ADVERTISEMENT

Pahalgam Terror Attack | ಇಬ್ಬರ ಮೃತ ಶರೀರ ರಾಜ್ಯದತ್ತ

ಕಾಶ್ಮೀರ ಉಗ್ರರ ದಾಳಿ: ಕೇಂದ್ರ– ರಾಜ್ಯ ಸರ್ಕಾರಗಳ ತೆರವು ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 22:30 IST
Last Updated 23 ಏಪ್ರಿಲ್ 2025, 22:30 IST
ದಾಳಿ ಸ್ಥಳದಿಂದ ಬಾಲಕನನ್ನು ಸುರಕ್ಷಿತ ಜಾಗಕ್ಕೆ ಹೊತ್ತು ಕರೆತಂದ ಸ್ಥಳೀಯ ಯುವಕ
ದಾಳಿ ಸ್ಥಳದಿಂದ ಬಾಲಕನನ್ನು ಸುರಕ್ಷಿತ ಜಾಗಕ್ಕೆ ಹೊತ್ತು ಕರೆತಂದ ಸ್ಥಳೀಯ ಯುವಕ   

ಬೆಂಗಳೂರು/ಶ್ರೀನಗರ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಮೃತರಾದ ಶಿವಮೊಗ್ಗ ಮಂಜುನಾಥ ರಾವ್ ಮತ್ತು ಬೆಂಗಳೂರಿನ ಭರತ್ ಭೂಷಣ್‌ ಅವರ ಪಾರ್ಥಿವ ಶರೀರಗಳನ್ನು ಹೊತ್ತ ವಿಮಾನವು ಶ್ರೀನಗರದಿಂದ ದೆಹಲಿ ತಲುಪಿದೆ. ಬೆಂಗಳೂರಿನತ್ತ ವಿಮಾನ ಹೊರಡಲು ರಾತ್ರಿ 1.10ಕ್ಕೆ ಸಮಯ ನಿಗದಿಪಡಿಸಲಾಗಿದೆ.

‘ಮೃತ ಶರೀರ ಮತ್ತು ಕುಟುಂಬದ ಸದಸ್ಯರನ್ನು ಶ್ರೀನಗರದಿಂದ ಬೆಂಗಳೂರಿಗೆ ಕರೆತರುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರವೇ ಮಾಡಿದೆ. ಎರಡೂ ಕುಟುಂಬಗಳ ಒಟ್ಟು 13 ಮಂದಿ ಸದಸ್ಯರು ಇಂಡಿಗೊ ವಿಮಾನದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ’ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮಾಹಿತಿ ನೀಡಿದರು.

‘ಬೆಂಗಳೂರು ವಿಮಾನ ನಿಲ್ದಾಣದಿಂದ ನಗರದ ಮತ್ತಿಕೆರೆಗೆ ಭರತ್ ಅವರ ಶರೀರವನ್ನು ಆಂಬುಲೆನ್ಸ್ ಮೂಲಕ ಕಳುಹಿಸಲಾಗುತ್ತದೆ. ಮಂಜುನಾಥ ಅವರ ಶರೀರವನ್ನು ಆಂಬುಲೆನ್ಸ್‌ ಮೂಲಕ ಶಿವಮೊಗ್ಗಕ್ಕೆ ಕಳುಹಿಸಲಾಗುತ್ತದೆ. ವಿಮಾನ 3.45ಕ್ಕೇ ಬಂದಿಳಿದರೂ, ಹಸ್ತಾಂತರ ಪ್ರಕ್ರಿಯೆ ಪೂರೈಸಿ ಅಲ್ಲಿಂದ ಹೊರಡುವುದು 5 ಗಂಟೆಯಾಗಬಹುದು’ ಎಂದು ಅವರು ತಿಳಿಸಿದರು.

ADVERTISEMENT

‘ಬೆಂಗಳೂರಿನಿಂದ ಒಂದು ತಂಡವಾಗಿ ಅಲ್ಲಿಗೆ ಹೋಗಿದ್ದೆವು. ಜಮ್ಮು–ಕಾಶ್ಮೀರ ಸರ್ಕಾರದ ಅಧಿಕಾರಿಗಳು ಮತ್ತು ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ನೇತೃತ್ವದ ತಂಡದ ಸಮನ್ವಯದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ರಾಜ್ಯ ತಂಡವು ಇನ್ನೂ ಅಲ್ಲೇ ಇದ್ದು, ಪ್ರವಾಸಿಗರ ಯೋಗಕ್ಷೇಮ ನೋಡಿಕೊಳ್ಳುತ್ತಿದೆ’ ಎಂದು ತಿಳಿಸಿದರು. 

ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ನೇತೃತ್ವದಲ್ಲಿ ರಾಜ್ಯದ ಅಧಿಕಾರಿಗಳ ತಂಡವು ಮಂಗಳವಾರ ಸಂಜೆಯೇ ಶ್ರೀನಗರ ತಲುಪಿದ್ದು, ಮೃತರ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿತ್ತು.

‘ಮೃತರ ಶರೀರಗಳನ್ನು ಬೆಂಗಳೂರಿಗೆ ತರಲು ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆದರೆ ಕೇಂದ್ರ ಸರ್ಕಾರವೇ ಶರೀರಗಳನ್ನು ರವಾನಿಸುತ್ತೇವೆ ಎಂದು ತಿಳಿಸಿತು’ ಎಂದು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿ ಮಾಹಿತಿ ನೀಡಿದರು.

167 ಮಂದಿ ಸುರಕ್ಷಿತ: ಸಚಿವ ಲಾಡ್‌

‘ರಾಜ್ಯದಿಂದ ಇಲ್ಲಿಗೆ ಪ್ರವಾಸಕ್ಕೆ ಬಂದಿರುವವರಲ್ಲಿ ಸುಮಾರು 180 ಜನರಿದ್ದು ಅವರಲ್ಲಿ 167 ಮಂದಿ ನಮ್ಮ ಸಂಪರ್ಕದಲ್ಲಿ ಇದ್ದಾರೆ. ಅವರೆಲ್ಲರೂ ಸುರಕ್ಷಿತವಾಗಿದ್ದು ಅವರ ಕುಟುಂಬದವರು ಗಾಬರಿ ಪಡುವ ಅಗತ್ಯವಿಲ್ಲ’ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಎಲ್ಲ ವಿಮಾನಯಾನ ಕಂಪನಿಗಳು ಟಿಕೆಟ್‌ ದರವನ್ನು ವಿಪರೀತ ಏರಿಕೆ ಮಾಡಿವೆ. ಈ ಬಗ್ಗೆ ಪ್ರವಾಸಿಗರು ಕಳವಳ ವ್ಯಕ್ತಪಡಿಸಿದ್ದರು. ಯಾರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ರಾಜ್ಯ ಸರ್ಕಾರವೇ ಪೂರ್ಣ ವೆಚ್ಚ ಭರಿಸಿ ಎಲ್ಲರನ್ನೂ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಕರೆತರಲಿದೆ’ ಎಂದು ಅವರು ಮಾಹಿತಿ ನೀಡಿದರು. ‘ವಿಶೇಷ ವಿಮಾನದ ಬಗ್ಗೆ ಮಾತುಕತೆ ನಡೆಯುತ್ತಿದ್ದು ರಾತ್ರಿಯೇ ಸಮಯ ನಿಗದಿಯಾಗುವ ವಿಶ್ವಾಸವಿದೆ. ಬೆಳಿಗ್ಗೆ 7.45ರ ವೇಳೆಗೆ ಇಲ್ಲಿಂದ ವಿಮಾನ ಹೊರಡುವ ಸಾಧ್ಯತೆ ಇದೆ. ಈ ಬಗ್ಗೆ ಎಲ್ಲ ಪ್ರವಾಸಿಗರಿಗೂ ಮಾಹಿತಿ ನೀಡಿ ವಿಮಾನ ನಿಲ್ದಾಣಕ್ಕೆ ಬರುವಂತೆ ಹೇಳುತ್ತೇವೆ’ ಎಂದರು. ‘ರಾಜ್ಯದ ಸುಮಾರು 160 ಪ್ರವಾಸಿಗರು 14 ಹೋಟೆಲ್‌ಗಳಲ್ಲಿ ಇದ್ದು ಎಲ್ಲೆಡೆಗೆ ನಾನೇ ಖುದ್ದು ಹೋಗಿ ಭೇಟಿ ಮಾಡಿದ್ದೇನೆ. ಅವರ ಕುಟುಂಬದ ಯಾರೂ ಭಯಪಡುವ ಅಗತ್ಯವಿಲ್ಲ’ ಎಂದು ಹೇಳಿದರು.

‘ನಮ್ಮನ್ನು ರಕ್ಷಿಸಿದ್ದು ಮುಸ್ಲಿಮರು’

ಭಯೋತ್ಪಾದಕರ ಗುಂಡಿಗೆ ನನ್ನ ಪತಿ ಹತರಾದ ನಂತರ ದಾಳಿ ಸ್ಥಳದಿಂದ ನಮ್ಮನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಬಂದವರು ಸ್ಥಳೀಯ ಮುಸ್ಲಿಮರು. ಅವರನ್ನು ನಾನು ನನ್ನ ಅಣ್ಣಂದಿರು ಎಂದೇ ಕರೆಯುತ್ತೇನೆ. ನಾವಿದ್ದ ಜಾಗದಲ್ಲಿ ಸುಮಾರು 500 ಪ್ರವಾಸಿಗರು ಇದ್ದರು. ಪ್ರವಾಸಿ ಸ್ಥಳದಲ್ಲಿ ಅಷ್ಟೆಲ್ಲಾ ಜನ ಇದ್ದರೂ ಒಬ್ಬ ಸೈನಿಕನೂ ಅಲ್ಲಿರಲಿಲ್ಲ. ದಾಳಿ ನಡೆದಾಗ ಮೂವರು ಮುಸ್ಲಿಂ ಸೋದರರು ನಮ್ಮನ್ನು ಸುತ್ತುವರಿದರು. ‘ಬಿಸ್ಮಿಲ್ಲಾ ಬಿಸ್ಮಿಲ್ಲಾ’ ಎಂದು ಹೇಳುತ್ತಾ ನಮ್ಮನ್ನು ಸುರಕ್ಷಿತ ಪ್ರದೇಶಕ್ಕೆ ಕರೆದು ತಂದರು. ಒಬ್ಬರಂತೂ ನನ್ನ ಮಗನನ್ನು ಹೆಗಲ ಮೇಲೆ ಹೊತ್ತು ಕರೆದುಕೊಂಡು ಬಂದರು. ದುರ್ಗಮ ಹಾದಿಯಲ್ಲಿ ನಾನು ಬೀಳದಂತೆ ಎಚ್ಚರವಹಿಸಿದರು. ನಮ್ಮ ವಾಹನದ ಚಾಲಕ ಸಹ ನಮ್ಮೊಂದಿಗೇ ಇದ್ದು ಎಲ್ಲ ರೀತಿಯ ನೆರವು ನೀಡಿದರು. ಪಲ್ಲವಿ ಭಯೋತ್ಪಾದಕರ ದಾಳಿಯಲ್ಲಿ ಮೃತರಾದ ಶಿವಮೊಗ್ಗದ ಉದ್ಯಮಿ ಮಂಜುನಾಥ ರಾವ್ ಅವರ ಪತ್ನಿ

ಮಾಹಿತಿ ನೀಡಲು ಮನವಿ ‘ಕರ್ನಾಟಕದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವಾಸ ಪ್ಯಾಕೇಜ್‌ಗಳಲ್ಲಿ ಹೋಗಿರುವವರ ವಿವರ ನೀಡಿ’ ಎಂದು ಟೂರ್ ಆಪರೇಟರ್‌ಗಳು ಮತ್ತು ಟ್ರಾವೆಲ್‌ ಏಜೆಂಟ್‌ಗಳಿಗೆ ಪ್ರವಾಸೋದ್ಯಮ ಇಲಾಖೆಯು ಮನವಿ ಮಾಡಿದೆ. ಕಾಶ್ಮೀರದಲ್ಲಿ ಸಿಲುಕಿರುವವರನ್ನು ಕರೆತರಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಅಧಿಕಾರಿಗಳ ಸಂಪರ್ಕಕ್ಕೆ ಸಿಗದೇ ಇರುವ ಹಲವು ಪ್ರವಾಸಿಗರು ಅಲ್ಲಿರಬಹುದು. ರಾಜ್ಯದಿಂದ ಅಲ್ಲಿಗೆ ಹೋಗಿರುವ ಎಲ್ಲರನ್ನೂ ಸಂಪರ್ಕಿಸಬೇಕಿದ್ದು ಅವರ ಮೊಬೈಲ್‌ ಸಂಖ್ಯೆಗಳ ವಿವರ ನೀಡಿ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ. ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿರುವ ರಾಜ್ಯದ ಕುಟುಂಬಗಳ ಸದಸ್ಯರು ಮತ್ತು ಸಂಬಂಧಿಗಳು ಸಹ ಇಲಾಖೆ ಆರಂಭಿಸಿರುವ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ಕೋರಿದೆ. ಸಹಾಯವಾಣಿ 080–43344334 080–43344335 080–43344336 080–43344337

₹10 ಲಕ್ಷ ಪರಿಹಾರ– ಸಿಎಂ ಉಗ್ರರ ದಾಳಿಯಲ್ಲಿ ಮೃತಪಟ್ಟ ಕರ್ನಾಟಕದ ವ್ಯಕ್ತಿಗಳ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ ₹ 10 ಲಕ್ಷ ಪರಿಹಾರ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.