ADVERTISEMENT

ಪಿಎಸ್‌ಐ ಪರೀಕ್ಷೆ: ಜೀನ್ಸ್ ಪ್ಯಾಂಟ್‌, ಶೂ ನಿಷೇಧ

ಕೆಇಎಯಿಂದ ವಸ್ತ್ರ ಸಂಹಿತೆ ಜಾರಿ * ನಿಯಮ ಪಾಲಿಸದಿದ್ದರೆ ಕ್ರಮದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2024, 14:40 IST
Last Updated 16 ಜನವರಿ 2024, 14:40 IST
<div class="paragraphs"><p> ಪಿಎಸ್‌ಐ ಪರೀಕ್ಷೆ</p></div>

ಪಿಎಸ್‌ಐ ಪರೀಕ್ಷೆ

   

ಸಾಂದರ್ಭಿಕ ಚಿತ್ರ

ಬೆಂಗಳೂರು: ಪೊಲೀಸ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) 545 ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇದೇ 23ರಂದು ಮರು ಲಿಖಿತ ಪರೀಕ್ಷೆ ನಡೆಸಲಿದ್ದು, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆ ಕಡ್ಡಾಯಗೊಳಿಸಿದೆ.

ADVERTISEMENT

‘ಪುರುಷ ಅಭ್ಯರ್ಥಿಗಳು ಪೂರ್ಣ ತೋಳಿನ ಶರ್ಟ್ ಧರಿಸಲು ಅವಕಾಶ ಇಲ್ಲ. ಅದರ ಬದಲು ಅರ್ಧ ತೋಳಿನ ಶರ್ಟ್‌ ಧರಿಸಬೇಕು. ಸಾಧ್ಯವಾದಷ್ಟು ಕಾಲರ್‌ರಹಿತ ಶರ್ಟ್ ಧರಿಸಬೇಕು. ಜೇಬು ಇಲ್ಲದಿರುವ ಅಥವಾ ಕಡಿಮೆ ಜೇಬುಗಳಿರುವ ಪ್ಯಾಂಟ್‌ ಧರಿಸಬೇಕು. ಹಾಗೆಂದು, ಕುರ್ತಾ, ಪೈಜಾಮ, ಜೀನ್ಸ್ ಪ್ಯಾಂಟ್‌ ಧರಿಸಲು ಅನುಮತಿ ಇಲ್ಲ’ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

‘ಧರಿಸುವ ಬಟ್ಟೆಗಳು ಹಗುರವಾಗಿರಬೇಕು. ಅಂದರೆ, ಜಿಪ್‌ ಪಾಕೆಟ್‌ಗಳು, ದೊಡ್ಡ ಬಟನ್‌ಗಳು, ವಿಸ್ತಾರವಾದ ಕಸೂತಿ ಇರುವ ಬಟ್ಟಗಳು ಬಟ್ಟೆಯಲ್ಲಿ ಇರಬಾರದು. ಪರೀಕ್ಷೆಯ ಹಾಲ್‌ ಒಳಗೆ ಶೂಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸ್ಯಾಂಡಲ್‌ ಅಥವಾ ತೆಳುವಾದ ಅಡಿಭಾಗ ಇರುವ ಚಪ್ಪಲಿಗಳನ್ನು ಧರಿಸುವುದು ಸೂಕ್ತ. ಕುತ್ತಿಗೆಯ ಸುತ್ತ ಯಾವುದೇ ಲೋಹದ ಆಭರಣ ಧರಿಸುವುದು ಅಥವಾ ಕಿವಿಯೋಲೆ, ಉಂಗುರ, ಕಡಗಗಳನ್ನು ಧರಿಸುವುದನ್ನೂ ನಿಷೇಧಿಸಲಾಗಿದೆ’ ಎಂದಿದ್ದಾರೆ.

‘ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‌ಗಳು ಅಥವಾ ಬಟನ್‌ಗಳನ್ನು ಹೊಂದಿರುವ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಪೂರ್ಣ ತೋಳಿನ ಬಟ್ಟೆ, ಜೀನ್ಸ್ ಪ್ಯಾಂಟ್‌ ಧರಿಸಬಾರದು. ಎತ್ತರವಾದ ಹಿಮ್ಮಡಿಯ ಮತ್ತು ದಪ್ಪವಾದ ಅಡಿಭಾಗ ಹೊಂದಿರುವ ಶೂ ಅಥವಾ ಚಪ್ಪಲಿ ಧರಿಸಬಾರದು. ತೆಳುವಾದ ಅಡಿಭಾಗ ಹೊಂದಿರುವ ಚಪ್ಪಲಿ ಧರಿಸುವುದು ಕಡ್ಡಾಯ. ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಬೇರೆ ಯಾವುದೇ ರೀತಿಯ ಲೋಹದ ಆಭರಣಗಳನ್ನು ಧರಿಸಬಾರದು’ ಎಂದೂ ಅವರು ಹೇಳಿದ್ದಾರೆ.

‘ಎಲೆಕ್ಟ್ರಾನಿಕ್‌ ವಸ್ತುಗಳು, ಮೊಬೈಲ್‌ ಫೋನ್‌, ಪೆನ್‌ ಡ್ರೈವ್‌, ಇಯರ್ ಫೋನ್‌, ಮೈಕ್ರೋಫೋನ್‌, ಬ್ಲೂಟೂತ್ ಸಾಧನ, ಕೈ ಗಡಿಯಾರವನ್ನು ಪರೀಕ್ಷಾ ಕೊಠಡಿಯ ಒಳಗೆ ತೆಗೆದುಕೊಂಡು ಹೋಗುವಂತಿಲ್ಲ. ಕುಡಿಯುವ ನೀರಿನ ಬಾಟಲಿ, ತಿಂಡಿ, ತಿನಿಸುಗಳನ್ನು ತರುವುದು, ತಿನ್ನುವುದನ್ನು ನಿಷೇಧಿಸಲಾಗಿದೆ. ತಲೆಯ ಮೇಲೆ ಟೋಪಿ ಧರಿಸಬಾರದು, ಯಾವುದೇ ರೀತಿಯ ಮಾಸ್ಕ್‌ ಧರಿಸುವಂತಿಲ್ಲ’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿರುವ ಅವರು, ನಿಯಮ ಪಾಲಿಸದ ಅಭ್ಯರ್ಥಿಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.