ADVERTISEMENT

ಸಂಪುಟ ವಿಸ್ತರಿಸಿದವರೇ ಅಸಮಾಧಾನ ಸರಿಪಡಿಸಲಿ: ಖೆರ್ಗೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 17:21 IST
Last Updated 23 ಡಿಸೆಂಬರ್ 2018, 17:21 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಕಲಬುರ್ಗಿ: ‘ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಅಸಮಾಧಾನವನ್ನು ಸಚಿವ ಸ್ಥಾನ ಹಂಚಿಕೆ ಮಾಡಿದವರೇ ಸರಿಪಡಿಸಬೇಕು’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದರು.

‘ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಈ ನಿರ್ಣಯ ತೆಗೆದುಕೊಂಡಿದ್ದಾರೆ. ಯಾವ ದೃಷ್ಟಿಯಿಂದ ಹೊಸ ಸ್ಥಾನ ಹಂಚಿಕೆ ಮಾಡಿದ್ದಾರೆ ಎಂಬುದು ಅವರ ವಿವೇಚನೆಗೇ ಬಿಟ್ಟಿದ್ದು. ಅಸಮಾಧಾನಗೊಂಡವರನ್ನು ಅವರೇ ಸಂಬಾಳಿಸಬೇಕು’ ಎಂದು ಅವರು ನಗರದಲ್ಲಿ ಭಾನುವಾರ ಮಾಧ್ಯಮದವರಿಗೆ ತಿಳಿಸಿದರು.

‘ಕಲಬುರ್ಗಿ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನಕ್ಕಾಗಿ ನಾನು ಪ್ರಯತ್ನಿಸಿದೆ. ಕೊನೆ ಘಳಿಗೆಯಲ್ಲಿ ಪ್ರಯತ್ನ ಕೈಗೂಡಲಿಲ್ಲ. ಈ ಬಗ್ಗೆ ನನಗೂ ನೋವಾಗಿದೆ’ ಎಂದರು.

ADVERTISEMENT

‘ನಾನು ತೀವ್ರ ಒತ್ತಡ ಹೇರಿದ್ದರಿಂದಲೇ ಜೇವರ್ಗಿ ಶಾಸಕ ಡಾ.ಅಜಯಸಿಂಗ್ ಅವರಿಗೆ ‘ನವದೆಹಲಿ ವಿಶೇಷ ಪ್ರತಿನಿಧಿ’ ಸ್ಥಾನ ನೀಡಿದ್ದಾರೆ. ಈ ಬಗ್ಗೆ ರಾಜ್ಯದ ನಾಯಕರನ್ನು ಕೇಳಿದ್ದೆ. ಹೈಕಮಾಂಡ್ ಸೂಚನೆಯಂತೆ ಸಂಪುಟ ಪುನರ್ ರಚಿಸಿರುವುದಾಗಿ ಅವರು ನನಗೆ ತಿಳಿಸಿದ್ದಾರೆ’ ಎಂದು ಹೇಳಿದರು.

‘ಹೈ ಕಮಾಂಡ್ ತೆಗೆದುಕೊಂಡ ನಿರ್ಣಯಕ್ಕೆ ಎಲ್ಲರೂ ಬದ್ಧರಾಗಿರಬೇಕು. ಸಚಿವ ಸ್ಥಾನ ಸಿಗದ ಕಾರಣ ಕೆಲವರು ನನ್ನನ್ನು ಹಳಿದಿದ್ದಾರೆ. ಇದು ಸಹಜವಾಗಿ ನಡೆಯುವಂಥದ್ದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.