ತಾಪಮಾನ
ಬೆಂಗಳೂರು: ರಾಜ್ಯದಲ್ಲಿ ಬಿಸಿಲ ಧಗೆ ದಿನದಿಂದ ದಿನಕ್ಕೆ ಹೆಚ್ಚಲಾರಂಭಿಸಿದ್ದು, ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ತಾಪಮಾನವು 36 ಡಿಗ್ರಿ ಸೆಲ್ಸಿಯಸ್ ದಾಟುತ್ತಿದೆ.
ವಾತಾವರಣದಲ್ಲಿನ ಉಷ್ಣಾಂಶವು ವಾಡಿಕೆಗಿಂತ 4 ಡಿಗ್ರಿ ಸೆಲ್ಸಿಯಸ್‌ವರೆಗೆ ಹೆಚ್ಚಿದೆ. ಇದರಿಂದಾಗಿ ಫೆಬ್ರುವರಿ ತಿಂಗಳಲ್ಲಿಯೇ ಉಷ್ಣಾಂಶವು ಗಣನೀಯ ಏರಿಕೆ ಕಾಣುತ್ತಿದೆ. ಪರಿಣಾಮ, ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ಬಸವಳಿಯುತ್ತಿದ್ದಾರೆ. ಬಿಸಿಲಿನಿಂದ ರಕ್ಷಣೆ ಪಡೆಯಲು ಹರಸಾಹಸ ಪಡುತ್ತಿದ್ದಾರೆ.
ಹವಾಮಾನ ಇಲಾಖೆಯ ಪ್ರಕಾರ, ರಾಜ್ಯದಲ್ಲಿ ಒಣಹವೆ ಮುಂದುವರಿಯಲಿದ್ದು, ಮುಂದಿನ ಐದು ದಿನಗಳಲ್ಲಿ ಗರಿಷ್ಠ ತಾಪಮಾನವು 2ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗುವ ಸಾಧ್ಯತೆಯಿದೆ.
ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ರಾಜ್ಯದ 19 ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ದಾಟಿದೆ. ರಾಯಚೂರಿನಲ್ಲಿ 37.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಕಲಬುರಗಿಯಲ್ಲಿ 37 ಡಿಗ್ರಿ ಸೆಲ್ಸಿಯಸ್ ವರದಿಯಾಗಿದೆ.
ಬಳ್ಳಾರಿ, ಬೆಳಗಾವಿ, ದಕ್ಷಿಣ ಕನ್ನಡ, ದಾವಣಗೆರೆ, ಹಾವೇರಿ, ಯಾದಗಿರಿ, ವಿಜಯಪುರ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲೂ ಗರಿಷ್ಠ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್ ದಾಟಿದೆ.
ಬೆಂಗಳೂರಿನಲ್ಲಿಯೂ ತಾಪಮಾನ ಏರಿಕೆ ಕಂಡಿದ್ದು, 34.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಮುಂದಿನ ಎರಡು ದಿನಗಳು ಕೆಲವು ಪ್ರದೇಶಗಳಲ್ಲಿ ಮುಂಜಾನೆ ದಟ್ಟ ಮಂಜು ಬೀಳುವ ಸಾಧ್ಯತೆಯಿದ್ದು, ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.