ADVERTISEMENT

ಭೂಮಾಫಿಯಾ ಕೇಂದ್ರವಾದ ಕೆಐಎಡಿಬಿ: ಜೆಡಿಎಸ್ ಸದಸ್ಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2022, 19:31 IST
Last Updated 23 ಮಾರ್ಚ್ 2022, 19:31 IST
ವಿಧಾನ ಪರಿಷತ್‌
ವಿಧಾನ ಪರಿಷತ್‌   

ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಭೂಮಾಫಿಯಾ ಕೇಂದ್ರವಾಗಿದ್ದು, ಅಲ್ಲಿನ ಅಧಿಕಾರಿಗಳು ಮಧ್ಯವರ್ತಿಗಳ ನೆರವಿನಿಂದ ರಿಯಲ್‌ ಎಸ್ಟೇಟ್‌ ದಂಧೆ ನಡೆಸುತ್ತಿದ್ದಾರೆ ಎಂದು ವಿಧಾನ ಪರಿಷತ್‌ನಲ್ಲಿ ಬುಧವಾರ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ (ತಿದ್ದುಪಡಿ) ಮಸೂದೆ ಕುರಿತ ಚರ್ಚೆಯಲ್ಲಿ ಮಾತನಾಡಿದ, ಕಾಂಗ್ರೆಸ್‌ನ ಪಿ.ಆರ್‌. ರಮೇಶ್‌, ‘ಭೂಸ್ವಾಧೀನದ ಉದ್ದೇಶವೇ ಈಡೇರುತ್ತಿಲ್ಲ. ರೈತರನ್ನು ಕೊಂದು ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ’ ಎಂದು ಕಿಡಿಕಾರಿದರು.

‘ಕೇಂದ್ರದ ಅಧಿನಿಯಮಗಳಲ್ಲಿದ್ದ ಸೆಕ್ಷನ್‌ಗಳಾದ 24,10, 4,5,6,7 ಇದರಲ್ಲಿಯೂ ಸೇರಿಸಬೇಕು. ಇದರಿಂದ ಭೂ ಮಾಲೀಕರಿಗೆ ಅನುಕೂಲವಾಗುತ್ತದೆ’ ಎಂದು ಒತ್ತಾಯಿಸಿದರು.

ADVERTISEMENT

ಜೆಡಿಎಸ್‌ನ ಮರಿತಿಬ್ಬೇಗೌಡ, ‘ಕೆಐಎಡಿಬಿ ಅಧಿಕಾರಿಗಳು ಜಮೀನು ಸ್ವಾಧೀನಕ್ಕೆ ಮುನ್ನವೇ ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ನಿವೇಶನಗಳನ್ನು ಜಿಪಿಎ ಮಾಡಿಸಿಕೊಂಡು ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

ಅಕ್ರಮಗಳ ಉದಾಹರಣೆ ನೀಡಿದ ಅವರು, ‘ವೈಟ್‌ಫೀಲ್ಡ್‌ನಲ್ಲಿ 20 ವರ್ಷಗಳ ಹಿಂದೆ 450 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಇದರಲ್ಲಿ 20 ಎಕರೆ ಪ್ರದೇಶವನ್ನು ಉದ್ಯಾನಕ್ಕೆ ಮೀಸಲಿಡಲಾಗಿತ್ತು. ಆದರೆ, ಅಧಿಕಾರಿಗಳು ತಾವೇ ನಿರ್ಣಯ ಮಾಡಿಕೊಂಡು ನಿವೇಶನ ಮಾಡಿ ಹಂಚಿದ್ದಾರೆ’ ಎಂದು ದೂರಿದರು.

‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಭಾರಿ ಬೆಲೆ ಬಾಳುವ ಕೆಐಎಡಿಬಿಯ ಐದು ಎಕರೆ ಜಮೀನಿನಲ್ಲಿ ವ್ಯಕ್ತಿಯೊಬ್ಬ ನಿವೇಶನ ಮಾಡಿ ಹಂಚಿದ್ದ. ಈ ಬಗ್ಗೆ ನಾನು ಜಿಲ್ಲಾಧಿಕಾರಿಗೆ ದೂರು ನೀಡಿದ ಬಳಿಕ ವಾಪಸ್‌ ಪಡೆಯಲಾಯಿತು. ಆದರೆ, ಈ ವಿಷಯ ಕೆಐಎಡಿಬಿ ಅಧಿಕಾರಿಗಳಿಗೆ ಗೊತ್ತೇ ಇರಲಿಲ್ಲ’ ಎಂದು ಕಿಡಿಕಾರಿದರು.

‘ನೈಸ್‌ ಸಂಸ್ಥಾಪಕ ದರೋಡೆಕೋರ’: ರಮೇಶಗೌಡ
‘ನೈಸ್‌ ಬಹಳ ಹಾರ್ಡ್‌. ನೈಸ್‌ ಸಂಸ್ಥಾಪಕ ದರೋಡೆಕೋರ.ಕಾನೂನಿನ ಚೌಕಟ್ಟಿನ ಪ್ರಕಾರ ಈತ ನಡೆದುಕೊಂಡಿಲ್ಲ. ಇವರಿಂದಾಗಿ ಇಂದಿಗೂ ಬಡವರು ಕಣ್ಣೀರು ಹಾಕುತ್ತಿದ್ದಾರೆ’ ಎಂದು ಜೆಡಿಎಸ್‌ನ ರಮೇಶಗೌಡ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಪರಿಷತ್‌ನಲ್ಲಿ ಬುಧವಾರ ‘ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌’ (ನೈಸ್) ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರು ಉತ್ತಮ ಉದ್ದೇಶಕ್ಕೆ ಈ ಯೋಜನೆ ರೂಪಿಸಿದ್ದರು. ಆದರೆ, ನಂತರ ಬಂದವರು ಅಕ್ರಮಗಳಿಗೆ ಸಾಥ್‌ ನೀಡಿದರು’ ಎಂದು ದೂರಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌, ‘ಹುಟ್ಟು ದರೋಡೆಕೋರನಿಗೆ ಜನ್ಮ ನೀಡಿದವರು ಯಾರು ಎನ್ನುವ ಬಗ್ಗೆಯೂ ಚರ್ಚೆಯಾಗಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.