ಎಚ್.ಸಿ. ಬಾಲಕೃಷ್ಣ, ಮಾಗಡಿ ಶಾಸಕ
ರಾಮನಗರ: ‘ಸಚಿವ ಸಂಪುಟದಿಂದ ವಜಾಗೊಂಡಿರುವ ಮಾಜಿ ಸಚಿವ ಕೆ.ಎನ್. ರಾಜಣ್ಣ ಬಿಜೆಪಿಗೆ ಅರ್ಜಿ ಹಾಕಿದ್ದಾರೆ. ಅವರು ನೂರಕ್ಕೆ ನೂರರಷ್ಟು ಬಿಜೆಪಿ ಸೇರುತ್ತಾರೆ. ಅವರು ಸಚಿವ ಸ್ಥಾನ ಕಳೆದುಕೊಂಡಿದ್ದರ ಹಿಂದೆ ಯಾರ ಷಡ್ಯಂತ್ರವೂ ಇಲ್ಲ. ತಮ್ಮ ಮಾತಿನಿಂದಲೇ ಕೆಟ್ಟಿದ್ದಾರೆ. ಬೇರೆ ಪಕ್ಷಕ್ಕೆ ಹೋಗುವ ಮುನ್ನ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ವಾಗ್ದಾಳಿ ನಡೆಸಿದರು.
‘ಸಚಿವ ಸಂಪುಟಕ್ಕೆ ಮತ್ತೆ ರಾಜಣ್ಣ ಅವರನ್ನು ಸೇರಿಸಿಕೊಳ್ಳಬೇಕು’ ಎಂಬ ಒತ್ತಾಯದ ಕುರಿತು ನಗರದಲ್ಲಿ ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಸಚಿವರಾಗಿದ್ದಾಗ ರಾಜಣ್ಣ ಹೇಗೆ ನಡೆದುಕೊಂಡರು ಎಂಬುದು ಎಲ್ಲರಿಗೂ ಗೊತ್ತಿದೆ. ಅವರ ಮಾತುಗಳು, ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬಂತಿದ್ದವು’ ಎಂದು ಟೀಕಿಸಿದರು.
‘ಹೈಕಮಾಂಡ್ ವಿರುದ್ಧ ಮಾತನಾಡಿದ್ದಕ್ಕೆ ರಾಜಣ್ಣ ವಜಾಗೊಂಡಿದ್ದಾರೆ. ಈಗ ಪಕ್ಷ ತ್ಯಜಿಸಲು ಬೇಕೆಂದೇ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ದೆಹಲಿಯಲ್ಲಿ ಸಮಾವೇಶ ಮಾಡಲು ಮುಂದಾಗಿರುವ ಅವರು, ಅದೇನು ಮಾಡುತ್ತಾರೊ ಮಾಡಲಿ. ಅವರು ಬಿಜೆಪಿಗೆ ಹೋಗುತ್ತಿದ್ದಾರೊ ಇಲ್ಲವೊ ಎಂಬುದನ್ನು ಅವರನ್ನೇ ಕೇಳಿ. ಅವರ ಬ್ರೈನ್ ಮ್ಯಾಪಿಂಗ್ ಮಾಡಿಸಿದ್ರೆ ಎಲ್ಲವೂ ಗೊತ್ತಾಗುತ್ತದೆ’ ಎಂದು ಹೇಳಿದರು.
‘ಇಷ್ಟಕ್ಕೂ ರಾಜಣ್ಣ ಅವರನ್ನು ಸ್ವಾಗತ ಮಾಡುತ್ತಿರುವುದು ಬಿಜೆಪಿ ನಾಯಕರೇ. ನನಗೆ ಯಾವ ಪಕ್ಷದ ಅವಶ್ಯಕತೆಯೂ ಇಲ್ಲ ಎಂದು ಹಿಂದೆ ರಾಜಣ್ಣ ಅವರೇ ಹೇಳಿದ್ದರು. ಈಗ ಅವರು ಯಾರ ಸಂಪರ್ಕದಲ್ಲಿದ್ದಾರೆ ಎಂದು ಗೊತ್ತಾಗಬೇಕು. ನಮ್ಮ ಸರ್ಕಾರ ಇಲ್ಲದಿದ್ದಿದ್ದರೆ ಇಷ್ಟೊತ್ತಿಗಾಗಲೇ ಬಿಜೆಪಿಯಲ್ಲಿ ಇರುತ್ತಿದ್ದರು. ಈಗ ಒಂದು ಕಾಲನ್ನು ಬಿಜೆಪಿಯಲ್ಲಿಟ್ಟಿರುವ ರಾಜಣ್ಣ, ಆ ಪಕ್ಷದ ಕೇಂದ್ರ ಮತ್ತು ರಾಜ್ಯ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ’ ಎಂದು ತಿಳಿಸಿದರು.
***
ನಮ್ಮ ನಾಯಕರ ಬಗ್ಗೆ ಮಾತನಾಡಿದರೆ ಮಾತ್ರ ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ರಾಜಕೀಯ ಜೀವನ ಮುಂದುವರಿಯುತ್ತದೆ. ಅವರ ಹೊಟ್ಟೆ ತುಂಬುವುದಾದಾರೆ ಮಾತನಾಡಲಿ
– ಎಚ್.ಸಿ. ಬಾಲಕೃಷ್ಣ, ಶಾಸಕ
‘ಡ್ರಾಮಾ ಮಾಸ್ಟರ್‌ಗಳಿಂದ ಧರ್ಮಸ್ಥಳ ಯಾತ್ರೆ’
‘ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ಮಗು ಚಿವುಟಿ, ತೊಟ್ಟಿಲು ತೂಗುವ ಕೆಲಸ ಮಾಡುತ್ತಿದ್ದಾರೆ. ಎಸ್‌ಐಟಿ ತನಿಖೆ ಬಳಿಕ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನಿರಾಳರಾಗಿದ್ದಾರೆ. ಆದರೆ, ಬಿಜೆಪಿ–ಜೆಡಿಎಸ್‌ನವರು ಧರ್ಮಸ್ಥಳ ಯಾತ್ರೆ ಹೆಸರಿನಲ್ಲಿ ನಾಟಕವಾಡುತ್ತಿದ್ದಾರೆ. ಇವರೆಲ್ಲಾ ಡ್ರಾಮಾ ಕಂಪನಿಯ ಡ್ರಾಮಾ ಮಾಸ್ಟರ್‌ಗಳು. ಎಸ್‌ಐಟಿ ರಚಿಸದೇ ಇದ್ದಿದ್ದರೆ ಧರ್ಮಾಧಿಕಾರಿ ಕುಟುಂಬ ನಿತ್ಯ ನೋವು ಅನುಭವಿಸುತ್ತಿತ್ತು. ತನಿಖೆಯಿಂದ ಸತ್ಯಾಂಶ ಹೊರತಂದಿದ್ದು ನಮ್ಮ ಸರ್ಕಾರ. ಆ ಶ್ರೇಯಸ್ಸು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಹೋಗುತ್ತದೆ ಎಂದು, ಎಸ್‌ಐಟಿ ವರದಿಗೂ ಮುಂಚೆಯೇ ಬಿಜೆಪಿ–ಜೆಡಿಎಸ್‌ನವರು ಧರ್ಮಸ್ಥಳಕ್ಕೆ ಓಡಿ ಹೋಗಿದ್ದಾರೆ’ ಎಂದು ಬಾಲಕೃಷ್ಣ ವ್ಯಂಗ್ಯವಾಡಿದರು.
‘ಎಸ್ಐಟಿ ರಚನೆಗೆ ಸ್ವಾಗತಿಸಿದ್ದ ಬಿಜೆಪಿ, ಅದರ ವರದಿ ಬರುವುದಕ್ಕೆ ಮುಂಚೆಯೇ ಎನ್ಐಎ ತನಿಖೆಗೆ ಒತ್ತಾಯಿಸುತ್ತಿದೆ. ಧರ್ಮಸ್ಥಳ ಪ್ರಕರಣ ಸೇರಿದಂತೆ ಎಲ್ಲಾ ಪ್ರಕರಣಗಳಲ್ಲೂ ನಮ್ಮ ಪಕ್ಷವನ್ನು ಹಿಂದೂ ವಿರೋಧಿಯಂತೆ ಬಿಂಬಿಸುತ್ತಿದ್ದಾರೆ. ಜಾತ್ಯತೀತ ದೇಶದಲ್ಲಿ ಬದುಕುತ್ತಿರುವ ನಾವು ಹಿಂದೂ ಎಂದು ಹೇಳಿಕೊಳ್ಳುವ ಅಗತ್ಯವಿಲ್ಲ. ಸೌಜನ್ಯ ಪ್ರಕರಣದಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿದೆ. ಘಟನೆ ನಡೆದಾಗ ಅವರದ್ದೇ ಸರ್ಕಾರವಿದ್ದರೂ ಯಾಕೆ ತನಿಖೆ ಮಾಡಿ, ನ್ಯಾಯ ಕೊಡಿಸಲಿಲ್ಲ?’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.