ಸಾಂದರ್ಭಿಕ ಚಿತ್ರ
ಎ.ಐ ಚಿತ್ರ
ನವದೆಹಲಿ: ಮಂಡ್ಯ ಜಿಲ್ಲೆಯ ಯಡಿಯೂರು ಬ್ಲಾಕ್‌ನಲ್ಲಿ ಚಿನ್ನಕ್ಕಾಗಿ ಕುದುರೆಮುಖ ಕಬ್ಬಿಣದ ಅದಿರು ಕಂಪನಿಯು (ಕೆಐಒಸಿಎಲ್) ಅನ್ವೇಷಣೆ ನಡೆಸಲಿದೆ.
ಚಿನ್ನ ಅದಿರಿನ ಶೋಧಕ್ಕಾಗಿ ಯಡಿಯೂರು ಬ್ಲಾಕ್‌ನಲ್ಲಿ ಅಸ್ತಿತ್ವದಲ್ಲಿರುವ ರಸ್ತೆಗಳನ್ನು ಬಳಸಿಕೊಂಡು, ಯಾವುದೇ ಮರಗಳನ್ನು ಕಡಿಯದೆ, ಪೊದೆಗಳನ್ನು ತೆರವುಗೊಳಿಸದೆ ಮತ್ತು ಮರದ ಕೊಂಬೆಗಳನ್ನು ಕಡಿಯದೆ ಎರಡು ಕೊಳವೆಬಾವಿಗಳು ಮತ್ತು ಮೂರು ಕಂದಕಗಳನ್ನು ಕೊರೆಯಲು ಅನುಮತಿ ನೀಡಬೇಕು ಎಂದು ಕಂಪನಿಯು ಅರಣ್ಯ ಇಲಾಖೆಗೆ ಜನವರಿ 13ರಂದು ಕೋರಿದೆ. ಅನ್ವೇಷಣೆ ಪೂರ್ಣಗೊಂಡು ಅದಿರಿನ ಲಭ್ಯತೆಯ ಅಂದಾಜು ಲೆಕ್ಕಾಚಾರ ನಡೆಸಿದ ಬಳಿಕ ಕಂಪನಿಯು ಗಣಿ ಸಚಿವಾಲಯದ ರಾಷ್ಟ್ರೀಯ ಖನಿಜ ಪರಿಶೋಧನಾ ಟ್ರಸ್ಟ್‌ಗೆ (ಎನ್‌ಎಂಇಟಿ) ವರದಿ ಸಲ್ಲಿಸಲಿದೆ.
ಹಟ್ನಾ ಮೀಸಲು ಅರಣ್ಯದ 50 ಚದರ ಕಿ.ಮೀ. ಪ್ರದೇಶದಲ್ಲಿ ಶೋಧ ನಡೆಸಲು ಅನುಮತಿ ನೀಡಬೇಕು ಎಂದು ಕಂಪನಿಯು ಎನ್‌ಎಂಟಿಗೆ ಪ್ರಸ್ತಾವ ಸಲ್ಲಿಸಿತ್ತು. 2024ರ ಫೆಬ್ರುವರಿಯಲ್ಲಿ ನಡೆದ ಟ್ರಸ್ಟ್‌ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚೆ ನಡೆದು ಉಕ್ಕು ಸಚಿವಾಲಯವು ಪ್ರಸ್ತಾವಕ್ಕೆ ಒಪ್ಪಿಗೆ ನೀಡಿತ್ತು. ಚಿನ್ನದ ಹುಡುಕಾಟಕ್ಕಾಗಿ ಐದು ಕೊಳವೆಬಾವಿಗಳನ್ನು ಹಾಗೂ ಕಂದಕಗಳನ್ನು ತೋಡಲು ಅನುಮತಿ ನೀಡಬೇಕು ಎಂದು ಮಂಡ್ಯ ಡಿಸಿಎಫ್‌ಗೆ ಕೆಐಒಸಿಎಲ್ ಪ್ರಸ್ತಾವ ಸಲ್ಲಿಸಿತ್ತು.
ಆ ಬಳಿಕ ಸ್ಥಳೀಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಮೈಸೂರು ಸಿಸಿಎಫ್‌ಗೆ ವರದಿ ಸಲ್ಲಿಸಿದ್ದರು. ಪರಿಶೋಧನೆಗೆ ಪ್ರಸ್ತಾಪಿಸಿರುವ ಸರ್ವೆ ಸಂಖ್ಯೆ 81ರಲ್ಲಿ 88 ಎಕರೆ ನೆಡುತೋಪು ಇದ್ದು, ಮೀಸಲು ಅರಣ್ಯವೆಂದು 2022ರಲ್ಲಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದರು. ಅದಾದ ನಂತರ ಕಂದಾಯ ಹಾಗೂ ಅರಣ್ಯ ಅಧಿಕಾರಿಗಳು ಜಂಟಿ ಸರ್ವೆ ನಡೆಸಿದ್ದರು.
ಮರಗಳನ್ನು ಕಡಿಯದೆಯೇ ಹಾಗೂ ನೆಡುತೋಪುವಿಗೆ ಹಾನಿ ಮಾಡದೆಯೇ ಕಂಪನಿಯು ಇಲ್ಲಿ ಪರಿಶೋಧನಾ ಚಟುವಟಿಕೆ ನಡೆಸಬಹುದು ಎಂದು ಮಂಡ್ಯ ಡಿಸಿಎಫ್ ಅಭಿಪ್ರಾಯ ನೀಡಿದ್ದರು. ಪರಿಶೀಲನೆ ಹಾಗೂ ಮುಂದಿನ ಹಂತದ ಪ್ರಕ್ರಿಯೆಗಾಗಿ ಮೈಸೂರು ಸಿಸಿಎಫ್ ಅವರು ಅರಣ್ಯ ಇಲಾಖೆಯ ಪ್ರಧಾನ ಕಚೇರಿಗೆ ವರದಿ ಕಳುಹಿಸಿದ್ದರು.
ಹಾವೇರಿ ಕಾಕೋಳ್ ಬ್ಲಾಕ್
ಕೊಪ್ಪಳ ಮತ್ತು ರಾಯಚೂರಿನ ಕಿಲ್ಲರಹಟ್ಟಿ ಪ್ರದೇಶ
ಹಾವೇರಿ ಚಿನ್ನಿಕಟ್ಟಿ ಬ್ಲಾಕ್
(ಮಾಹಿತಿ: ಎನ್‌ಎಂಇಟಿ)
‘ಈ ಪ್ರದೇಶವು ಸಂರಕ್ಷಿತ ಪ್ರದೇಶ ಅಥವಾ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಬರುತ್ತದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಗಣಿಗಾರಿಕೆಗಾಗಿ ರಾಷ್ಟ್ರೀಯ ಉದ್ಯಾನ ಹಾಗೂ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಸಮೀಕ್ಷೆ ನಡೆಸುವಂತಿಲ್ಲ. ಕೇಂದ್ರ ಪರಿಸರ ಸಚಿವಾಲಯದ ಮಾರ್ಗಸೂಚಿ ಅನ್ವಯ ಸ್ಪಷ್ಟ ಅಭಿಪ್ರಾಯದೊಂದಿಗೆ ವಿಸ್ತೃತ ವರದಿ ಸಲ್ಲಿಸಬೇಕು‘ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಸಂರಕ್ಷಣೆ) ಅವರು ಮಂಡ್ಯ ಡಿಸಿಎಫ್ ಅವರಿಗೆ 2025ರ ಅಕ್ಟೋಬರ್‌ನಲ್ಲಿ ನಿರ್ದೇಶನ ನೀಡಿದ್ದರು. ಅರಣ್ಯ ಇಲಾಖೆಗೆ ಇದೇ 13ರಂದು ಉತ್ತರ ನೀಡಿರುವ ಕೆಐಒಸಿಎಲ್, ‘ಕಾಡಿಗೆ ಯಾವುದೇ ರೀತಿ ಹಾನಿಯಾಗದಂತೆ ಶೋಧ ನಡೆಸಲಾಗುವುದು‘ ಎಂದು ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.