ADVERTISEMENT

ರಾಜ್ಯದ 50 ಲಕ್ಷ ರೈತರಿಗೆ ‘ಕಿಸಾನ್ ಸಮ್ಮಾನ್‌’ ಯೋಜನೆಯ ₹ 1,000 ಕೋಟಿ‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2020, 7:13 IST
Last Updated 16 ಆಗಸ್ಟ್ 2020, 7:13 IST
ಕೃಷಿ ಸಚಿವ ಬಿ.ಸಿ. ಪಾಟೀಲ
ಕೃಷಿ ಸಚಿವ ಬಿ.ಸಿ. ಪಾಟೀಲ   

ಬೆಂಗಳೂರು: ‘ಪ್ರಧಾನಮಂತ್ರಿ ‘ಕಿಸಾನ್ ಸಮ್ಮಾನ್’ ಯೋಜನೆಯಡಿ ರಾಜ್ಯದ 50 ಲಕ್ಷ ರೈತರಿಗೆ ₹ 1 ಸಾವಿರ ಕೋಟಿ ಮೊತ್ತ ಬಿಡುಗಡೆಯಾಗಿದ್ದು, ರೈತರ ಖಾತೆಗೆ ಶನಿವಾರ (ಆಗಸ್ಟ್‌ 15) ಬೆಳಿಗ್ಗೆಯಿಂದ ನೇರವಾಗಿ ಹಣ ಜಮೆಯಾಗುತ್ತಿದೆ’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದ್ದಾರೆ.

‘ಫೇಸ್‌ಬುಕ್’ ನೇರ ಪ್ರಸಾರದಲ್ಲಿ ರೈತರನ್ನು ಉದ್ದೇಶಿಸಿ ಭಾನುವಾರ ಮಾತನಾಡಿದ ಸಚಿವರು, ‘ರೈತರು ತಮ್ಮ ಖಾತೆಯನ್ನು ಪರಿಶೀಲಿಸಿ, ಹಣ ಜಮೆ ಆಗಿರುವುದರ ಬಗ್ಗೆ ಖಾತರಿಪಡಿಸಿಕೊಳ್ಳಬೇಕು’ ಎಂದಿದ್ದಾರೆ.

‘2019-20ನೇ ಸಾಲಿನ ಬೆಳೆ ವಿಮೆ ಮೊತ್ತವನ್ನು ಮಂಗಳವಾರದಿಂದ (ಆಗಸ್ಟ್‌ 18) ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು. ವಿಮೆ ಹಣಕ್ಕಾಗಿ ರೈತರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗುವ ಅಥವಾ ಚಿಂತಿಸುವ ಅಗತ್ಯ ಇಲ್ಲ’ ಎಂದೂ ಸಚಿವರು ಸ್ಪಷ್ಟಪಡಿಸಿದರು.

ADVERTISEMENT

‘ಇಲಾಖೆಯ ವೃಂದ ಮತ್ತು ನೇಮಕಾತಿ ಪ್ರಕ್ರಿಯೆಗೆ ನಿಯಮಗಳ ಕರಡು ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಆದಷ್ಟು ಬೇಗ ‘ರೈತಮಿತ್ರ’ರ ನೇಮಕಾತಿ‌ ನಡೆಯಲಿದೆ’ ಎಂದರು.

‘ರಾಜ್ಯದಲ್ಲಿ ಯೂರಿಯಾ ಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ. ಕಳೆದ ಸಾಲಿಗಿಂತ ಈ ವರ್ಷ ಶೇ 25ರಷ್ಟು ಹೆಚ್ಚಿನ ಪ್ರಮಾಣದ ಬಿತ್ತನೆಯಾಗಿದೆ. ಈ ವರ್ಷ 65 ಸಾವಿರ ಟನ್ ಯೂರಿಯಾ ಹೆಚ್ಚುವರಿಯಾಗಿ ಪೂರೈಕೆ ಆಗಲಿದೆ. ಈ ವಾರ 37 ಸಾವಿರ ಟನ್ ಯೂರಿಯಾ ಸರಬರಾಜು ಆಗಲಿದೆ’ ಎಂದೂ ಹೇಳಿದರು.

‘ರೈತರು ಭೂಮಿಗೆ ಎಷ್ಟು ಅಗತ್ಯವೋ ಅಷ್ಟು ಪ್ರಮಾಣದಲ್ಲಿ ಮಾತ್ರ ಯೂರಿಯಾ ಬಳಸಬೇಕು. ಯಾವುದೇ ರಾಸಾಯನಿಕ ಔಷಧಿಯಾಗಲೀ ರಸಗೊಬ್ಬರವನ್ನಾಗಲೀ ಅಗತ್ಯಕ್ಕೆ, ಅವಶ್ಯಕತೆಗೆ ಮೀರಿ ಬಳಸಬಾರದು. ಹೀಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಬಳಸಿದರೆ ಭೂಮಿಯ ಫಲವತ್ತತೆ‌ ಕ್ಷೀಣಿಸುವ ಸಾಧ್ಯತೆಯೂ ಇದೆ. ಹೀಗಾಗಿ ರೋಗಕ್ಕೆ ಎಷ್ಟು ಮದ್ದಿನ ಅಗತ್ಯ ಇದೆಯೊ ಅಷ್ಟನ್ನು ಮಾತ್ರ ಬಳಸಬೇಕು. ಯಾವುದೇ ರೋಗಕ್ಕಾಗಲೀ ಅಗತ್ಯಕ್ಕಿಂತ ಹೆಚ್ಚಿನ ಔಷಧಿ ಸೇವಿಸಿದಲ್ಲಿ ಅದು ವಿಷವಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚು’ ಎಂದೂ ಸಚಿವರು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.