
ಚಲಪತಿ
ಬೆಂಗಳೂರು: ಕಾಲ್‍ಸೆಂಟರ್ (ಬಿಪಿಒ) ಮೇಲೆ ಪೊಲೀಸರ ಸೋಗಿನಲ್ಲಿ ದಾಳಿ ಮಾಡಿ ನಾಲ್ವರು ಉದ್ಯೋಗಿಗಳನ್ನು ಅಪಹರಿಸಿ, ₹18.90 ಲಕ್ಷ ಸುಲಿಗೆ ಮಾಡಿರುವ ಪ್ರಕರಣ ಸಂಬಂಧ ಕೋರಮಂಗಲ ಠಾಣೆ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ.
ಮಾಲೂರು ಟೌನ್ ಠಾಣೆಯ ಕಾನ್‌ಸ್ಟೆಬಲ್ ಚಲಪತಿ, ಪವನ್, ಜಬಿವುಲ್ಲಾ, ಅತೀಕ್, ಭರತ್, ಪ್ರಶಾಂತ್ ಕುಮಾರ್, ಶಹಬಾಜ್ ಅಹಮದ್, ತೇಜಸ್ ದೇವ್ ಎಂಬುವವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನಾಲ್ಕು ದಿನ ಕಸ್ಟಡಿಗೆ ನೀಡಿದ್ದು, ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಕೋರಮಂಗಲ ವ್ಯಾಪ್ತಿಯಲ್ಲಿ ಗ್ಲೋಬರ್ ಕನೆಕ್ಟ್ ಟೆಲಿಕಾಂ ಪ್ರೈವೆಟ್ ಲಿಮಿಟೆಡ್ ಹೆಸರಿನ ಕಾಲ್‌ಸೆಂಟರ್ ಕಾರ್ಯನಿರ್ವಹಿಸುತ್ತಿದೆ. ಅಮೆರಿಕ ಸೇರಿದಂತೆ ವಿವಿಧ ದೇಶಗಳಲ್ಲಿ ವ್ಯವಹಾರ ಹಾಗೂ ಗ್ರಾಹಕರನ್ನು ಹೊಂದಿದೆ. ಶನಿವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಕಾಲ್ ಸೆಂಟರ್ ಬಳಿ ತೆರಳಿದ್ದ ಆರೋಪಿಗಳು, ಸೈಬರ್ ವಂಚನೆ ಮಾಡಲಾಗುತ್ತಿದೆ ಎಂದು ಹೆದರಿಸಿ ಉದ್ಯೋಗಿಗಳಾದ ಪವನ್, ರಾಜ್‌ವೀರ್, ಆಕಾಶ್, ಅನಸ್ ಎಂಬುವವರನ್ನು ಅಪಹರಿಸಿ, ಕಾರಿನಲ್ಲಿ ಕರೆದೊಯ್ದಿದ್ದರು. ಬಳಿಕ ಠಾಣೆಗೆ ಕರೆದೊಯ್ಯುವ ನೆಪದಲ್ಲಿ ಮಾಲೂರಿಗೆ ಕರೆದೊಯ್ದು, ₹25 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಕಂಪನಿಯ ಉದ್ಯೋಗಿಗಳ ಖಾತೆಯಿಂದ ₹ 18 ಲಕ್ಷ ವರ್ಗಾಯಿಸಿಕೊಂಡಿದ್ದರು. ಬಳಿಕ ಮುಂಜಾನೆ 4 ಗಂಟೆಗೆ ಕಾಲ್ ಸೆಂಟರ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಾರ್ಯಾಚರಣೆಗಿಳಿದ ಪೊಲೀಸರು, ಹಲವು ಆಯಾಮಗಳಲ್ಲಿ ತನಿಖೆ ನಡೆಸಿ, ಆರೋಪಿಗಳ ಜಾಡು ಪತ್ತೆ ಹಚ್ಚಿ ಉದ್ಯೋಗಿಗಳನ್ನು ರಕ್ಷಿಸಿದ್ದರು. ಜತೆಗೆ, ಕೃತ್ಯದಲ್ಲಿ ಶಾಮೀಲಾಗಿದ್ದ ಎಂಟು ಮಂದಿಯನ್ನು ಬಂಧಿಸಿ, ಎರಡು ಕಾರುಗಳನ್ನು ಜಪ್ತಿ ಮಾಡಿದ್ದರು.
ರಿಯಲ್ ಎಸ್ಟೇಟ್ ಸೇರಿ ಬೇರೆ ಕೆಲಸ ಮಾಡಿಕೊಂಡಿದ್ದ ಪವನ್, ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ. ಸಾಕಷ್ಟು ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ಚಲಪತಿ ಜೊತೆ ಸೇರಿ ಅಪಹರಣ ಮಾಡಿದ್ದಾನೆ. ಆರೋಪಿಗಳಿಂದ ₹ 14 ಲಕ್ಷ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.