ADVERTISEMENT

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಈಶ್ವರ ಖಂಡ್ರೆ ಹೆಸರು ಮುನ್ನೆಲೆಗೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2025, 22:53 IST
Last Updated 4 ಏಪ್ರಿಲ್ 2025, 22:53 IST
<div class="paragraphs"><p>ಈಶ್ವರ ಖಂಡ್ರೆ</p></div>

ಈಶ್ವರ ಖಂಡ್ರೆ

   

– ‍ಪ್ರಜಾವಾಣಿ ಚಿತ್ರ

ನವದೆಹಲಿ: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ಸಮುದಾಯದ ನಾಯಕರೂ ಆದ ಅರಣ್ಯ ಸಚಿವ ಈಶ್ವರ ಖಂಡ್ರೆ ಹೆಸರು ಮುನ್ನೆಲೆಗೆ ಬಂದಿದೆ. ಈ ಕುರಿತು ಮುಖ್ಯಮಂತ್ರಿಯೇ ಪಕ್ಷದ ಹೈಕಮಾಂಡ್‌ ಬಳಿ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ.

ADVERTISEMENT

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಲೋಕಸಭಾ ಚುನಾವಣೆಯವರೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಹೈಕಮಾಂಡ್‌ 2023ರಲ್ಲಿ ಪ್ರಕಟಿಸಿತ್ತು. ಲೋಕಸಭಾ ಚುನಾವಣೆ ಮುಗಿದು 10 ತಿಂಗಳು ಕಳೆದಿವೆ.  

ಸಿದ್ದರಾಮಯ್ಯ ಸಂಪುಟದಲ್ಲಿ ಎರಡು ಪ್ರಭಾವಿ ಖಾತೆಗಳನ್ನು ಹೊಂದಿರುವ ಶಿವಕುಮಾರ್, ಕೆ‍‍ಪಿಸಿಸಿ ಅಧ್ಯಕ್ಷರಾಗಿ ಐದು ವರ್ಷ ಪೂರೈಸಿದ್ದಾರೆ. ಹಾಗಾಗಿ, ಅವರನ್ನು ಬದಲಾವಣೆ ಮಾಡಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರು ಹೈಕಮಾಂಡ್‌ ಮೇಲೆ ಒತ್ತಡ ಹೇರಿದ್ದರು. ಸಚಿವ ಸ್ಥಾನದ ಜತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನೂ ನಿಭಾಯಿಸಲು ಸಿದ್ದ ಎಂದು ಇಬ್ಬರೂ ಸಂದೇಶ ರವಾನಿಸಿದ್ದರು.

ಕಾಂಗ್ರೆಸ್‌ ಸರ್ಕಾರಕ್ಕೆ ಎರಡು ವರ್ಷ ತುಂಬುವ ಹೊತ್ತಿಗೆ ಕೆಪಿಸಿಸಿ ಅಧ್ಯಕ್ಷರನ್ನು ಬದಲಾಯಿಸಬೇಕು ಎಂಬುದು ಸಿದ್ದರಾಮಯ್ಯ ಬಣದ ಕಾರ್ಯತಂತ್ರ. ಈ ಸಂಬಂಧ ಖಂಡ್ರೆ ಅವರೊಂದಿಗೆ ಸಿದ್ದರಾಮಯ್ಯ ಸಮಾಲೋಚಿಸಿದ್ದಾರೆ. ಆದರೆ, ಅಕ್ಟೋಬರ್‌ವರೆಗೆ ಮುಂದುವರಿಯಬೇಕು ಎಂಬುದು ಶಿವಕುಮಾರ್ ಹಂಬಲ. ಹೈಕಮಾಂಡ್‌ ಹೆಣೆದ ಸೂತ್ರದ ಪ್ರಕಾರ, ಅಧಿಕಾರ ಹಸ್ತಾಂತರದವರೆಗೆ ಗಾದಿಯಲ್ಲಿ ಮುಂದುವರಿಯಬೇಕು ಎಂಬುದು ಅವರ ಆಲೋಚನೆ.

‘ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಬಿಬಿಎಂಪಿ ಚುನಾವಣೆಯವರೆಗೆ ಅಧ್ಯಕ್ಷನಾಗಿ ಮುಂದುವರಿಯುತ್ತೇನೆ’ ಎಂದು ರಾಷ್ಟ್ರೀಯ ನಾಯಕರಲ್ಲಿ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಘೋಷಣೆಯಾದರೆ ಅಧ್ಯಕ್ಷರ ಬದಲಾವಣೆ ಕೂಗೂ ತಣ್ಣಗಾಗುವ ಸಾಧ್ಯತೆ ಇದೆ.

ಖಂಡ್ರೆ ಅವರು ಈ ಹಿಂದೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದರು. ವೀರಶೈವ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ. ಮಾರ್ಚ್‌ 28ರಂದು ನವದೆಹಲಿಗೆ ಬಂದಿದ್ದ ಖಂಡ್ರೆ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಇಲಾಖೆಯಲ್ಲಿ ಎರಡು ವರ್ಷಗಳಲ್ಲಿ ಕೈಗೊಂಡ ಪ್ರಗತಿಯ ವರದಿ ಸಲ್ಲಿಸಿದ್ದರು. ಗುರುವಾರ ದೆಹಲಿಯಲ್ಲಿದ್ದ ಅವರು ಹಲವು ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

‘ಕೆಪಿಸಿಸಿ ಅಧ್ಯಕ್ಷನಾಗಲು ಸಿದ್ದ. ಆದರೆ, ಕನಿಷ್ಠ ಒಂದು ವರ್ಷ ಸಚಿವ ಸ್ಥಾನದಲ್ಲಿ ಮುಂದುವರಿಸಬೇಕು’ ಎಂದು ಖಂಡ್ರೆ ಷರತ್ತು ಒಡ್ಡಿದ್ದಾರೆ. ಇದಕ್ಕೆ ರಾಷ್ಟ್ರೀಯ ನಾಯಕರು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಸಚಿವ ಸಂಪುಟ ಪುನರ್‌ ರಚನೆಯ ಸಂದರ್ಭದಲ್ಲಿ ಸಚಿವ ಸ್ಥಾನ ತ್ಯಾಗ ಮಾಡಬೇಕಾದೀತು. ಈ ಕುರಿತು ಮುಖ್ಯಮಂತ್ರಿ ವಿವೇಚನೆಗೆ ಬಿಡಲಾಗುವುದು’ ಎಂದು ಸೂಚ್ಯವಾಗಿ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ. 

ಮೇ ತಿಂಗಳಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಎರಡು ವರ್ಷ ತುಂಬಲಿದೆ. ಆ ಬಳಿಕವೇ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಹೈಕಮಾಂಡ್‌ ನಾಯಕರು ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ ಎಂದೂ ಮೂಲಗಳು ಹೇಳಿವೆ. 

ವ್ಯಕ್ತಿಗಿಂತ ಪಕ್ಷ ಮುಖ್ಯ: ಡಿಕೆಶಿ

‘ಪಕ್ಷ ಹೇಳಿದ ರೀತಿಯಲ್ಲಿ ಮುನ್ನಡೆಯುತ್ತೇನೆ. ಕೆಪಿಸಿಸಿ ಅಧ್ಯಕ್ಷನಾಗಿ ಐದು ವರ್ಷ ಸೇವೆ ಸಲ್ಲಿಸಿದ್ದೇನೆ. ಪಕ್ಷಕ್ಕೆ ಒಳ್ಳೆಯದಾಗುವುದು ಮುಖ್ಯ. ವ್ಯಕ್ತಿಗಿಂತ ಪಕ್ಷ ಮುಖ್ಯ’ ಎಂದು ಶಿವಕುಮಾರ್ ಮಾರ್ಮಿಕವಾಗಿ ಹೇಳಿದರು. 

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ನಿಮ್ಮ ನಿಲುವೇನು ಎಂಬ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದರು.

‘ಕಳೆದ ಹಲವಾರು ದಿನಗಳಿಂದ ಸೋನಿಯಾ ಗಾಂಧಿ ಅವರನ್ನು ಶಿವಕುಮಾರ್ ಭೇಟಿಯಾಗಿಲ್ಲ. ಭೇಟಿಯಾದರೆ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ನಿಶ್ಚಿತ ಎಂಬ ಮಾತು ಇದೆಯಲ್ಲ’ ಎಂಬ ಪ್ರಶ್ನೆಗೆ
ಪ್ರತಿಕ್ರಿಯಿಸಿದ ಅವರು, ‘ಭೇಟಿಯಾಗಿಲ್ಲ ಎಂದು ಹೇಳಿದವರು ಯಾರು? ಸಾಕ್ಷ್ಯವಾಗಿ ಫೋಟೊಗಳನ್ನು ತೋರಿಸಲೇ’ ಎಂದು ಪ್ರಶ್ನಿಸಿದರು.

ಸದ್ಯಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಾಲಿ ಇಲ್ಲ. ಯಾರನ್ನು ಎಲ್ಲಿ ಕೂರಿಸಬೇಕು ಎಂಬುದು ಹೈಕಮಾಂಡ್‌ಗೆ ಗೊತ್ತಿದೆ. ಹೈಕಮಾಂಡ್‌ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸುತ್ತೇವೆ. ಸತೀಶ ಜಾರಕಿಹೊಳಿ ಆತ್ಮೀಯರು. ಕಾರ್ಯಾಧ್ಯಕ್ಷರಾಗಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಮುಂದೆಯೂ ಸಂಘಟನೆಗಾಗಿ ಕೆಲಸ ಮಾಡುತ್ತೇವೆ. ನಮ್ಮಲ್ಲಿ ಯಾವುದೇ ಪೈಪೋಟಿ ಇಲ್ಲ. ಯಾರೇ ಕೆಪಿಸಿಸಿ ಅಧ್ಯಕ್ಷ ರಾದರೂ ಖುಷಿ ಇದೆ. ಊಹಾಪೋಹದ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲ. 
ಈಶ್ವರ ಖಂಡ್ರೆ, ಅರಣ್ಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.