ADVERTISEMENT

ಕೆಎಚ್ಐಆರ್ ಸಿಟಿ: ಮೊದಲ ಹಂತಕ್ಕೆ ಶೀಘ್ರ ಚಾಲನೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2024, 16:19 IST
Last Updated 20 ಆಗಸ್ಟ್ 2024, 16:19 IST
ಎಂ.ಬಿ.ಪಾಟೀಲ
ಎಂ.ಬಿ.ಪಾಟೀಲ   

ಬೆಂಗಳೂರು: ‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ‘ನಾಲೆಡ್ಜ್, ಹೆಲ್ತ್ ಇನ್ನೋವೇಶನ್ ಮತ್ತು ರೀಸರ್ಚ್ ಸಿಟಿ’ (ಕೆಎಚ್ಐಆರ್ ಸಿಟಿ) ಸಿಟಿ ಎರಡು ಸಾವಿರ ಎಕರೆ ಜಾಗದಲ್ಲಿ ತಲೆ ಎತ್ತಲಿದ್ದು, 500 ಎಕರೆಯ ಮೊದಲ ಹಂತದ ಯೋಜನೆಗೆ ಸದ್ಯದಲ್ಲೇ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಕೆಎಚ್ಐಆರ್ ಸಿಟಿ ಸಲಹಾ ಸಮಿತಿಯ ಮೊದಲ ಸಭೆಯ ಅಧ್ಯಕ್ಷತೆಯ ವಹಿಸಿ ಮಾತನಾಡಿದ ಅವರು, ಎಲ್ಲ ಸದಸ್ಯರ ಸಹಕಾರವನ್ನು ಕೋರಿದರು. 

ಸಲಹಾ ಮಂಡಳಿಯ ಸದಸ್ಯರಿಗೆ ಭೂಮಿಪುತ್ರ ಸಂಸ್ಥೆಯು ನಿರ್ಮಿಸಿರುವ ಯೋಜನೆಯ ಪ್ರಾತ್ಯಕ್ಷಿಕೆ ತೋರಿಸಲಾಯಿತು. ಜತೆಗೆ, ಯೋಜನೆಗೆ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು ಆಲಿಸಲಾಯಿತು. ಸಭೆಯಲ್ಲಿ ವರ್ಚುಯಲ್ ಆಗಿ ಭಾಗವಹಿಸಿದ್ದ ಸಮಿತಿಯ ಸದಸ್ಯರು, ದೊಡ್ಡಬಳ್ಳಾಪುರ- ದಾಬಸ್ ಪೇಟೆ ಮಧ್ಯದಲ್ಲಿ ನಿರ್ಮಾಣವಾಗಲಿರುವ ಕೆಎಚ್ಐಆರ್ ಸಿಟಿಯ ಪರಿಕಲ್ಪನೆ ಅತ್ಯದ್ಭುತವಾಗಿದ್ದು ಬೆಂಗಳೂರಿನ ಬೆಳವಣಿಗೆಗೆ ಅತ್ಯಗತ್ಯವಾಗಿದೆ ಎಂದರು.

‘ಇದೊಂದು ಅಸಾಂಪ್ರದಾಯಿಕ ಯೋಜನೆ. ಇದು ಬೆಂಗಳೂರು ನಗರದ ಆರ್ಥಿಕತೆಯನ್ನು ಇನ್ನೊಂದು ಎತ್ತರಕ್ಕೆ ಕೊಂಡೊಯ್ಯಲಿದೆ. ಸಲಹಾ ಸಮಿತಿಯ ಸದಸ್ಯರು ನೀಡಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು’ ಎಂದು ಪಾಟೀಲ ವಿವರಿಸಿದರು.

ADVERTISEMENT

ಸಲಹಾ ಮಂಡಳಿ ಸದಸ್ಯರಾದ ನಾರಾಯಣ ಹೃದ್ರೋಗ ಸಂಸ್ಥೆ ಅಧ್ಯಕ್ಷ ಡಾ. ದೇವಿಶೆಟ್ಟಿ, ಬಯೊಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ, ಇನ್ಫೋಸಿಸ್ ಆಡಳಿತ ಮಂಡಳಿ ಸದಸ್ಯ ಮೋಹನದಾಸ್ ಪೈ, ಹ್ರದ್ರೋಗ ತಜ್ಞ ಡಾ.ವಿವೇಕ್ ಜವಳಿ, ಆ್ಯಕ್ಸಲ್ ಪಾಲುದಾರ ಪ್ರಶಾಂತ್ ಪ್ರಕಾಶ್, ಅಮೆರಿಕಾದ ಬೋಸ್ಟನ್ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ಟ್ರಸ್ಟಿ ರಾಂಚ್ ಕಿಂಬಾಲ್, ವೆಕ್ಸ್ ಫೋರ್ಡ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಸಂಸ್ಥೆ ಕಾರ್ಯನಿರ್ವಾಹಕ ಉಪಾಧ್ಯಕ್ಷ ಥಾಮಸ್ ಓಶ ಮತ್ತು ಆಸ್ಟೀನ್‌ನ ನಾವೀನ್ಯತೆ ಮತ್ತು ಉದ್ಯಮಶೀಲತೆ ವಿಭಾಗದ ಡೀನ್ ಸ್ಟೀಫನ್ ಎಕ್ಕರ್ ಅವರು ವರ್ಚುಯಲ್ ಆಗಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.