ADVERTISEMENT

ಹೆಚ್ಚುವರಿ ಡಿಸಿಎಂ: ಖರ್ಗೆ ಸ್ಪಷ್ಟನೆ ಬಳಿಕವೂ ರಾಜಣ್ಣ ಪಟ್ಟು

​ಪ್ರಜಾವಾಣಿ ವಾರ್ತೆ
Published 10 ಜನವರಿ 2024, 15:56 IST
Last Updated 10 ಜನವರಿ 2024, 15:56 IST
 ಕೆ.ಎನ್ ರಾಜಣ್ಣ
 ಕೆ.ಎನ್ ರಾಜಣ್ಣ   

ಬೆಂಗಳೂರು: ‘ರಾಜ್ಯದಲ್ಲಿ ಇನ್ನೂ ಮೂರು ಉಪಮುಖ್ಯಮಂತ್ರಿ (ಡಿಸಿಎಂ) ಪ್ರಸ್ತಾವ ಇಲ್ಲ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ ಬಳಿಕವೂ, ‘ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸಬೇಕೆಂಬ ನನ್ನ ಹೇಳಿಕೆಗೆ ಈಗಲೂ ಬದ್ಧ. ಹೆಚ್ಚುವರಿ ಡಿಸಿಎಂ ಮಾಡುವುದಕ್ಕೆ ಡಿ.ಕೆ. ಶಿವಕುಮಾರ್ ವಿರೋಧ ಇಲ್ಲ’ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಡಿಸಿಎಂ, ಲೋಕಸಭೆ ಚುನಾವಣೆ ಹೀಗೆ ಎಲ್ಲ ವಿಚಾರಗಳನ್ನು ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಹೆಚ್ಚುವರಿ ಡಿಸಿಎಂ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ವಿರೋಧ ಮಾಡುತ್ತಿದ್ದಾರೆಂದು ಯಾರು ತಿಳಿದುಕೊಳ್ಳಬೇಡಿ’ ಎಂದರು. 

ಹೆಚ್ಚುವರಿ ಡಿಸಿಎಂ ವಿಚಾರದಲ್ಲಿ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜಣ್ಣ, ‘ಆ ಪ್ರಸ್ತಾಪ ಇನ್ನೂ ನಮ್ಮ ಗಮನಕ್ಕೆ ಬಂದಿಲ್ಲ ಎಂದು ಖರ್ಗೆ ಹೇಳಿದ್ದಾರೆಯೇ ಹೊರತು, ಮಾಡುವುದಿಲ್ಲ ಎಂದು ಹೇಳಿಲ್ಲ’ ಎಂದರು. 

ADVERTISEMENT

‘ಹೆಚ್ಚುವರಿ ಡಿಸಿಎಂ ಪ್ರಸ್ತಾವವನ್ನು ಖರ್ಗೆ ತಳ್ಳಿ ಹಾಕಿಲ್ಲ. ಈ ಸಮಯದಲ್ಲಿ ಗೊಂದಲ ಬೇಡ ಅಂದಿದ್ದಾರೆ. ನಾವು ಈ ವಿಚಾರವನ್ನು ಇನ್ನೂ ಖರ್ಗೆಯವರ ಗಮನಕ್ಕೆ ತೆಗೆದುಕೊಂಡು ಹೋಗಿಲ್ಲ’ ಎಂದರು. 

‘ಹೆಚ್ಚುವರಿ ಡಿಸಿಎಂ ಪ್ರಸ್ತಾಪ ಇಲ್ಲ’ ಎಂದು ರಣದೀಪ್‌ ಸಿಂಗ್‌ ಸುರ್ಜೇವಾಲ ಹೇಳಿದ್ದಾರಲ್ಲ ಎಂದಾಗ, ‘ಅವರು ಹೇಳಿದ್ದು ಸರಿಯಿದೆ ಅಥವಾ ಸರಿ ಇಲ್ಲ ಎಂದು ಹೇಳಲು ಆಗುವುದಿಲ್ಲ’ ಎಂದರು. 

‘ಹೈಕಮಾಂಡ್ ನಿಮ್ಮ ಮಾತನ್ನು ಗಂಭೀರವಾಗಿ ತೆಗೆದುಕೊಳುತ್ತಿಲ್ಲವೇ’ ಎಂದು ಕೇಳಿದಾಗ, ‘ಹೈಕಮಾಂಡ್ ಅಥವಾ ಇನ್ನೊಬ್ಬರು ತೆಗೆದುಕೊಳ್ಳುವುದು, ನಾನು ಹೇಳುವುದು ಬೇರೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕಾರಜೋಳ, ಅಶ್ವತ್ಥನಾರಾಯಣ, ಈಶ್ವರಪ್ಪ ಹೀಗೆ ಮೂವರು ಉಪ ಮುಖ್ಯಮಂತ್ರಿಗಳಿದ್ದರು. ಹೊಸ ಸರ್ಕಾರ ಬಂದಿರುವ ಮೂರು ರಾಜ್ಯಗಳಲ್ಲಿ ಇತರ ಸಮುದಾಯಗಳಿಗೂ ನ್ಯಾಯ ದೊರಕಿಸಬೇಕೆಂದು ಸಮುದಾಯವಾರು ಉಪ ಮುಖ್ಯಮಂತ್ರಿ ಮಾಡಿದ್ದಾರೆ. ಅದೇ ರೀತಿ ನಮ್ಮಲ್ಲೂ ಮಾಡಿದರೆ ಲೋಕಸಭೆ ಚುನಾವಣೆಯ ಫಲಿತಾಂಶ ಉತ್ತಮವಾಗಿ ಬರಲಿದೆ’ ಎಂದು ಅಭಿಪ್ರಾಯಪಟ್ಟರು.

‘ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿ 20 ಸ್ಥಾನ ಗೆಲ್ಲದಿದ್ದರೆ ನಮಗೆ ಯಾವ ನೈತಿಕತೆ ಇರಲಿದೆ. ಸಮುದಾಯವಾರು ಉಪ ಮುಖ್ಯಮಂತ್ರಿ ಮಾಡಿದರೆ ಎಲ್ಲ 28 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ’ ಎಂದರು.

ರಾಜಣ್ಣ – ಡಿಕೆಶಿ ಮಾತುಕತೆ: ಸಭೆಯ ಬಳಿಕ ರಾಜಣ್ಣ ಅವರು ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಕೆಲಹೊತ್ತು ಗೌಪ್ಯವಾಗಿ ಮಾತುಕತೆ ನಡೆಸಿದರು.

ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸಿ ಕೆಲವು ಸಮುದಾಯಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಬೇಕೆಂಬ ಬೇಡಿಕೆಯ ಬೆನ್ನಲ್ಲೇ ಈ ಇಬ್ಬರ ಭೇಟಿ ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.