿ ಪೊಲೀಸ್‌ ಗಸ್ತು ವಾಹನಗಳನ್ನು ನಿಯೋಜಿಸಲಾಗಿತ್ತು. ಬಸ್‌ಗಳ ಸಂಚಾರದ ಮೇಲೆ ನಿಗಾ ವಹಿಸಲಾಗಿತ್ತು.

ಮುಷ್ಕರದ ಮಾಹಿತಿ ಇಲ್ಲದೇ ನಿಲ್ದಾಣಗಳಿಗೆ ಬಂದಿದ್ದ ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ಬಸ್‌ಗಳಿಲ್ಲದೆ ತೊಂದರೆ ಅನುಭವಿಸಿದರು. ಕೆಲವರು ಅಲ್ಲೇ ವಿಶ್ರಾಂತಿ ಪಡೆದರೆ, ಕೆಲವರು ನಿದ್ರೆಗೆ ಜಾರಿದ್ದರು. ಕೆಲ ಡಿಪೊಗಳಲ್ಲಿ ಬಸ್‌ಗಳು ಸಾಲುಗಟ್ಟಿ ನಿಂತಿದ್ದವು. ಮುಂಗಡ ಸೀಟು ಕಾಯ್ದಿರಿಸಿದ್ದ ಪ್ರಯಾಣಿಕರು ಮುಂಗಡ ಕಾಯ್ದಿರಿಸುವಿಕೆ ವಿಭಾಗದ ಸಿಬ್ಬಂದಿ ಜತೆ ವಾಗ್ವಾದ ನಡೆಸಿದರು‌. ಬುಕ್ಕಿಂಗ್ ಹಣ ವಾಪಸ್ ಪಡೆಯಲು ಕೆಲವೆಡೆ ಜನಸಂದಣಿ ಏರ್ಪಟ್ಟಿತ್ತು.

ಕೊಪ್ಪಳ ವಿಶ್ವವಿದ್ಯಾಲಯ, ತುಮಕೂರು ವಿಶ್ವವಿದ್ಯಾಲಯಗಳಲ್ಲಿ ಮಂಗಳವಾರ ನಡೆಯಬೇಕಿದ್ದ ಸ್ನಾತಕ ಹಾಗೂ ಸ್ನಾತಕೋತ್ತರ ಪರೀಕ್ಷೆಗಳನ್ನು ಸಂಚಾರ ವ್ಯತ್ಯಯದ ಕಾರಣ ಮುಂದೂಡಲಾಯಿತು.

ನಮ್ಮ ವಿರುದ್ಧ ಆರೋಪ ಮಾಡುವ ಮೊದಲು, ಸಾರಿಗೆ ಸಚಿವರಾಗಿ ನೀವು ಮತ್ತು ನಿಮ್ಮ ಸರ್ಕಾರ ರಾಜ್ಯ ರಸ್ತೆ ಸಾರಿಗೆ ನೌಕರರಿಗೆ ಮಾಡಿರುವ ಮೋಸ, ದ್ರೋಹದ ಇತಿಹಾಸವನ್ನು ನೆನಪು ಮಾಡಿಕೊಳ್ಳಿ
ಸಿದ್ದರಾಮಯ್ಯ, ಮುಖ್ಯಮಂತ್ರಿ 
ಸಾರಿಗೆ ಸಂಸ್ಥೆಗಳು ಹಿಂದೆಂದೂ ಕೇಳರಿಯದ ರೀತಿಯಲ್ಲಿ ಲಾಭದಲ್ಲಿವೆ ಎಂದು ಸುಳ್ಳು ಹೇಳಿ, ಪುಟಗಟ್ಟಲೆ ಜಾಹೀರಾತು ಕೊಟ್ಟು ಬಿಟ್ಟಿ ಪ್ರಚಾರ ಪಡೆದಿದ್ದೇ ಸಿದ್ದರಾಮಯ್ಯನವರ ಏಕೈಕ ಸಾಧನೆ
ಆರ್. ಅಶೋಕ, ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.