ADVERTISEMENT

ಎಡನೀರು ಕೇಶವಾನಂದ ಭಾರತಿ ಸ್ವಾಮೀಜಿ ನಿಧನಕ್ಕೆ ಗಣ್ಯರಿಂದ ಸಂತಾಪ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 8:17 IST
Last Updated 6 ಸೆಪ್ಟೆಂಬರ್ 2020, 8:17 IST
 ಕೇಶವಾನಂದ ಭಾರತೀ ಸ್ವಾಮೀಜಿ
ಕೇಶವಾನಂದ ಭಾರತೀ ಸ್ವಾಮೀಜಿ   

ಬೆಂಗಳೂರು:ಕಾಸರಗೋಡಿನ ಎಡನೀರು ಜಗದ್ಗುರು ಶಂಕರಾಚಾರ್ಯ ಸಂಸ್ಥಾನದ ಮಠಾಧೀಶ ಕೇಶವಾನಂದ ಭಾರತೀ ಸ್ವಾಮೀಜಿ (76) ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

‘ಕಾಸರಗೋಡಿನ ಎಡನೀರು ಮಠದ ತೋಟಕಾಚಾರ್ಯ ಪರಂಪರೆಯ ಪೂಜ್ಯ ‌ಶ್ರೀ ಕೇಶವಾನಂದ ಭಾರತೀ ತೀರ್ಥ ಸ್ವಾಮೀಜಿಯವರು ಕೃಷ್ಣೈಕ್ಯರಾದ ಸುದ್ದಿ ತಿಳಿದು ದುಃಖವಾಗಿದೆ. ಪೂಜ್ಯ ಶ್ರೀಗಳಿಗೆ ನನ್ನ ಗೌರವಪೂರ್ವಕ ‌ಶ್ರದ್ಧಾನಮನಗಳನ್ನು ಸಲ್ಲಿಸುತ್ತಿದ್ದೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಟ್ವೀಟ್‌ ಮಾಡಿದ್ದಾರೆ.

‘ಭಾರತದ ಸಂವಿಧಾನದ ಮೂಲ ಆಶಯಗಳಿಗೆ ದಕ್ಕೆಯಾಗದಂತೆ ತಿದ್ದುಪಡಿ ತರಬಹುದು ಎಂದು ಸುಪ್ರೀಂಕೋರ್ಟ್ ನ ಇತಿಹಾಸದಲ್ಲಿಯೇ ಮೈಲಿಗಲ್ಲು ಎನಿಸಿದ ಪ್ರಕರಣದಲ್ಲಿ ವಾದಿಸಿ ಜಯಗಳಿಸಿದ, ಯಕ್ಷಗಾನ ಕಲಾವಿದರಿಗೆ ಸೂಕ್ತ ಮನ್ನಣೆ ಸಿಗಲು ತಳಪಾಯ ರೂಪಿಸಿದ... ಸ್ವತ: ಯಕ್ಷಗಾನ ತಂಡವನ್ನು ನಡೆಸಿ ಮಾದರಿಯಾಗಿದ್ದ ಪರಮಪೂಜ್ಯ ಎಡನೀರು ಮಠಾಧೀಶರಾದ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರು ಭಗವಂತನ ಪಾದ ಸೇರಿದ್ದಾರೆ. ನಾನು ಕೋವಿಡ್‌ನಿಂದ ಆಸ್ಪತ್ರೆಗೆ ದಾಖಲಾಗಿರುವುದರಿಂದ ಶ್ರೀಗಳ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ. ಅವರ ಆತ್ಮಕ್ಕೆ ಸದ್ಗತಿ ಸಿಗಲೆಂದು ಪ್ರಾರ್ಥನೆ’ ಎಂದು ನಳಿನ್‌ ಕುಮಾರ್‌ ಕಟೀಲ್‌ ಟ್ವೀಟ್‌ ಮಾಡಿದ್ದಾರೆ.

‘ಎಡನೀರು ಜಗದ್ಗುರು ಶಂಕರಾಚಾರ್ಯ ಸಂಸ್ಥಾನದ ಮಠಾಧೀಶರಾದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರು ಇಹಲೋಕ ತ್ಯಜಿಸಿರುವ ವಿಚಾರ ನೋವು ತಂದಿದೆ. ಸಾಂಸ್ಕೃತಿಕ, ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಅವರ ಆದರ್ಶಗಳು ಮಾದರಿಯಾಗಲಿ. ಭಕ್ತ ಬಾಂಧವರಿಗೆ ಈ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಕಾಸರಗೋಡಿನ ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯವರ ನಿಧನ ನೋವು ತಂದಿದೆ. ಅವರು ರಾಜ್ಯ ಸರ್ಕಾರದ ವಿರುದ್ಧದ ಕಾನೂನು ಹೋರಾಟಕ್ಕೆ ಹೆಸರುವಾಸಿಯಾಗಿದ್ದರು, ಇದು ಮೂಲ ರಚನೆ ಸಿದ್ಧಾಂತಕ್ಕೆ ಕಾರಣವಾಯಿತು. ಸ್ವಾಮೀಜಿಗಳು ಶ್ರೀ ಶಂಕರಾಚಾರ್ಯ ಮತ್ತು ಅದ್ವೈತ ತತ್ತ್ವಶಾಸ್ತ್ರದ ಅನುಯಾಯಿಯಾಗಿದ್ದರು ಎಂದು ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.