ಸಾಂದರ್ಭಿಕ ಚಿತ್ರ
ಬೆಂಗಳೂರು: ‘ಎಂಜಿನಿಯರಿಂಗ್ ಪದವಿಯ 3ನೇ ಸೆಮಿಸ್ಟರ್‌ಗೆ ನೇರ ಪ್ರವೇಶ ಕಲ್ಪಿಸಲು ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಎಇ) ಇದೇ ಮೇ 31ರಂದು ನಡೆಸಿದ್ದ ಡಿ–ಸಿಇಟಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಮತ್ತು ಕೀ–ಉತ್ತರಗಳಲ್ಲಿ ಹಲವು ಲೋಪಗಳಾಗಿವೆ. ತಾವು ಮಧ್ಯ ಪ್ರವೇಶಿಸಿ ಕ್ರಮ ತೆಗೆದುಕೊಳ್ಳಿ’ ಎಂದು ನಿವೃತ್ತ ಎಂಜಿನಿಯರ್ ಒಬ್ಬರು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರಿಗೆ ಪತ್ರ ಬರೆದಿದ್ದಾರೆ.
ಖಾಸಗಿ ಕಂಪನಿ ಒಂದರಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ನಿವೃತ್ತಿಯಾಗಿರುವ ಸ್ವಾಮಿ ರುದ್ರ ಆರಾಧ್ಯ ಎಂಬವರು ಸಚಿವರಿಗೆ ಪತ್ರ ಬರೆದಿದ್ದು, ‘ಮೇ 31ರಂದು ನಡೆದಿದ್ದ ಪರೀಕ್ಷೆಯಲ್ಲಿ ನೀಡಲಾಗಿದ್ದ ‘ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್’ ವಿಷಯದ ಪ್ರಶ್ನೆಪತ್ರಿಕೆಯಲ್ಲಿ ಒಟ್ಟು 20 ಪ್ರಶ್ನೆಗಳಿದ್ದು, ಆ ಪೈಕಿ ಏಳು ಪ್ರಶ್ನೆಗಳನ್ನು ಖಾಸಗಿ ಕಂಪನಿ ಒಂದರ ಜಾಲತಾಣದಿಂದ ಯಥಾವತ್ತಾಗಿ ನಕಲು ಮಾಡಲಾಗಿದೆ. ಆದರೆ ಕೆಎಇ ಪ್ರಕಟಿಸಿದ ಕೀ–ಉತ್ತರದಲ್ಲಿ, ಈ ಏಳೂ ಪ್ರಶ್ನೆಗಳು ಸೇರಿ ಒಟ್ಟು ಎಂಟು ಪ್ರಶ್ನೆಗಳ ಉತ್ತರ ತಪ್ಪಾಗಿದೆ’ ಎಂದು ವಿವರಿಸಿದ್ದಾರೆ.
‘ಕೀ–ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಕೆಎಇ ಎರಡು ದಿನಗಳ ಕಾಲಾವಕಾಶ ನೀಡಿತ್ತು. ಆಕ್ಷೇಪಣೆಗಳ ಸ್ಥಿತಿ ಏನು ಎಂದು ತಿಳಿಸುವ ವ್ಯವಸ್ಥೆ ಇಲ್ಲ. ಜೂನ್ 10ರಂದು ಕೆಎಇ ನಾಲ್ಕು ಪ್ರಶ್ನೆಗಳಿಗೆ ಪರಿಷ್ಕೃತ ಕೀ–ಉತ್ತರಗಳನ್ನು ಪ್ರಕಟಿಸಿತು. ಆದರೆ ಆ ನಾಲ್ಕೂ ಉತ್ತರಗಳು ತಪ್ಪಾಗಿವೆ. ಒಂದೇ ಪತ್ರಿಕೆಯಲ್ಲಿ ಒಟ್ಟು 12 ಪ್ರಶ್ನೆಗಳಿಗೆ ತಪ್ಪು ಕೀ–ಉತ್ತರಗಳನ್ನು ಪ್ರಕಟಿಸಿದೆ’ ಎಂದು ವಿವರಿಸಿದ್ದಾರೆ.
‘21,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ತಪ್ಪು–ಕೀ ಉತ್ತರಗಳನ್ನೇ ಆಧರಿಸಿ ಫಲಿತಾಂಶ ನೀಡಿದರೆ ಸರಿಯಾಗಿ ಉತ್ತರ ಬರೆದಿದ್ದವರಿಗೆ ಅನ್ಯಾಯವಾಗುತ್ತದೆ. ಈ ಸಂಬಂಧ ಕೆಎಇಗೆ ಮಾಡಿದ ಇ–ಮೇಲ್‌ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಾರ್ವಜನಿಕ ಸಂಪರ್ಕಾಧಿಕಾರಿಗೆ ಕರೆ ಮಾಡಿದರೆ, ನ್ಯಾಯಾಲಯದಲ್ಲಿ ಅರ್ಜಿಹಾಕಿಕೊಳ್ಳಿ ಎನ್ನುತ್ತಾರೆ. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಇದು. ತಾವು ಮಧ್ಯ ಪ್ರವೇಶಿಸಿ, ಲೋಪಗಳನ್ನು ಸರಿಪಡಿಸಲು ಸೂಚಿಸಬೇಕು’ ಎಂದು ಕೋರಿದ್ದಾರೆ.
ಸ್ವಾಮಿ ರುದ್ರ ಆರಾಧ್ಯ ಅವರು ಕೆಎಇಗೆ, ಕೆಎಇ ನಿರ್ದೇಶಕರಿಗೆ ಕಳುಹಿಸಿದ ಇ–ಮೇಲ್‌ಗಳನ್ನು, ಪ್ರಶ್ನೆ ಪತ್ರಿಕೆ ಮತ್ತು ಕೀ–ಉತ್ತರಗಳ ಸ್ಕ್ರೀನ್‌ಶಾಟ್‌ಗಳನ್ನು ಸಚಿವರಿಗೆ ಬರೆದ ಪತ್ರದಲ್ಲಿ ಲಗತ್ತಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.