ADVERTISEMENT

ಕೇರಳ ಗಡಿಯಲ್ಲಿ ಕಟ್ಟುನಿಟ್ಟು: ಕೋವಿಡ್‌ ನೆಗೆಟಿವ್ ವರದಿ ಕಡ್ಡಾಯ

ತಲಪಾಡಿ ಚೆಕ್‌ಪೋಸ್ಟ್‌ ಬಳಿ ಗೊಂದಲ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 21:50 IST
Last Updated 22 ಫೆಬ್ರುವರಿ 2021, 21:50 IST
ತಲಪಾಡಿಯಲ್ಲಿ ಸೋಮವಾರ ಕೇರಳದಿಂದ ಮಂಗಳೂರಿಗೆ ಬರುವವರ ತಪಾಸಣೆ ನಡೆಸಲಾಯಿತು
ತಲಪಾಡಿಯಲ್ಲಿ ಸೋಮವಾರ ಕೇರಳದಿಂದ ಮಂಗಳೂರಿಗೆ ಬರುವವರ ತಪಾಸಣೆ ನಡೆಸಲಾಯಿತು   

ಮಂಗಳೂರು: ಕೇರಳದಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತವು ಕೇರಳದಿಂದ ರಾಜ್ಯಕ್ಕೆ ಬರುವವರಿಗೆ ಕೆಲವು ನಿರ್ಬಂಧಗಳನ್ನು ಹೇರಿದೆ. ಗಡಿ ಪ್ರದೇಶದ ನಾಗರಿಕರಿಂದ ಈ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ತಲಪಾಡಿಯಲ್ಲಿ ಆರೋಗ್ಯ ಅಧಿಕಾರಿಗಳು ಸೋಮವಾರ ಚೆಕ್‌ಪೋಸ್ಟ್‌ ಆರಂಭಿಸಿದ್ದಾರೆ. ಕೋವಿಡ್‌ ನೆಗೆಟಿವ್‌
ವರದಿ ಇರುವವರನ್ನು ಮಾತ್ರ ಗಡಿಯೊಳಗೆ ಬರಲು ಬಿಡುವುದರಿಂದ, ಕೇರಳದಿಂದ ನಗರಕ್ಕೆ ಬರುವ ವಿದ್ಯಾರ್ಥಿಗಳು, ನೌಕರರು, ರೋಗಿಗಳು ಹಾಗೂ ಪ್ರಯಾಣಿಕರು ಗೊಂದಲಕ್ಕೆ ಒಳಗಾದರು.

‘ಆರ್‌ಟಿಪಿಸಿಆರ್‌ ವರದಿ ಕೈಯಲ್ಲಿದ್ದಲ್ಲಿ ಮಾತ್ರ ಮಂಗಳವಾರದಿಂದ ಕರ್ನಾಟಕ ಪ್ರವೇಶಕ್ಕೆ ಅವಕಾಶ ಇರುತ್ತದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಆಕ್ರೋಶ: ಕೋವಿಡ್‌ ನೆಗೆಟಿವ್‌ ಪ್ರಮಾಣಪತ್ರ ಕಡ್ಡಾಯ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಗಡಿ ಭಾಗದ ಜನರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವಿರುದ್ಧ ಘೋಷಣೆ ಕೂಗಿ, ರಸ್ತೆಯಲ್ಲಿ ಮಲಗಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಮಂಜೇಶ್ವರ ಇನ್‌ಸ್ಪೆಕ್ಟರ್‌ ಅರುಣ್ ದಾಸ್, ಕಾಸರಗೋಡು ಜಿಲ್ಲಾಡಳಿತದ ಜತೆಗೆ ಮಾತುಕತೆ ನಡೆಸುವುದಾಗಿ ತಿಳಿಸಿ, ಪ್ರತಿಭಟನಕಾರರ ಮನವೊಲಿಸಿದರು. ಮಂಗಳವಾರವೂ ತೊಂದರೆಯಾದಲ್ಲಿ ಪ್ರತಿಭಟನೆ ಮುಂದುವರಿಸುವುದಾಗಿ ಹೋರಾಟಗಾರರು ಹೇಳಿದ್ದಾರೆ.

‘ಅಂತರ ರಾಜ್ಯ ಗಡಿಗಳಲ್ಲಿ ವಾಹನಗಳಿಗೆ ತಡೆಯೊಡ್ಡಬಾರದು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಈ ಆದೇಶವನ್ನು ಮುಂದಿಟ್ಟುಕೊಂಡು ನ್ಯಾಯಾಲಯದ ಮೆಟ್ಟಿಲು ಹತ್ತುತ್ತೇವೆ’ ಎಂದು ಕಾಸರಗೋಡು ಜಿಲ್ಲಾ ಪಂಚಾಯ್ತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಹೇಳಿದ್ದಾರೆ.

ಗಡಿಯಲ್ಲಿಯಾರೇ ನಿರ್ಬಂಧ ಹೇರಿದರೂ ಕಾಸರಗೋಡಿನ ಜನರು ತೊಂದರೆ ಅನುಭವಿಸಬೇಕಾಗುತ್ತದೆ. ಈ ಆದೇಶ ಕೂಡಲೇ ಹಿಂಪಡೆಯಬೇಕು ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ಕೆ. ಶ್ರೀಕಾಂತ್‌ ಅವರು ಕರ್ನಾಟಕದ ಮುಖ್ಯಮಂತ್ರಿಯನ್ನು
ಒತ್ತಾಯಿಸಿದ್ದಾರೆ.

ನಾಲ್ಕು ಕಡೆ ಚೆಕ್‌ಪೋಸ್ಟ್‌: ಕೇರಳದಿಂದ ಜಿಲ್ಲೆಗೆ ಬರುವ ಜನರಿಗೆ ತಲಪಾಡಿ, ಬಂಟ್ವಾಳ ತಾಲ್ಲೂಕಿನ ಸಾರಡ್ಕ, ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು, ಮೇಣಾಲ ಹಾಗೂ ಸುಳ್ಯ ತಾಲ್ಲೂಕಿನ ಜಾಲ್ಸೂರು ಮೂಲಕ ಮಾತ್ರ ಅನುಮತಿ ನೀಡಲಾಗಿದೆ.

ಉಳಿದೆಲ್ಲಾ ಗಡಿ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿದ್ದು, ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ತೆರೆದಿರುವ ಗಡಿ ಭಾಗದಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದ್ದು, ಕೋವಿಡ್‌ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಒಳಬರಲು ಅವಕಾಶ ನೀಡಲಾಗುತ್ತಿದೆ.

ಬಸ್‌ ಪ್ರಯಾಣಕ್ಕೂ ಕಡ್ಡಾಯ: ಬಸ್‌ಗಳಲ್ಲಿ ಪ್ರಯಾಣಿಸುವವರೂ ಕಡ್ಡಾಯವಾಗಿ ನೆಗೆಟಿವ್ ವರದಿ ಹೊಂದಿರಬೇಕು. ವರದಿ ಪರಿಶೀಲಿಸಿದ ಬಳಿಕವೇ ಪ್ರಯಾಣಿಸಲು ಅವಕಾಶ ನೀಡಬೇಕು. ಅದಕ್ಕೆ ಆಯಾ ಬಸ್‌ನ ನಿರ್ವಾಹಕರು ಕ್ರಮ ವಹಿಸಬೇಕು. ನಿತ್ಯ ಪ್ರಯಾಣಿಸುವ ನೌಕರರು ಹಾಗೂ ವಿದ್ಯಾರ್ಥಿಗಳು ಪ್ರತಿ 15 ದಿನಕ್ಕೊಮ್ಮೆ ಕೋವಿಡ್ ನೆಗೆಟಿವ್ ವರದಿಯನ್ನು ಚೆಕ್‌ಪೋಸ್ಟ್‌ಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ಸೂಚಿಸಲಾಗಿದೆ.

ವರದಿ ಕಡ್ಡಾಯ: ವಿಜಯಪುರ–ಸೋಲಾಪುರರಾಷ್ಟ್ರೀಯ ಹೆದ್ದಾರಿಯ ಧೂಳಖೇಡ ಚೆಕ್‌ಪೋಸ್ಟ್‌ ಮತ್ತು ಚಡಚಣ– ಪಂಢರಾಪುರ ನಡುವಿನ ಶಿರಡೋಣ ಚೆಕ್ ಪೋಸ್ಟ್‌ ಮೂಲಕ ಕರ್ನಾಟಕಕ್ಕೆ ಪ್ರವೇಶಿಸುವ ಜನರಿಗೆ ಕೋವಿಡ್ ತಪಾಸಣೆ ನಡೆಸಿದ ಬಳಿಕವೇ ಬಿಡಲಾಗುತ್ತಿದೆ. ಕೋವಿಡ್‌ ಪರೀಕ್ಷಾ ವರದಿ ಇಲ್ಲದೇ ಬರುವವರನ್ನು ಮರಳಿ ಕಳುಹಿಸಲಾಗುತ್ತಿದೆ.

‘ಮಹಾರಾಷ್ಟ್ರದಿಂದ ಬರುವವರು 72 ಗಂಟೆಯ ಒಳಗಿನ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯವಾಗಿ ತರಬೇಕು. ನೆಗೆಟಿವ್ ವರದಿ ಇಲ್ಲದೇ ಜಿಲ್ಲೆಗೆ ಬರುವವರನ್ನು ವರದಿ ಬರುವರೆಗೂ ಕಡ್ಡಾಯವಾಗಿ ಕ್ವಾರಂಟೈನ್‍ನಲ್ಲಿ ಇರಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ತಿಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.