ADVERTISEMENT

ರಾಜ್ಯ ರಾಜಕಾರಣಕ್ಕೆ ಖರ್ಗೆ ಬಂದರೆ ತಪ್ಪು ಭಾವಿಸುವ ಅಗತ್ಯ ಇಲ್ಲ: ಜಿ. ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 6:14 IST
Last Updated 29 ಜುಲೈ 2025, 6:14 IST
<div class="paragraphs"><p>ಜಿ. ಪರಮೇಶ್ವರ, ಗೃಹ ಸಚಿವ</p></div>

ಜಿ. ಪರಮೇಶ್ವರ, ಗೃಹ ಸಚಿವ

   

ಬೆಂಗಳೂರು: ‘ಮಲ್ಲಿಕಾರ್ಜುನ ಖರ್ಗೆಯವರು ನಮ್ಮ ಪಕ್ಷದಲ್ಲಿ ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಮುಖ್ಯಮಂತ್ರಿ ಯಾರು ಆಗಬೇಕೆಂದು ನಿರ್ಧಾರ ಮಾಡುವವರು ಅವರು. ಒಂದು ವೇಳೆ ಅವರು ರಾಜ್ಯ ರಾಜಕಾರಣಕ್ಕೆ ಬರುತ್ತೇನೆ ಎಂದು ಹೇಳಿದರೆ ಯಾರೂ ತಪ್ಪು ಭಾವಿಸುವ ಅಗತ್ಯ ಇಲ್ಲ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ವಿಜಯಪುರದಲ್ಲಿ ಮಾತನಾಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಸ್ಥಾನದ ಬಗ್ಗೆ ನೀಡಿದ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ‘ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯಲ್ಲಿ ತಪ್ಪೇನಿಲ್ಲ. ಅವರು ಹಿರಿಯರು, ಸುದೀರ್ಘ ಅನುಭವ ಇರುವವರು. ಎಲ್ಲ ಹುದ್ದೆಗಳಿಗೂ ಸಮರ್ಥರು’ ಎಂದರು.

ADVERTISEMENT

‘ಖರ್ಗೆಯವರ ಬಗ್ಗೆ ಈಗ ಯಾರ‍್ಯಾರು ಮಾತಾಡಿದ್ದಾರೋ ಅವರ‍್ಯಾರೂ ಖರ್ಗೆಯವರ ಹಂತಕ್ಕೆ ಬೆಳೆದವರಲ್ಲ. ಖರ್ಗೆಯವರು ಏನಾದರೂ ಹೇಳಿದಾಗ ತಪ್ಪಾಗಿ ಭಾವಿಸುವ ಅಗತ್ಯ ಇಲ್ಲ. ರಾಜ್ಯಕ್ಕೆ ಬರುತ್ತೇನ ಎಂದು ಹೇಳಿದರೆ ಅದರಲ್ಲಿ ತಪ್ಪೇನಿಲ್ಲ’ ಎಂದರು.

ಸಚಿವರು, ಶಾಸಕರ ಜೊತೆ ಸಭೆ

 ‘ಇಂದಿನಿಂದ ಸಚಿವರು, ಶಾಸಕರ ಜೊತೆ  ಮುಖ್ಯಮಂತ್ರಿ ಜಿಲ್ಲಾವಾರು ಸಭೆ ಮಾಡುತ್ತಿದ್ದಾರೆ. ಅನುದಾನ, ಕ್ಷೇತ್ರದ ಅಭಿವೃದ್ಧಿ ಸಮಸ್ಯೆ ಬಗ್ಗೆ ಚರ್ಚೆ ಮಾಡುತ್ತಾರೆ. 2017-18ರಲ್ಲೂ ಇದೇ ರೀತಿ ಸಭೆಗಳು ನಡೆದಿದ್ದವು. ಮುಂದಿನ ಎರಡೂವರೆ ವರ್ಷದಲ್ಲಿ ಹೇಗೆಲ್ಲ ಅಭಿವೃದ್ಧಿ ಮಾಡಬೇಕು ಎಂದು ಯೋಜನೆ ಹಾಕಿಕೊಳ್ಳಲು ಈ ಸಭೆಯಿಂದ ಅನುಕೂಲ ಆಗಲಿದೆ’ ಎಂದರು. 

‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸ್ವಲ್ಪ ಹುಷಾರಿಲ್ಲ. ಅವರೂ ಮುಖ್ಯಮಂತ್ರಿ ಜೊತೆ ಸಭೆಯಲ್ಲಿ ಇರುತ್ತಾರೆ ಅಂದುಕೊಂಡಿದ್ದೇನೆ’ ಎಂದೂ ಹೇಳಿದರು.

ಮಧ್ಯಪ್ರವೇಶ ಮಾಡಲ್ಲ

ಧರ್ಮಸ್ಥಳದಲ್ಲಿ ಎಸ್‌ಐಟಿ ತಂಡ ತನಿಖೆ ಆರಂಭಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ, ‘ಎಸ್ಐಟಿ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ಮಾಡುತ್ತಿದ್ದಾರೆ. ತ‌ನಿಖೆಯಲ್ಲಿ ನಾವ್ಯಾರೂ ಮಧ್ಯಪ್ರವೇಶ ಮಾಡಲ್ಲ’ ಎಂದರು.

ಮತ್ತೆ ಆಯುಕ್ತ ಹುದ್ದೆ ಕೊಡುವುದಿಲ್ಲ

 ‘ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸ್‌ ಅಧಿಕಾರಿಗಳ ಅಮಾನತನ್ನು ಸಚಿವ ಸಂಪುಟ ಸಭೆಯ ತೀರ್ಮಾನದಂತೆ ಹಿಂಪಡೆಯಲಾಗಿದೆ. ಇದು ಆಡಳಿತಾತ್ಮಕ ನಿರ್ಧಾರ ಅಷ್ಟೇ. ತನಿಖೆ ಮುಂದುವರೆಯಲಿದೆ. ಪೊಲೀಸ್‌ ಕಮಿಷನರ್‌ ಆಗಿದ್ದ ಬಿ. ದಯಾನಂದ್ ಅವರಿಗೆ ಮತ್ತೆ ಆಯುಕ್ತ ಹುದ್ದೆ ಕೊಡುವುದಿಲ್ಲ. ಸಮಾನಾಂತರ ಹುದ್ದೆ ಕೊಡುತ್ತೇವೆ’ ಎಂದರು.

ಕಾಳಸಂತೆ ಮಾರಾಟ ತಡೆಯಲು ಕ್ರಮ

ರಸಗೊಬ್ಬರ ಅಭಾವಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಡಿರುವ  ಟೀಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ, ‘ರಸಗೊಬ್ಬರ ಕಾಳಸಂತೆ ಮಾರಾಟ ತಡೆಯಲು ಕೃಷಿ ಸಚಿವರು ಸೂಚಿಸಿದ್ದಾರೆ. ಈ ಬಾರಿ ಮುಂಗಾರು‌ ಬೇಗ ಬಂದು ರಸ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಕೇಂದ್ರದಿಂದ ನಮಗೆ ಬರಬೇಕಾದ ಗೊಬ್ಬರ ಸಮಯಕ್ಕೆ ಸರಿಯಾಗಿ ಬರಲಿ’ ಎಂದರು.

‘ಕಾಳಸಂತೆ ಮಾರಾಟಗಾರರ ಮೇಲೆ ಕೇಸ್ ಹಾಕಲು ಕೃಷಿ ಸಚಿವರು ತಿಳಿಸಿದ್ದಾರೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.