ADVERTISEMENT

ಸಭಾಪತಿ ಆಯ್ಕೆ ನಾಳೆ: ಹೊರಟ್ಟಿಗೆ ಮತ್ತೆ ಪಟ್ಟ?

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2022, 21:00 IST
Last Updated 19 ಡಿಸೆಂಬರ್ 2022, 21:00 IST
   

ಬೆಳಗಾವಿ (ಸುವರ್ಣ ವಿಧಾನಸೌಧ): ವಿಧಾನ ಪರಿಷತ್‌ ಸಭಾಪತಿ ಆಯ್ಕೆಗೆ ಇದೇ 21ರಂದು ಚುನಾವಣೆ ನಡೆಯಲಿದ್ದು, ಬಸವರಾಜ ಹೊರಟ್ಟಿ ಅವರೇ ಆಡಳಿತಾರೂಢ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗುವುದು ನಿಶ್ಚಿತವಾಗಿದೆ.

ಪರಿಷತ್‌ನಲ್ಲಿ ಒಟ್ಟು 75 ಸ್ಥಾನಗಳ ಪೈಕಿ, ಆಡಳಿತಾರೂಢ ಬಿಜೆಪಿ 40 (ಹಂಗಾಮಿ ಸಭಾಪತಿ ಸೇರಿ), ವಿರೋಧ ಪಕ್ಷ ಕಾಂಗ್ರೆಸ್ 26 ಹಾಗೂ ಜೆಡಿಎಸ್ 8,ಪಕ್ಷೇತರ ಒಬ್ಬ ಸದಸ್ಯರು ಇದ್ದಾರೆ. ಸಭಾಪತಿಯಾಗಲು 38 ಮತಗಳ ಪಡೆಯಬೇಕು. ಬಿಜೆಪಿ ಸ್ಪಷ್ಟ ಬಹುಮತ ಹೊಂದಿರುವುದರಿಂದ ಹೊರಟ್ಟಿ ಆಯ್ಕೆ ಸುಗಮವಾಗಿದೆ.

ಜೆಡಿಎಸ್‌ನಿಂದ ಪರಿಷತ್‌ ಸದಸ್ಯರಾಗಿದ್ದ ವೇಳೆ ಬಿಜೆಪಿ ಬೆಂಬಲ ಪಡೆದಿದ್ದ ಹೊರಟ್ಟಿ ಸಭಾಪತಿ ಸ್ಥಾನ ಅಲಂಕರಿಸಿದ್ದರು. ಆ ಬಳಿಕ ಚುನಾವಣೆ ಎದುರಾದಾಗ ಬಿಜೆಪಿ ನಾಯಕರ ಆಹ್ವಾನದ ಮೇರೆ ಜೆಡಿಎಸ್‌ ತೊರೆದು ಬಿಜೆಪಿ ಸೇರಿದ್ದರು. ಬಸವರಾಜ ಹೊರಟ್ಟಿ ರಾಜೀನಾಮೆ ನೀಡಿದ ಬಳಿಕ ರಘುನಾಥ್ ರಾವ್ ಮಲ್ಕಾಪುರೆ ಅವರನ್ನು ಹಂಗಾಮಿ ಸಭಾಪತಿಯಾಗಿ ನೇಮಕ ಮಾಡಲಾಗಿತ್ತು.

ADVERTISEMENT

ಹೊರಟ್ಟಿ ಅವರನ್ನು ಪಕ್ಷಕ್ಕೆ ಬರ
ಮಾಡಿಕೊಳ್ಳುವ ಸಂದರ್ಭದಲ್ಲಿ ಮುಂದೆ ಸಭಾಪತಿ ಸ್ಥಾನ ನೀಡುವುದಾಗಿ ಬಿಜೆಪಿ ನಾಯಕರು ಅವರಿಗೆ ಭರವಸೆಯನ್ನೂ ನೀಡಿದ್ದರು.

ಆದರೆ, ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಭಾರಿ ಬಹುಮತದಿಂದ ಗೆಲುವು ಸಾಧಿಸಿ ಹಲವು ತಿಂಗಳಾದರೂ ಅವರಿಗೆ ಸಭಾಪತಿ ಸ್ಥಾನ ನೀಡಿರಲಿಲ್ಲ. ಇದೀಗ ಚುನಾವಣೆ ನಿಗದಿಯಾಗಿದ್ದು, ಹೊರಟ್ಟಿ ಅವರಿಗೆ ಮತ್ತೆ ಅವಕಾಶ ಕೂಡಿಬರುವ ಸಾಧ್ಯತೆ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.