ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಅವರ ಕಂಪನಿಗಳು ಬೆಟ್ಟಿಂಗ್‌ಗೆ ಬಳಸಿಕೊಳ್ಳುತ್ತಿದ್ದ ಆನ್‌ಲೈನ್ ಪಾವತಿ ಗೇಟ್‌ವೇ ಒಂದರಲ್ಲಿ, ಕೆಲವೇ ದಿನಗಳಲ್ಲಿ ₹2,000 ಕೋಟಿಗೂ ಹೆಚ್ಚು ವಹಿವಾಟು ನಡೆಸಿವೆ.
ವೀರೇಂದ್ರ ಅವರ ಸೋದರನ ಮಗ ಪೃಥ್ವಿ ಎನ್.ರಾಜ್ 262 ಬೇನಾಮಿ ಖಾತೆಗಳನ್ನು ಮೇಲ್ವಿಚಾರಣೆ ನಡೆಸುತ್ತಿದ್ದರೆ, ಆನ್‌ಲೈನ್ ಬೆಟ್ಟಿಂಗ್ ತಾಣಗಳ ನಿರ್ವಾಹಕರು ಈ ಖಾತೆಗಳ ಮೂಲಕ ವಹಿವಾಟು ನಡೆಸುತ್ತಿದ್ದರು. ಈ ಖಾತೆಗಳನ್ನು ಕಿಂಗ್567, ರಾಜಾ567, ಲಯನ್567 ಎಂಬ ಆನ್‌ಲೈನ್ ಬೆಟ್ಟಿಂಗ್ ಜಾಲತಾಣಗಳಿಗೆ ಲಿಂಕ್ ಮಾಡಲಾಗಿತ್ತು. ಇಂತಹ ಹತ್ತಾರು ಬೆಟ್ಟಿಂಗ್ ಜಾಲತಾಣಗಳನ್ನು ವೀರೇಂದ್ರ ಅವರ ಕಂಪನಿಗಳು ನಿರ್ವಹಿಸುತ್ತಿವೆ ಎಂದು ಇ.ಡಿ ಮಾಹಿತಿ ನೀಡಿದೆ.
ಈ ಜಾಲತಾಣಗಳ ಮೂಲಕ ಹಣ ಪಡೆಯಲು ಹಲವು ಆನ್‌ಲೈನ್ ಪಾವತಿ ಗೇಟ್‌ವೇಗಳನ್ನು ಆರೋಪಿಗಳು ಹೊಂದಿದ್ದರು. ಈ ಗೇಟ್‌ವೇ ಮೂಲಕವೇ ಹಣ ಪಾವತಿ ಆಗುತ್ತಿತ್ತು. ದುಬೈನಲ್ಲಿ ಕ್ಯಾಸಲ್‌ರಾಕ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಸರ್ವೀಸಸ್, ಲ್ಯಾಸಾಕ್ಸ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಸರ್ವೀಸಸ್ ಹೆಸರಿನಲ್ಲಿ ಕಂಪನಿಗಳನ್ನು ಆರಂಭಿಸಿ, ಅವುಗಳ ಖಾತೆಗೆ ಹಣ ವರ್ಗಾವಣೆ ಆಗುವಂತೆ ವ್ಯವಸ್ಥೆ ರೂಪಿಸಿಕೊಂಡಿದ್ದರು ಎಂದು ಇ.ಡಿ ವಿವರಿಸಿದೆ.
ಆರೋಪಿಗಳು ಇಂತಹ ಹಲವು ಗೇಟ್‌ವೇಗಳನ್ನು ಬಳಸುತ್ತಿದ್ದು, ಈಗ ಒಂದರ ವಹಿವಾಟಿನ ದತ್ತಾಂಶಗಳು ಮಾತ್ರವೇ ಲಭ್ಯವಾಗಿದೆ. ಇಷ್ಟು ದೊಡ್ಡ ಮಟ್ಟದ ವಹಿವಾಟುಗಳು ಕೆಲವೇ ದಿನಗಳಲ್ಲಿ ನಡೆದಿದ್ದು, ಬೆಟ್ಟಿಂಗ್ ದಂಧೆಯ ಅಗಾಧ ಪ್ರಮಾಣವನ್ನು ತೋರಿಸುತ್ತದೆ. ಇತರ ಎಲ್ಲಾ ಗೇಟ್‌ವೇಗಳ ದತ್ತಾಂಶ ದೊರೆತರೆ, ಎಷ್ಟೆಲ್ಲಾ ಹಣ ಬೆಟ್ಟಿಂಗ್‌ನಲ್ಲಿ ಬಳಕೆಯಾಗಿದೆ ಎಂಬುದು ಗೊತ್ತಾಗಲಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದೆ.
ಪಾಲುದಾರಿಕೆ: ಈ ಕಂಪನಿಗಳನ್ನು ಕೆ.ಸಿ.ವೀರೇಂದ್ರ, ಕೆ.ಸಿ.ತಿಪ್ಪೇಸ್ವಾಮಿ, ಪೃಥ್ವಿ ಎನ್.ರಾಜ್ ಮತ್ತು ಅನಿಲ್ ಗೌಡ ಪಾಲುದಾರಿಕೆಯಲ್ಲಿ ಆರಂಭಿಸಿದ್ದರು. ಬೆಟ್ಟಿಂಗ್‌ನಲ್ಲಿ ಗೆದ್ದವರಿಗೆ ಹಣವನ್ನು 262 ಬೇನಾಮಿ ಖಾತೆಗಳ ಮೂಲಕ ನೀಡಲಾಗುತ್ತಿತ್ತು. ಬೆಟ್ಟಿಂಗ್ ಹಣ ದುಬೈನಲ್ಲಿನ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಆಗುತ್ತಿದ್ದ ಕಾರಣ, ಬಹುತೇಕ ಸಂದರ್ಭದಲ್ಲಿ ಹವಾಲಾ ಮೂಲಕ ಹಣವನ್ನು ಭಾರತಕ್ಕೆ ತರಲಾಗುತ್ತಿತ್ತು ಎಂದು ಇ.ಡಿ ತಿಳಿಸಿದೆ.
ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ಅವರ ಸೋದರ ಅನಿಲ್ ಗೌಡ ಮನೆಯಲ್ಲೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಶೋಧ ನಡೆಸಿದ್ದರು. ಬೆಟ್ಟಿಂಗ್ ವ್ಯವಹಾರದಲ್ಲಿ ಇದೇ ಮೊದಲ ಬಾರಿಗೆ ಅನಿಲ್ ಗೌಡ ಅವರ ಪಾಲುದಾರಿಕೆಯನ್ನು ಇ.ಡಿ ಖಚಿತಪಡಿಸಿದೆ.
ಇ–ಕಾಮರ್ಸ್ ಸೋಗಿನಲ್ಲಿ ವಹಿವಾಟು
ಬೆಟ್ಟಿಂಗ್ ವ್ಯವಹಾರಗಳನ್ನು ಆರೋಪಿಗಳು ಇ–ಕಾಮರ್ಸ್ ಕಂಪನಿಗಳ ಸೋಗಿನಲ್ಲಿ ನಡೆಸುತ್ತಿದ್ದರು ಎಂದು ಇ.ಡಿ ಹೇಳಿದೆ. ಆರೋಪಿಗಳು ದುಬೈನಲ್ಲಿ ಹೊಂದಿದ್ದ ಕಂಪನಿಗಳು ಆನ್‌ಲೈನ್ ಸೇವೆ ಮತ್ತು ಸರಕುಗಳ ಪೂರೈಕೆ ಇವೆಂಟ್ ಮ್ಯಾನೇಜ್‌ಮೆಂಟ್ ವಹಿವಾಟು ನಡೆಸುವಂತೆ ಬಿಂಬಿಸಿಕೊಂಡಿದ್ದವು. ಈ ಸೇವೆ ಮತ್ತು ಸರಕುಗಳ ಪೂರೈಸಿದ ನೆಪದಲ್ಲಿ ಈ ಕಂಪನಿಗಳಿಗೆ ಹಣ ಪಾವತಿಯಾಗುತ್ತಿತ್ತು. ಬೆಟ್ಟಿಂಗ್‌ನಲ್ಲಿ ಹೂಡಿಕೆಯಾದ ಹಣವನ್ನು ಈ ದಾಖಲೆಗಳ ಅಡಿಯಲ್ಲಿ ತೋರಿಸುತ್ತಿದ್ದರು ಎಂದು ಮಾಹಿತಿ ನೀಡಿದೆ. ಈಗ ಇಂತಹ ಎರಡು ಕಂಪನಿಗಳ ವಿವರಗಳಷ್ಟೇ ದೊರೆತಿದ್ದು ಇನ್ನಷ್ಟು ಕಂಪನಿಗಳನ್ನು ಆರೋಪಿಗಳು ನಿರ್ವಹಿಸುತ್ತಿದ್ದಾರೆ. ಅವುಗಳ ವಿವರಗಳನ್ನು ಕಲೆಹಾಕಲಾಗುತ್ತಿದೆ ಎಂದು ವಿವರಿಸಿವೆ.
ಈವರೆಗಿನ ಮುಟ್ಟುಗೋಲು
₹67 ಕೋಟಿ ನಗದು ಮತ್ತು ಬ್ಯಾಂಕ್ ಠೇವಣಿ ₹6 ಕೋಟಿಮೌಲ್ಯದ ಚಿನ್ನಾಭರಣ 10 ಕೆ.ಜಿ ಬೆಳ್ಳಿಯ ವಸ್ತುಗಳು 10ಐಷಾರಾಮಿ ಕಾರುಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.