ಸಾರಿಗೆ ಇಲಾಖೆ
ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ಇಲಾಖೆ, ನಿಗಮ, ಮಂಡಳಿ, ನಗರಸಭೆ, ಸರ್ಕಾರದ ಇತರೆ ಅಧೀನದ ಸಂಸ್ಥೆಗಳಿಗೆ ಸೇರಿರುವ ನೋಂದಣಿಯಾಗಿ 15 ವರ್ಷವಾದ ವಾಹನಗಳನ್ನು ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯ (ಆರ್‌ವಿಎಸ್‌ಎಫ್) ಕೇಂದ್ರಗಳಲ್ಲಿಯೇ ಕಡ್ಡಾಯವಾಗಿ ನಾಶಪಡಿಸಲು ಸಾರಿಗೆ ಇಲಾಖೆ ಆದೇಶಿಸಿದೆ.
ಮೋಟಾರು ವಾಹನಗಳ ಕಾಯ್ದೆ–1988ರ ಕಲಂ 64 (ಪಿ)ರಂತೆ ರಾಜ್ಯದಲ್ಲಿ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ನೀತಿ– ಕರ್ನಾಟಕ– 2022 ಅನ್ನು ಜಾರಿಗೊಳಿಸಲಾಗಿದೆ. ಅದರಂತೆ ಸರ್ಕಾರದ 500 ವಾಹನಗಳನ್ನು ಆದ್ಯತೆ ಮತ್ತು ಉಪಯೋಗದ ಆಧಾರದ ಮೇಲೆ ಹಂತಹಂತವಾಗಿ ನಾಶಪಡಿಸಲು ಅನುಮೋದನೆ ನೀಡಲಾಗಿದೆ.
ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದಿಂದ ಪ್ರೋತ್ಸಾಹಧನ ಬಿಡುಗಡೆಯಾಗಬೇಕಾದರೆ 15 ವರ್ಷಗಳು ಮೀರಿದ ಎಲ್ಲ ಸರ್ಕಾರಿ ವಾಹನಗಳನ್ನು ಆರ್‌ವಿಎಸ್‌ಎಫ್‌ನಲ್ಲಿಯೇ ನಾಶಪಡಿಸಬೇಕು. ಆದ್ದರಿಂದ, ಖಾಸಗಿ ಕೇಂದ್ರಗಳಲ್ಲಿ ವಾಹನಗಳನ್ನು ನಾಶಪಡಿಸದೆ, ರಾಜ್ಯದಲ್ಲಿ ಸ್ಥಾಪಿತವಾಗಿರುವ ನೋಂದಾಯಿತ ಆರ್‌ವಿಎಸ್‌ಎಫ್ ಕೇಂದ್ರಗಳಲ್ಲಿಯೇ ವಾಹನಗಳನ್ನು ನಾಶಪಡಿಸಲು ಆದೇಶಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.