ಪ್ರಿಯಾಂಕ್ ಖರ್ಗೆ
ಬೆಂಗಳೂರು: ಕೊನೆಯ ಸ್ಥಾನದಲ್ಲಿರುವ 1,310 ಗ್ರಾಮ ಪಂಚಾಯಿತಿಗಳನ್ನು ‘ಕಾಯಕ ಗ್ರಾಮ’ ಯೋಜನೆ ಅಡಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಯೋಜನೆಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಗ್ರಾಮೀಣಾಭಿವೃದ್ಧಿಯ ಇ-ಆಡಳಿತ ವಿಭಾಗವು ಪಂಚತಂತ್ರ ತಂತ್ರಾಂಶದಲ್ಲಿ ಗ್ರಾಮ ಪಂಚಾಯಿತಿ ಕಾರ್ಯಕ್ಷಮತೆಯ ಶ್ರೇಯಾಂಕ ವರದಿಯಲ್ಲಿ ಗುರುತಿಸುವಂತೆ ಕೊನೆಯ ಸ್ಥಾನಗಳಲ್ಲಿರುವ ಗ್ರಾಮ ಪಂಚಾಯತಿಗಳನ್ನು ವೈಜ್ಞಾನಿಕವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ವಿವಿಧ ಇಲಾಖೆಗಳ ಸಮನ್ವಯದಲ್ಲಿ ಸಮಗ್ರ ಅಭಿವೃದ್ಧಿ ಸಾಧಿಸಲಾಗುವುದು. ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದ ಅಧಿಕಾರಿಗಳು ಉಸ್ತುವಾರಿ ನೋಡಿಕೊಳ್ಳುವರು’ ಎಂದರು.
ಗ್ರಾಮ ಪಂಚಾಯಿತಿಗಳನ್ನು ಹಿರಿಯ ಅಧಿಕಾರಿಗಳು ದತ್ತು ಪಡೆದು ಅಭಿವೃದ್ಧಿಪಡಿಸಲು ಹೊಸ ಯೋಜನೆ ರೂಪಿಸಲಾಗುವುದು ಎಂದು ಬಜೆಟ್‌ನಲ್ಲಿ ಮುಖ್ಯಮಂತ್ರಿ ಘೋಷಿಸಿದ್ದರು. ಬಸವಣ್ಣನವರ ಸಂದೇಶದಂತೆ ಕಾಯಕದ ಮೂಲಕ ಎಲ್ಲವನ್ನೂ ಸಾಧಿಸಬಹುದು. ಈ ಸಂದೇಶವನ್ನು ಸಾಕಾರಗೊಳಿಸಲು ‘ಕಾಯಕ ಗ್ರಾಮ’ ಯೋಜನೆ ರೂಪಿಸಲಾಗಿದೆ ಎಂದು ವಿವರ ನೀಡಿದರು.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಆರು ಅಧಿಕಾರಿಗಳು, ತಾಲ್ಲೂಕು ಮಟ್ಟದಲ್ಲಿ ಮೂವರು ಅಧಿಕಾರಿಗಳು ಹಾಗೂ ರಾಜ್ಯ ಮಟ್ಟದಲ್ಲಿ ಜಿಲ್ಲಾವಾರು ನೇಮಕ ಮಾಡಲಾಗಿರುವ ನೋಡಲ್ ಅಧಿಕಾರಿಗಳು ಇರುತ್ತಾರೆ. ಕಾಲಮಿತಿಯಲ್ಲಿ ಗ್ರಾಮಗಳ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸಲಾಗುತ್ತದೆ ಎಂದರು.
ಇದೇ ವೇಳೆ ‘ಕಾಯಕ ಗ್ರಾಮ’ ಅನುಷ್ಠಾನದ ವಿವರಗಳನ್ನು ಒಳಗೊಂಡ ಕೈಪಿಡಿಯನ್ನು ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿದರು. ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸಮೀರ್ ಶುಕ್ಲಾ, ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ಡಿ.ರಂದೀಪ್, ಆಯುಕ್ತೆ ಅರುಂಧತಿ ಚಂದ್ರಶೇಖರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.