ಬೆಂಗಳೂರು: ಹಾಲಿನ ಖರೀದಿ ದರ ಏರಿಸುವ ಮತ್ತು ಅದನ್ನು ಗ್ರಾಹಕರಿಂದ ಭರಿಸುವ ಪ್ರಸ್ತಾವ ಸರ್ಕಾರದ ಮುಂದೆ ಇದೆ ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಹೇಳಿದರು.
ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡುವ ಸಂಬಂಧ ವಿಧಾನ ಪರಿಷತ್ತಿನಲ್ಲಿ ಬುಧವಾರ ಬಿಜೆಪಿಯ ಹೇಮಲತಾ ನಾಯಕ್ ಮತ್ತು ಎಂ.ಜಿ.ಮುಳೆ ಹಾಗೂ ಕಾಂಗ್ರೆಸ್‌ನ ಉಮಾಶ್ರೀ ಅವರು ಕೇಳಿದ್ದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಹಾಲಿನ ದರ ಏರಿಸುವ ಅಗತ್ಯವಿದೆ ಎಂದು ಹೇಳಿದರು.
‘ಹಾಲಿನ ಖರೀದಿ ದರ ಹೆಚ್ಚಿಸಬೇಕು ಎಂದು ರೈತರು ಮತ್ತು ಹಾಲು ಉತ್ಪಾದಕರ ಸಂಘಗಳು ಬೇಡಿಕೆ ಸಲ್ಲಿಸುತ್ತಲೇ ಇವೆ. ಮೇವು ಮತ್ತಿತರ ವೆಚ್ಚ ಸೇರಿ ಹಾಲು ಉತ್ತಾದನಾ ವೆಚ್ಚ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾಗಿಯೇ ಖರೀದಿ ದರ ಹೆಚ್ಚಿಸಬೇಕು ಎಂಬುದು ಉತ್ಪಾದಕರ ಒತ್ತಾಯ’ ಎಂದು ಅವರು ಸದನಕ್ಕೆ ವಿವರಿಸಿದರು.
‘ಹಾಲು ಉತ್ಪಾದಕರು ಕೇಳುತ್ತಿರುವುದರಲ್ಲೂ ನ್ಯಾಯವಿದೆ. ಈಗಿನ ಖರೀದಿ ದರದಿಂದ ಅವರಿಗೆ ನಷ್ಟವಾಗುತ್ತಿದೆ. ಹೀಗಾಗಿ ದರ ಏರಿಕೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ದರವನ್ನು ಎಷ್ಟು ಹೆಚ್ಚಿಸಬೇಕು ಎಂಬುದು ನಿರ್ಧಾರವಾಗಿಲ್ಲ. ಈ ಹಿಂದೆ ಪ್ರತಿ ಲೀಟರ್ ಖರೀದಿ ದರದಲ್ಲಿ ₹2 ಏರಿಕೆ ಮಾಡಿದಾಗ, ಸರ್ಕಾರವೇ ಅದನ್ನು ಭರಿಸಿತ್ತು. ಆದರೆ ಈಗ ಮಾರಾಟ ದರವನ್ನು ಹೆಚ್ಚಿಸುವ ಬಗ್ಗೆಯೂ ಚಿಂತನೆ ನಡೆದಿದೆ’ ಎಂದರು.
‘ಉತ್ಪಾದನಾ ವೆಚ್ಚವನ್ನು ಪರಿಗಣಿಸಿಯೇ ದರ ಏರಿಕೆ ಮಾಡಬೇಕು ಎಂಬ ಒತ್ತಾಯವಿದೆ. ಉತ್ಪಾದಕರಿಗೂ ನಷ್ಟವಾಗಬಾರದು ಮತ್ತು ಗ್ರಾಹಕರಿಗೂ ವಿಪರೀತ ಹೊರೆಯಾಗದ ರೀತಿಯಲ್ಲಿ ದರ ಪರಿಷ್ಕರಣೆ ಮಾಡಬೇಕಿದೆ. ಅದರ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದರು.
₹ 656.07ಕೋಟಿ ಪ್ರೋತ್ಸಾಹ ಧನ ಬಾಕಿ: ಪ್ರತಿ ಲೀಟರ್ ಹಾಲಿಗೆ ₹5ರಂತೆ ಹಾಲು ಉತ್ಪಾದಕರಿಗೆ ನೀಡಬೇಕಿರುವ ಪ್ರೋತ್ಸಾಹ ಧನದಲ್ಲಿ ಸರ್ಕಾರವು ₹656.07 ಕೋಟಿ ಬಾಕಿ ಉಳಿಸಿಕೊಂಡಿದೆ. ಒಟ್ಟು 9.04 ಲಕ್ಷ ಫಲಾನುಭವಿಗಳಿಗೆ ಕಳೆದ ಹಲವು ತಿಂಗಳಿಂದ ಈ ಹಣ ಪಾವತಿಯಾಗಿಲ್ಲ ಎಂದು ಸಚಿವ ವೆಂಕಟೇಶ್ ಹೇಳಿದರು.
‘ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಾಲಿನ ಉತ್ಪಾದನೆ ಮತ್ತು ಪ್ರೋತ್ಸಾಹ ಧನವನ್ನು ಗಮನದಲ್ಲಿ ಇರಿಸಿಕೊಳ್ಳದೆ ಬಜೆಟ್‌ನಲ್ಲಿ ಅನುದಾನ ನಿಗದಿ ಮಾಡಿದ್ದಾರೆ. ಹೀಗಾಗಿ ಪ್ರತಿ ಆರ್ಥಿಕ ವರ್ಷದಲ್ಲೂ ನೂರಾರು ಕೋಟಿ ಬಾಕಿ ಉಳಿದುಕೊಂಡಿದ್ದು, ಒಟ್ಟು ₹704 ಕೋಟಿಯಷ್ಟಿತ್ತು. ಅದನ್ನೆಲ್ಲ ಚುಕ್ತಾ ಮಾಡಿದ್ದೇವೆ. ಹೀಗಾಗಿಯೇ ನಮ್ಮ ಅವಧಿಯ ಪ್ರೋತ್ಸಾಹ ಧನ ಬಾಕಿಯಾಗಿದೆ’ ಎಂದರು.
* ಈಗ ಪ್ರತಿ ಲೀಟರ್‌ಗೆ ₹31.98 ಖರೀದಿ ದರ ನಿಗದಿ
* ಹಾಲಿನಲ್ಲಿನ ಜಿಡ್ಡಿನ ಪ್ರಮಾಣ ಆಧರಿಸಿ ಈ ದರ ವ್ಯತ್ಯಾಸ
* ಹೆಚ್ಚುವರಿಯಾಗಿ ಪ್ರತಿ ಲೀಟರ್‌ಗೆ ₹5 ಪ್ರೋತ್ಸಾಹ ಧನ
₹ 613.58 ಕೋಟಿ: ಸಾಮಾನ್ಯ ವರ್ಗದ 8.17 ಲಕ್ಷ ಹಾಲು ಉತ್ಪಾದಕರಿಗೆ ನೀಡಬೇಕಿರುವ ಐದು ತಿಂಗಳ ಬಾಕಿ
₹18.29 ಕೋಟಿ: ಪರಿಶಿಷ್ಟ ಜಾತಿಗಳ 52467 ಮಂದಿಗೆ ನೀಡಬೇಕಿರುವ ಎರಡು ತಿಂಗಳ ಬಾಕಿ
₹24.20 ಕೋಟಿ: ಪರಿಶಿಷ್ಟ ಪಂಗಡಗಳ 35006 ಮಂದಿಗೆ ನೀಡಬೇಕಿರುವ ನಾಲ್ಕು ತಿಂಗಳ ಬಾಕಿ
₹2661.70 ಕೋಟಿ: ‘2023ರಿಂದ 2025ರ ಫೆಬ್ರುವರಿವರೆಗೆ ರೈತರಿಗೆ ನೀಡಿದ ಪ್ರೋತ್ಸಾಹ ಧನ
ಆಟೊ ಪ್ರಯಾಣ ದರ ಹೆಚ್ಚಳ: 12ಕ್ಕೆ ಸಭೆ
ಬೆಂಗಳೂರು: ನಗರದ ಆಟೊಗಳ ಪ್ರಯಾಣ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಾರ್ಚ್ 12ರಂದು ಸಂಚಾರ ಡಿಸಿಪಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಲಿದೆ. ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾಗಿರುವ ನಗರ ಜಿಲ್ಲಾಧಿಕಾರಿ ಅವರು ಸಭೆ ನಡೆಸಲು ಪ್ರಾಧಿಕಾರದ ಸದಸ್ಯರಾಗಿರುವ ಸಂಚಾರ ಡಿಸಿಪಿಗೆ ಸೂಚನೆ ನೀಡಿದ್ದಾರೆ. ಪ್ರಾಧಿಕಾರದ ಕಾರ್ಯದರ್ಶಿಯೂ ಆಗಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿ ಭಾಗವಹಿಸಲಿದ್ದಾರೆ. ನಗರದ ವಿವಿಧ ಆಟೊ ಸಂಘಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.