ADVERTISEMENT

ವಿಮಾನ ನಿಲ್ದಾಣ: ಕಲಾತ್ಮಕ ಸ್ಪರ್ಶಕ್ಕೆ ಕೋವಿಡ್ ಅಡ್ಡಿ

ಟರ್ಮಿನಲ್ 2ರಲ್ಲಿ ರಾಜ್ಯದ ಕಲೆ, ಸಂಸ್ಕೃತಿ ಬಿಂಬಿಸುವ ಯೋಜನೆ ನನೆಗುದಿಗೆ

ವರುಣ ಹೆಗಡೆ
Published 27 ಸೆಪ್ಟೆಂಬರ್ 2021, 19:21 IST
Last Updated 27 ಸೆಪ್ಟೆಂಬರ್ 2021, 19:21 IST
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ   

ಬೆಂಗಳೂರು: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ರಾಜ್ಯದ ಕಲೆ ಮತ್ತು ಸಂಸ್ಕೃತಿ ಬಿಂಬಿಸುವ ಯೋಜನೆಯು ಕೋವಿಡ್‌ನಿಂದಾಗಿನನೆಗುದಿಗೆ ಬಿದ್ದಿದೆ.

ನಗರಕ್ಕೆ ಬರುವ ಪ್ರಯಾಣಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಸದ್ಯ ವಿಮಾನ ನಿಲ್ದಾಣದಲ್ಲಿ ಒಂದು ಟರ್ಮಿನಲ್ ಕಾರ್ಯಾಚರಣೆ ಮಾಡುತ್ತಿದೆ.ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಹಾಗೂ ಪ್ರಯಾಣಿಕರಿಗೆ ಉತ್ತಮ ಸೇವೆ ಸಿಗುವಂತೆ ಮಾಡಲು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐ ಎಎಲ್) ಎರಡನೇ ಟರ್ಮಿನಲ್ ನಿರ್ಮಿ ಸುತ್ತಿದೆ.

ಮೊದಲ ಹಂತದಲ್ಲಿ 2.54 ಲಕ್ಷ ಚದರ ಮೀ. ನಿರ್ಮಾಣ ಪ್ರದೇಶವನ್ನು ಹೊಂದಿರುವ ಕಟ್ಟಡ ನಿರ್ಮಿಸಲಾಗಿದೆ. ಎರಡನೇ ಹಂತದಲ್ಲಿ 4.41 ಲಕ್ಷ ಚದರ ಮೀ. ನಿರ್ಮಾಣ ಪ್ರದೇಶವಿರುವ ಕಟ್ಟಡ ನಿರ್ಮಾಣ ನಡೆದಿದೆ.ಅಮೆರಿಕದ ಸ್ಕಿಡ್‌ಮೋರ್‌, ಓವಿಂಗ್‌ ಆ್ಯಂಡ್‌ ಮೆರಿಲ್‌ (ಎಸ್‌ಒಎಂ) ವಾಸ್ತುಶಿಲ್ಪ ಸಂಸ್ಥೆಯ ಸಹಾಯದಿಂದ ಎರಡನೇ ಟರ್ಮಿನಲ್‌ ವಿನ್ಯಾಸ ಸಿದ್ಧಪಡಿಸಲಾ
ಗಿದೆ. ನಾಲ್ಕು ಸ್ತಂಭಗಳನ್ನು ಈ ಟರ್ಮಿನಲ್ ಒಳಗೊಳ್ಳಲಿದೆ. ಇದರಲ್ಲಿ ರಾಜ್ಯದ ಕಲೆ ಮತ್ತು ಸಂಸ್ಕೃತಿಯ ವಿನ್ಯಾಸವೂ ಒಂದಾಗಿದೆ.

ADVERTISEMENT

ಕಳೆದ ವರ್ಷವೇ ಕಲೆ ಮತ್ತು ಸಂಸ್ಕೃತಿಯ ವಿನ್ಯಾಸಕ್ಕೆ ಸಂಬಂಧಿಸಿ ದಂತೆ ಕ್ರಿಯಾಯೋಜನೆ ರೂಪಿಸಿ, ಕಲಾವಿದರಿಂದ ಸಲಹೆ ಹಾಗೂ ವಿನ್ಯಾಸ ಗಳನ್ನು ಆಹ್ವಾನಿಸಲಾಗಿತ್ತು. ಇದಕ್ಕಾಗಿ ಪ್ರತ್ಯೇಕ ಸಮಿತಿಯನ್ನೂ ರಚಿಸಲಾಗಿತ್ತು. ಆದರೆ, ಟರ್ಮಿನಲ್‌ 2ಕ್ಕೆ ಕಲಾತ್ಮಕ ಸ್ಪರ್ಶ ನೀಡುವ ಕಾರ್ಯಕ್ಕೆ ಕೋವಿಡ್ ಅಡ್ಡಿಯಾಗಿದೆ.

ಕಲೆಗೆ ಆದ್ಯತೆ ಅಗತ್ಯ: ‘ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ನಾಡಿನ ಪರಂಪರೆ, ಇತಿಹಾಸ, ಕಲೆ ಮತ್ತು ಸಂಸ್ಕೃತಿಯನ್ನು ಕಟ್ಟಿಕೊಡುವ ಯೋಜನೆ ಕುಂಟುತ್ತಾ ಸಾಗುತ್ತಿದೆ. ಸಮಿತಿಯಲ್ಲಿ ಇಲ್ಲಿನ ಕಲಾವಿದರಿಗೆ ಸ್ಥಾನ ನೀಡಿಲ್ಲ. ಉತ್ತರ ಭಾರತದ ಅಧಿಕಾರಿಗಳನ್ನು ನೇಮಿಸಲಾಗಿದೆ. ಇದರಿಂದಾಗಿ ಟರ್ಮಿನಲ್ 2ರಲ್ಲಿ ಕಲೆ ಮತ್ತು ಸಂಸ್ಕೃತಿಯ ವಿನ್ಯಾಸಕ್ಕೆ ಹಿನ್ನಡೆಯಾಗಿದೆ’ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷಡಿ. ಮಹೇಂದ್ರ ಬೇಸರ ವ್ಯಕ್ತಪಡಿಸಿದರು.

‘ದೆಹಲಿ, ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ವಿಮಾನ ನಿಲ್ದಾಣಗಳಲ್ಲಿ ಅಲ್ಲಿನ ಕಲೆ ಮತ್ತು ಸಂಸ್ಕೃತಿ ಚಿತ್ರಿಸಲಾಗಿದೆ. ಆದರೆ, ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾತ್ರ ಈ ಕಾರ್ಯ ಸಾಕಾರಗೊಂಡಿಲ್ಲ. ಕಲೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಅಕಾ ಡೆಮಿಗಳು, ಸಂಘ–ಸಂಸ್ಥೆಗಳ ಪ್ರತಿನಿಧಿ ಗಳನ್ನು ಒಳಗೊಂಡ ಸಮಿತಿಯನ್ನು ಪುನರ್‌ ರಚಿಸಬೇಕು’ ಎಂದರು.

‘4 ಸ್ತಂಭಗಳಲ್ಲಿ ಬದಲಾವಣೆಯಿಲ್ಲ’

‘ಟರ್ಮಿನಲ್ 2ರಲ್ಲಿ ನಾಲ್ಕು ಸ್ತಂಭಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮೊದಲನೇ ಸ್ತಂಭದಲ್ಲಿ ಉದ್ಯಾನ, ಎರಡನೇ ಸ್ತಂಭದಲ್ಲಿ ತಂತ್ರಜ್ಞಾನ, ಮೂರನೇ ಸ್ತಂಭದಲ್ಲಿ ಪರಿಸರ ವ್ಯವಸ್ಥೆ ಹಾಗೂ ನಾಲ್ಕನೇ ಸ್ತಂಭದಲ್ಲಿ ಪರಂಪರೆ ಮತ್ತು ಸಂಸ್ಕೃತಿಯನ್ನು ವಿನ್ಯಾಸಗೊಳಿಸಲಾಗುತ್ತದೆ. ಇದು ಪ್ರಗತಿಯಲ್ಲಿದೆ.
ಇಲ್ಲಿನ ಕಲಾವಿದರಿಗೂ ಆದ್ಯತೆ ನೀಡಲಾಗುತ್ತದೆ’ ಎಂದು ಬಿಐಎಎಲ್ ಅಧಿಕಾರಿಯೊಬ್ಬರು ತಿಳಿಸಿದರು.

‘ಕೋವಿಡ್‌ ನಿರ್ಬಂಧ ಹಾಗೂ ಕಾರ್ಮಿಕರ ಕೊರತೆಯಿಂದ ಟರ್ಮಿನಲ್ 2ರ ಕಾಮಗಾರಿ ವಿಳಂಬವಾಗಿದೆ. ಇಲ್ಲಿನ ಕಲೆ ಮತ್ತು ಸಂಸ್ಕೃತಿಗೆ ವಿಮಾನ ನಿಲ್ದಾಣದಲ್ಲಿ ಆದ್ಯತೆ ನೀಡಲಾಗುತ್ತದೆ. ನಾಲ್ಕು ಸ್ತಂಭಗಳಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಆದರೆ, ಸ್ವಲ್ಪ ವಿಳಂಬವಾಗುತ್ತದೆ’ ಎಂದರು.

ಸಾಂಪ್ರದಾಯಿಕ ಕಲೆಗೆ ಆದ್ಯತೆ

ಟರ್ಮಿನಲ್‌ 2ರಲ್ಲಿ ಕಲೆ ಮತ್ತು ಸಾಂಸ್ಕೃತಿಕ ವಿನ್ಯಾಸಕ್ಕೆ ಸಂಬಂಧಿಸಿದಂತೆ ರೂಪಿಸ ಲಾದ ಕ್ರಿಯಾಯೋಜನೆಯಲ್ಲಿ ಸಾಂಪ್ರದಾಯಿಕ ಕಲೆಗೆ ಆದ್ಯತೆ ನೀಡಲಾಗಿತ್ತು. ನಿಲ್ದಾಣದಿಂದ ವಿಮಾನಗಳು ಇರುವ ಸ್ಥಳದವರೆಗೆ ಶಿಲ್ಪ ಕಲಾಕೃತಿಗಳು ಹಾಗೂ ಲಲಿತ ಕಲೆಗಳನ್ನು ನಿರ್ಮಿಸುವುದು ಯೋಜನೆಯಲ್ಲಿತ್ತು. ಅದೇ ರೀತಿ, ಡಿಜಿಟಲ್ ಪರದೆಗಳಲ್ಲಿ ನಾಡಿನ ಸಂಸ್ಕೃತಿ, ಐತಿಹಾಸಿಕ ಸ್ಥಳ ಸೇರಿದಂತೆ ವೈವಿಧ್ಯತೆಯನ್ನು ಪ್ರಯಾಣಿಕರಿಗೆ ಪರಿಚಯಿಸಲು ವಿನ್ಯಾಸ ರೂಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.