ADVERTISEMENT

ನಿವೃತ್ತ ನ್ಯಾಯಮೂರ್ತಿಗಳಿಂದ ವೃತ್ತಿಧರ್ಮಕ್ಕೆ ಅಪಚಾರ: ಕಿರಣ್‌ ರಿಜಿಜು

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 16:15 IST
Last Updated 30 ಆಗಸ್ಟ್ 2025, 16:15 IST
<div class="paragraphs"><p>ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯದ ಎಲ್ಲ ವಕೀಲರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಬಿ.ವೈ.ವಿಜಯೇಂದ್ರ, ಎಸ್‌.ಎಸ್‌.ಮಿಟ್ಟಲಕೋಡ ಚರ್ಚೆಯಲ್ಲಿ ತೊಡಗಿದ್ದರು. ಕೇಂದ್ರ ಸಚಿವ ಕಿರಣ್‌ ರಿಜಿಜು&nbsp; ಉಪಸ್ಥಿತರಿದ್ದರು</p></div>

ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯದ ಎಲ್ಲ ವಕೀಲರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಬಿ.ವೈ.ವಿಜಯೇಂದ್ರ, ಎಸ್‌.ಎಸ್‌.ಮಿಟ್ಟಲಕೋಡ ಚರ್ಚೆಯಲ್ಲಿ ತೊಡಗಿದ್ದರು. ಕೇಂದ್ರ ಸಚಿವ ಕಿರಣ್‌ ರಿಜಿಜು  ಉಪಸ್ಥಿತರಿದ್ದರು

   

  –ಪ್ರಜಾವಾಣಿ ಚಿತ್ರ

ಬೆಂಗಳೂರು: ‘ನಿವೃತ್ತ ನ್ಯಾಯಮೂರ್ತಿಗಳು ಮತ್ತು ನ್ಯಾಯಾಧೀಶರು ಸರ್ಕಾರದ ವಿರುದ್ಧ ಮತ್ತು ಗೃಹ ಸಚಿವಾಲಯದ ವಿರುದ್ಧ ಪತ್ರ ಬರೆದಿದ್ದು ವಕೀಲ ವೃತ್ತಿಧರ್ಮಕ್ಕೆ ಮಾಡಿದ ಅಪಚಾರ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಹೇಳಿದರು.

ADVERTISEMENT

ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ವಕೀಲರ ಸಂಘಗಳ ಪದಾಧಿಕಾರಿಗಳ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಈಚೆಗೆ ಕೆಲ ನಿವೃತ್ತ ನ್ಯಾಯಮೂರ್ತಿಗಳು ಮತ್ತು ನ್ಯಾಯಾಧೀಶರು ಒಟ್ಟಿಗೆ ಸೇರಿ ಗೃಹ ಸಚಿವಾಲಯದ ವಿರುದ್ಧ ಪತ್ರ ಬರೆದರು. ಇದು ಸರಿಯಲ್ಲ. ವಕೀಲರು ನ್ಯಾಯಾಧೀಶರಾಗಿ ನಿವೃತ್ತರಾದ ನಂತರವೂ ರಾಜಕೀಯ ನಿಲುವುಗಳಿಂದ, ಸಂಕಥನಗಳಿಂದ ಅಂತರ ಕಾಯ್ದುಕೊಳ್ಳಬೇಕು. ನಿವೃತ್ತರು ಹೀಗೆ ಸರ್ಕಾರದ ವಿರುದ್ಧ ಪತ್ರ ಬರೆದಿದ್ದರಿಂದ, ಅವರು ವೃತ್ತಿಯಲ್ಲಿದ್ದಾಗಲೂ ಸರಿಯಾಗಿ ಕೆಲಸ ಮಾಡಿದ್ದರೇ ಎಂದು ಸಂದೇಹದಿಂದ ನೋಡುವಂತಾಗಿದೆ’ ಎಂದು ಹೇಳಿದರು. 

‘ದೇಶದ ನ್ಯಾಯಾಂಗ ವ್ಯವಸ್ಥೆಯ ಅತ್ಯಂತ ದೊಡ್ಡ ಸಮಸ್ಯೆ ಬಾಕಿ ಪ್ರಕರಣಗಳು. ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವುದು ಈ ಸಮಸ್ಯೆಗೆ ಕಾರಣವಲ್ಲ. ಬದಲಿಗೆ ಪ್ರಕರಣಗಳನ್ನು ವಿಲೇವಾರಿ ಮಾಡುವಲ್ಲಿ ಸಮಸ್ಯೆ ಇದೆ. ಅಧೀನ ನ್ಯಾಯಾಲಯಗಳ ನ್ಯಾಯಾಧೀಶರು ದಿನವೊಂದರಲ್ಲಿ 50–60 ಪ್ರಕರಣಗಳನ್ನು ನಿರ್ವಹಿಸುತ್ತಾರೆ. ಆದರೆ ಸುಪ್ರೀಂ ಕೋರ್ಟ್‌ನಲ್ಲಿ ಒಂದೇ ಪ್ರಕರಣದ ವಿಚಾರಣೆಯನ್ನು ಹಲವು ದಿನ ನಡೆಸುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸುಪ್ರೀಂ ಕೋರ್ಟ್‌ನಲ್ಲಿ ಒಂದೇ ಪ್ರಕರಣ ಅಥವಾ ಅರ್ಜಿ ವಿಚಾರಣೆಗೆ ಹಲವು ನ್ಯಾಯಮೂರ್ತಿಗಳು ಪೀಠದಲ್ಲಿ ಕೂರುತ್ತಾರೆ. ಅಂತಹ ಹಲವು ಪೀಠಗಳು ಇರುತ್ತವೆ. ಅವರ ಮೇಲೆ ಒತ್ತಡ ಇರುತ್ತದೆ ಎಂಬುದು ನನಗೆ ಅರ್ಥವಾಗುತ್ತದೆ. ಅವರು ನೀಡುವ ತೀರ್ಪು ದೇಶದ ಕಾನೂನುಗಳಾಗುತ್ತವೆ. ಅದನ್ನು ಪಾಲಿಸಬೇಕಾಗುತ್ತದೆ’ ಎಂದೂ ಹೇಳಿದರು.

ರಾಜ್ಯದ ವಕೀಲರ ಸಂಘಗಳು ನೀಡಿದ್ದ ಮನವಿಗಳನ್ನು ಒಳಗೊಂಡ ಕ್ರೋಡೀಕೃತ ಮನವಿಯನ್ನು ವಕೀಲರ ಪರಿಷತ್ತು ಸಚಿವ ಕಿರಣ್‌ ರಿಜಿಜು ಅವರಿಗೆ ಸಲ್ಲಿಸಿತು.

ಮಹಾತ್ಮ ಗಾಂಧಿ ಉತ್ತಮ ನಾಯಕರು: ವಿಜಯೇಂದ್ರ

‘ನಮ್ಮ ದೇಶದಲ್ಲಿ ಮಹಾತ್ಮ ಗಾಂಧಿ ಅವರಿಂದ ಆರಂಭವಾಗಿ ಬಾಬಾಸಾಹೇಬ್‌ ಅಂಬೇಡ್ಕರ್ ಮತ್ತು ಮೋತಿಲಾಲ್‌ ನೆಹರೂ ಅವರು ಉತ್ತಮ ವಕೀಲರಾಗಿದ್ದರು. ಜತೆಗೆ ಅವರು ಉತ್ತಮ ನಾಯಕರೂ ಆಗಿದ್ದರು. ದೇಶವನ್ನು ರೂಪಿಸುವಂತಹ ನಾಯಕರನ್ನು ವಕೀಲ ವೃತ್ತಿಯು ರೂಪಿಸುತ್ತದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಎಸ್‌.ಎಸ್‌. ಮಿಟ್ಟಲಕೋಡ ‘ಈ ಮೊದಲು ರಾಜಕೀಯ ಪ್ರವೇಶಿಸುತ್ತಿದ್ದವರಲ್ಲಿ ವಕೀಲರ ಸಂಖ್ಯೆಯೇ ಹೆಚ್ಚು ಇರುತ್ತಿತ್ತು. ಈಚಿನ ವರ್ಷಗಳಲ್ಲಿ ಸ್ಥಿತಿ ಬದಲಾಗಿದೆ. ಬೇರೆ ಕ್ಷೇತ್ರದವರು ರಾಜಕೀಯಕ್ಕೆ ಹೆಚ್ಚು ಬರುತ್ತಿದ್ದು ವಕೀಲರು ರಾಜಕೀಯದಿಂದ ದೂರ ಉಳಿಯುತ್ತಿದ್ದಾರೆ. ವಕೀಲರು ಮತ್ತೆ ರಾಜಕಾರಣಕ್ಕೆ ಬರಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.