ADVERTISEMENT

ಖರ್ಗೆ–ದೇವೇಗೌಡ ಹಳೆ ಹುಲಿಗಳು, ಅವರು ಸೇರಿದರೆ ಏನಾಗುತ್ತದೆಯೋ: ಲಕ್ಷ್ಮಣ ಸವದಿ

ಉಪ ಮಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 7:33 IST
Last Updated 4 ಡಿಸೆಂಬರ್ 2019, 7:33 IST
   

ಅಥಣಿ: ‘ಡಿ. 9ರ ಬಳಿಕ ಸಿಹಿ ಸುದ್ದಿ ನೀಡುತ್ತೇವೆ ಎಂದು ಕಾಂಗ್ರೆಸ್‌ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಅವರ ಪಕ್ಷದ ಕಾರ್ಯಕರ್ತರಿಗಷ್ಟೇ ಸಿಹಿ ಎನಿಸಬಹುದು. ಅವರು ಏನು ಮಾಡುತ್ತಾರೆ ಎನ್ನುವುದನ್ನು ನಾವೂ ಕುತೂಹಲದಿಂದ ನೋಡುತ್ತಿದ್ದೇವೆ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಖರ್ಗೆ ಅನುಭವಿ. ಅವರು ಬೀಸು ಹೇಳಿಕೆ ನೀಡುವುದಿಲ್ಲ. ಅವರ ಮಾತಿಗೆ ಬಹಳ ಮೌಲ್ಯವಿದೆ. ಅವರಮಾತುಗಳನ್ನು ಆ ಪಕ್ಷದ ಮುಖಂಡರು ಕೇಳುತ್ತಾರೆ’.‘ಖರ್ಗೆ ಅವರ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಅವರು ಯಾವತ್ತೂ ಹಗುರವಾಗಿ ಮಾತನಾಡುವುದಿಲ್ಲ. ಊಹಾಪೋಹ ಹುಟ್ಟು ಹಾಕುವವರಲ್ಲ. ಬಣ್ಣದ ಕಾಗೆ ಹಾರಿಸುವವರಲ್ಲ. ಅವರಿಗಿಂತ ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರ ಅನುಭವ ದೊಡ್ಡದು. ಇಬ್ಬರೂ ಸೇರಿದರೆ ಏನಾದರೂ ಮಾಡುತ್ತಾರೆ. ಎರಡು ಹಳೆ ಹುಲಿಗಳು ಒಂದೆಡೆ ಸೇರಿದರೆ ಏನೇನಾಗುತ್ತದೆಯೋ ಹೇಳಲು ಆಗುವುದಿಲ್ಲ. ಏನೋ ಇದೆ ಎನ್ನುತ್ತಾರಲ್ಲಾ ಹಾಗೆ ಏನೋ ಆಗಲಿದೆ’ ಎಂದು ಹೇಳಿದರು.

‘ಡಿ. 9ರ ಬಳಿಕ ಕಾಂಗ್ರೆಸ್‌, ಜೆಡಿಎಸ್‌ ಎರಡು ಪಕ್ಷಗಳಲ್ಲೂ ‌‌ಬದಲಾವಣೆ ಆಗುತ್ತದೆ. ಆ ಪಕ್ಷಗಳ ಕನಸು ಭಗ್ನವಾಗುತ್ತದೆ; ನಿರಾಶೆಯನ್ನೂ ಅನುಭವಿಸಲಿವೆ’ ಎಂದರು.

ADVERTISEMENT

‘ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ’ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಮನುಷ್ಯ ಆಸೆ ಪಡುವುದು ತಪ್ಪಿಲ್ಲ. ನನಗೆ ಅವಕಾಶ ಸಿಕ್ಕರೆ ಪ್ರಧಾನಿಯಾಗಬೇಕು ಎನ್ನುವ ಆಸೆ ಇದೆ. ಆದರೆ ಆಗದೇ ಇರುವುದನ್ನು ಹೇಳುವುದು ಸರಿಯಲ್ಲ’ ಎಂದು ತಿರುಗೇಟು ನೀಡಿದರು.

‘ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಶಾಸಕ ಡಿ.ಕೆ. ಶಿವಕುಮಾರ್‌ ಜೋಡೆತ್ತುಗಳು ಆಗಾಗ ಭೇಟಿಯಾಗುತ್ತಿರುತ್ತಾರೆ’ ಎಂದರು.

‘ಉಪ ಚುನಾವಣೆ ಮುಗಿದ ಒಂದು ವಾರದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ. ಹಿರಿಯ ಶಾಸಕ ಉಮೇಶ ಕತ್ತಿ ಅವರಿಗೂ ಮಂತ್ರಿ ಸ್ಥಾನ ಸಿಗಬಹುದು. ಬೆಳಗಾವಿ ಜಿಲ್ಲೆ ಬಗ್ಗೆ ಚರ್ಚಿಸಿದರೆ ನಾನೂ ಕತ್ತಿ ಅವರ ಹೆಸರು ಹೇಳುತ್ತೇನೆ. ಬಸನಗೌಡ ಪಾಟೀಲ ಅವರಿಗೂ ಸಚಿವರಾಗಬೇಕು ಎನ್ನುವ ಆಸೆ ಇದೆ. ಅವರಿಗೆ ಕೊಟ್ಟರೆ ತಪ್ಪಿಲ್ಲ. ವಿಜಯಪುರ ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕಂತಾಗುತ್ತದೆ. ಅಂತಿಮ ನಿರ್ಣಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರದ್ದೇ ಆಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.