
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ತಮ್ಮ ನಿವಾಸದ ಬಳಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
ಬೆಂಗಳೂರು: ಕೋಗಿಲು ಬಡಾವಣೆಯಲ್ಲಿ ಮನೆ ಕಳೆದುಕೊಂಡಿರುವ ಅರ್ಹರಿಗೆ ಬೈಯ್ಯಪ್ಪನಹಳ್ಳಿಯ ವಸತಿ ಸಮುಚ್ಚಯದಲ್ಲಿ ತಲಾ ₹11.20 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಸತಿ ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಅಧಿಕಾರಿಗಳ ಜತೆ ಸೋಮವಾರ ಸಭೆ ನಡೆಸಿದ ಬಳಿಕ ಅವರು, ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
‘ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಾಯಧನ ಲಭ್ಯವಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವತಿಯಿಂದ ಪ್ರತಿ ಮನೆಗೆ ₹5 ಲಕ್ಷ ನೀಡುವಂತೆ ಸೂಚಿಸಿದ್ದೇನೆ. ಸಾಮಾನ್ಯ ವರ್ಗದವರಿಗೆ ಸಹಾಯಧನ ಸೇರಿ ₹8.70 ಲಕ್ಷ ಸಿಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ₹9.50 ಲಕ್ಷ ಸಿಗುತ್ತದೆ. ಸಾಮಾನ್ಯ ವರ್ಗದವರಿಗೆ ₹2.50 ಲಕ್ಷ ಸಾಲದ ರೂಪದಲ್ಲಿ ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ₹1.70 ಲಕ್ಷ ಸಾಲ ನೀಡಲಾಗುತ್ತದೆ’ ಎಂದು ಅವರು ಹೇಳಿದರು.
‘ಅರ್ಹರು ಯಾರು ಎಂದು ಎರಡು ದಿನಗಳಲ್ಲಿ ಪರಿಶೀಲಿಸಿ, ಜನವರಿ 1ರಂದು ಅವರಿಗೆಲ್ಲ ಮನೆ ಹಂಚಿಕೆ ಮಾಡುವ ಜವಾಬ್ದಾರಿಯನ್ನು ಜಮೀರ್ ಅಹಮದ್ ಖಾನ್ ಅವರಿಗೆ ವಹಿಸಲಾಗಿದೆ. ಅಕ್ರಮವಾಗಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದರೂ ಮಾನವೀಯತೆ ದೃಷ್ಟಿಯಿಂದ ಅವರಿಗೆ ವಾಸಕ್ಕೆ ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದೇವೆ. 1 ಲಕ್ಷ ಮನೆಗಳನ್ನು ನಾವು ಕಟ್ಟಿಸಿರುವುದೇ ಬಡವರಿಗೆ ಸೂರು ಒದಗಿಸುವ ಉದ್ದೇಶಕ್ಕಾಗಿ’ ಎಂದು ಸಿದ್ದರಾಮಯ್ಯ ತಿಳಿಸಿದರು.
ನಗರ ಜಿಲ್ಲಾಧಿಕಾರಿ, ಜಿಬಿಎ ಹಾಗೂ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿರುವವರ ದಾಖಲೆಗಳನ್ನು ಪರಿಶೀಲಿಸಲಿದ್ದಾರೆ. ಅವರು ನೀಡುವ ಪಟ್ಟಿಯನ್ನು ಆಧರಿಸಿ ಮನೆಗಳ ಹಂಚಿಕೆ ಮಾಡಲಾಗುವುದು ಎಂದರು.
‘ಕೋಗಿಲು ಬಡಾವಣೆಯಲ್ಲಿ ಮುಂಚಿತವಾಗಿ ನೋಟಿಸ್ ನೀಡಲಾಗಿತ್ತು. ಸರ್ಕಾರದ ಜಾಗ ತೆರವು ಮಾಡುವಂತೆ ಅವರ ಗಮನಕ್ಕೂ ತರಲಾಗಿತ್ತು. ಆದರೂ ಅವರು ಜಾಗ ಖಾಲಿ ಮಾಡಿರಲಿಲ್ಲ. ಡಿ 20ರಂದು ಸುಮಾರು 167 ಮನೆಗಳನ್ನು ತೆರವುಗೊಳಿಸಲಾಗಿತ್ತು’ ಎಂದು ಹೇಳಿದರು.
‘ಇನ್ನು ಮುಂದೆ ಯಾವುದೇ ಕಾರಣಕ್ಕೂ ಸರ್ಕಾರಿ ಜಮೀನು ಒತ್ತುವರಿ ಆಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಅಕ್ರಮವಾಗಿ ಮನೆ ಕಟ್ಟಿದರೆ ಸಂಬಂಧಿಸಿದ ಅಧಿಕಾರಿಗಳನ್ನೇ ಜವಾಬ್ದಾರಿ ಮಾಡಲಾಗುತ್ತದೆ’ ಎಂದೂ ಎಚ್ಚರಿಕೆ ನೀಡಿದರು.
ಸ್ಥಳಕ್ಕೆ ಡಿಕೆಶಿ ಭೇಟಿ: ಮುಖ್ಯಮಂತ್ರಿ ಸಭೆಗೆ ಮುನ್ನ ಕೋಗಿಲು ಬಂಡೆಯ ಪ್ರದೇಶಕ್ಕೆ ಭೇಟಿ ನೀಡಿದ್ದ ಡಿ.ಕೆ. ಶಿವಕುಮಾರ್ ಅವರು, ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ್ದರು. ಅಲ್ಲಿ ನೆಲಸಿರುವವರಿಂದ ಅಹವಾಲುಗಳನ್ನು ಆಲಿಸಿದ್ದರು.
ಕಾಂಗ್ರೆಸ್ ನಾಡ ದ್ರೋಹಿ: ಅಶೋಕ
‘ಕರ್ನಾಟಕವನ್ನು ಕೇರಳ ಸರ್ಕಾರ ಆಳ್ವಿಕೆ ಮಾಡುತ್ತಿದೆಯೇ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಪ್ರಶ್ನಿಸಿದ್ದಾರೆ.
‘ರಾಜ್ಯ ಸರ್ಕಾರವನ್ನು ಕಾಂಗ್ರೆಸ್ ಹೈಕಮಾಂಡ್ ಏಜೆಂಟ್ ಕೆ.ಸಿ.ವೇಣುಗೋಪಾಲ್ ನಡೆಸುತ್ತಿದ್ದಾರೆಯೇ? ಕರ್ನಾಟಕದ ಜಮೀನಿನ ಮೇಲೆ ಕೇರಳ ಸರ್ಕಾರಕ್ಕೆ ಅಧಿಕಾರವಿದೆಯೇ’ ಎಂದು ಅವರು ‘ಎಕ್ಸ್’ನಲ್ಲಿ ಕುಟುಕಿದ್ದಾರೆ.
‘ಕೇರಳದ ನಿಯೋಗ ರಾಜ್ಯದ ವಿಷಯದಲ್ಲಿ ವರದಿ ಕೇಳುವಂತಾಗಿದೆ ಎಂದರೆ ಕರ್ನಾಟಕದ ನೆಲ, ಜಲದ ಮೇಲೆ ಕಾಳಜಿ ಇಲ್ಲದಿರುವ ನಾಡ ದ್ರೋಹಿ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು’ ಎಂದು ಹರಿಹಾಯ್ದಿದ್ದಾರೆ.
ಗುಜರಿ ಸರ್ಕಾರ ನಡೆಸಲು ಬಂದಿದ್ದೀರಾ?’
ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ಗುಡಿಸಲು ಕಟ್ಟಿಕೊಂಡವರು ಬಾಂಗ್ಲಾದವರು ಮತ್ತು ರೋಹಿಂಗ್ಯಾ ಸಮುದಾಯದವರು ಎಂಬ ಮಾಹಿತಿ ಇದ್ದು, ಈ ಬಗ್ಗೆ ಎನ್‌ಐಎ ತನಿಖೆ ನಡೆಸುವ ಅಗತ್ಯವಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಲ್ಲಿ ಯಾರಿದ್ದಾರೆ? ಅವರೆಲ್ಲ ಯಾವ ದೇಶದಿಂದ ಬಂದಿದ್ದಾರೆ ಎಂಬ ಮಾಹಿತಿಯೂ ಸರ್ಕಾರಕ್ಕೆ ಇಲ್ಲ ಎಂದರೆ, ನೀವು ಗುಜರಿ ಸರ್ಕಾರ ನಡೆಸಲು ಬಂದಿದ್ದೀರಾ’ ಎಂದು ಅವರು ಪ್ರಶ್ನಿಸಿದರು.
‘ಒಂದು ಕಡೆಯಿಂದ ನೀವೇ ಮನೆಗಳ ನೆಲಸಮಕ್ಕೆ ಆದೇಶ ಕೊಡುತ್ತೀರಿ. ಮತ್ತೊಂದು ಕಡೆ ಅವರಿಗೆ ಬೇರೆ ಕಡೆ ಮನೆ ಕೊಡುತ್ತೇವೆ ಎಂದು ಹೇಳುತ್ತೀರಿ. ಕನ್ನಡಿಗರಿಗೇ ಮನೆಗಳು ಇಲ್ಲ. ಆದರೆ, ಕೇರಳದ ಒತ್ತಡಕ್ಕೆ ಮಣಿದು ಮಂಡಿಯೂರಲು ನಿಮಗೆ ನಾಚಿಕೆ ಆಗಬೇಕು’ ಎಂದರು.
‘ಕೇರಳದವರು ಬಂದು ಅಲ್ಲಿ ಗುಡಿಸಲು ಕಟ್ಟಿಕೊಂಡಿಲ್ಲ. ಕೇರಳದ ಜನ ಹಾಗೆ ಬಂದು ಕೂರುವವರೂ ಅಲ್ಲ. ಅವರು ವಿದ್ಯಾವಂತರು ಮತ್ತು ಸ್ವಾಭಿಮಾನಿಗಳು. ಆದರೆ ಅಲ್ಲಿನ ರಾಜಕಾರಣಿಗಳು ಇದನ್ನು ಚುನಾವಣಾ ವಿಷಯವಾಗಿ ಬಳಸಿಕೊಂಡಿದ್ದಾರೆ. ಬೇಕಿದ್ದರೆ ವೇಣುಗೋಪಾಲ್ ಮುಂದೆ ನಿಮ್ಮ ಗುಲಾಮಗಿರಿ ತೋರಿಸಿ. ಆದರೆ, ನಮ್ಮ ರಾಜ್ಯದ ಜನರನ್ನು ಗುಲಾಮಗಿರಿಗೆ ತಳ್ಳಿ ತಲೆ ತಗ್ಗಿಸುವಂತೆ ಮಾಡಬೇಡಿ’ ಎಂದು ಹೇಳಿದರು.
ಕೇರಳ ಚುನಾವಣೆ: ರಾಜಕೀಯ ಜಟಾಪಟಿ
ಕೋಗಿಲು ಬಡಾವಣೆಯಲ್ಲಿನ ಮನೆಗಳ ತೆರವಿನ ವಿಷಯವು ಕಾಂಗ್ರೆಸ್ ಹಾಗೂ ಕೇರಳದಲ್ಲಿ ಅಧಿಕಾರದಲ್ಲಿರುವ ಎಲ್‌ಡಿಎಫ್ ಸರ್ಕಾರದ ರಾಜಕೀಯ ಜಟಾಪಟಿಯಾಗಿ ಪರಿವರ್ತನೆಯಾಗಿದೆ.
ಮುಂದಿನ ವರ್ಷದ ಮೇ ಅಂತ್ಯದೊಳಗೆ ಕೇರಳದಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಬೇಕಿದೆ. ಕೋಗಿಲು ಬಂಡೆಯ ಪ್ರದೇಶದಲ್ಲಿ ಕಟ್ಟಿರುವ ಮನೆಗಳು ಅಕ್ರಮ ಎಂಬ ಕಾರಣ ಮುಂದೊಡ್ಡಿ, ನೆಲಸಮ ಮಾಡಲಾಗಿತ್ತು. ಇಲ್ಲಿ ವಾಸವಿದ್ದ ಮುಸ್ಲಿಮರನ್ನು ಗುರಿ ಮಾಡಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟೀಕಿಸಿದ್ದರು. ಅದರ ಬೆನ್ನಲ್ಲೇ, ಎಲ್‌ಡಿಎಫ್‌ನ ಸಂಸದ ಹಾಗೂ ಶಾಸಕರನ್ನು ಕೋಗಿಲಿಗೆ ಕಳುಹಿಸಿ, ಸಂತ್ರಸ್ತರ ಬೆಂಬಲಕ್ಕೆ ನಿಲ್ಲುವಂತೆ ಮಾಡಿದ್ದರು. ಉತ್ತರ ಪ್ರದೇಶದ ಮಾದರಿಯ ‘ಬುಲ್ಡೋಜರ್ ನೀತಿ’ಯನ್ನು ಕಾಂಗ್ರೆಸ್ ಸರ್ಕಾರ ಅನುಸರಿಸುತ್ತಿದೆ ಎಂದು ಕೇರಳದ ಜನಪ್ರತಿನಿಧಿಗಳು ಹರಿಹಾಯ್ದಿದ್ದರು.
ಕೇರಳ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಪಣ ತೊಟ್ಟಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು, ಈ ಬಗ್ಗೆ ಗಮನ ಹರಿಸಿ ಸೂಕ್ತ ಪರಿಹಾರ ಕಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸೂಚಿಸಿದ್ದರು.
ಕೇರಳದಲ್ಲಿನ ಮುಸ್ಲಿಂ ಮತಬ್ಯಾಂಕ್‌ನ ಮೇಲಿನ ಕಣ್ಣು ಪಿಣರಾಯಿ ಹಾಗೂ ವೇಣುಗೋಪಾಲ್ ಅವರ ಮಧ್ಯದ ಜಗಳವಾಗಿ ಪರಿವರ್ತಿತವಾಗಿದೆ ಎಂಬ ಟೀಕೆಯೂ ವ್ಯಕ್ತವಾಗಿದೆ.
ವೇಣುಗೋಪಾಲ್ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದ ಕರ್ನಾಟಕದ ಬಿಜೆಪಿ ನಾಯಕರು, ಇಲ್ಲಿ ನಡೆಯುತ್ತಿರುವುದು ಕೇರಳ ಸರ್ಕಾರವೇ ಎಂದು ಆಕ್ರೋಶ ವ್ಯಕಪಡಿಸಿದ್ದರು. ಕೇರಳ ಚುನಾವಣೆಯ ಕಾರಣಕ್ಕಾಗಿ, ಕೋಗಿಲು ಒತ್ತುವರಿ ತೆರವು ವಿವಾದ ರಾಜಕೀಯ ವಿವಾದವಾಗಿ ಪರಿಣಮಿಸಿದೆ.
ಚುನಾವಣಾ ಲಾಭಕ್ಕಾಗಿ ಪಿಣರಾಯಿ ಟೀಕೆ: ಡಿಕೆಶಿ
‘ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೋಗಿಲು ಬಡಾವಣೆ ಒತ್ತುವರಿ ತೆರವು ವಿಚಾರದಲ್ಲಿ ಕುತಂತ್ರ ರಾಜಕೀಯ ಮಾಡುತ್ತಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋಗಿಲು ಬಡಾವಣೆಯಲ್ಲಿರುವ ಕ್ವಾರಿ ಜಾಗವನ್ನು ಘನತ್ಯಾಜ್ಯ ವಿಲೇವಾರಿ ಮಾಡಲು ಸರ್ಕಾರ ಒಂಬತ್ತು ವರ್ಷಗಳ ಹಿಂದೆಯೇ ನೀಡಿತ್ತು. ಕೆಲವರು ಈಗ ಒತ್ತುವರಿ ಮಾಡಿಕೊಂಡು ಗುಡಿಸಲು, ಶೆಡ್ ಹಾಕಿದ್ದಾರೆ. ಇದು ಸರ್ಕಾರಿ ಜಾಗ. ಸರಿಯಾದ ಮಾಹಿತಿ ಪಡೆಯದೆ ರಾಜಕೀಯ ಕಾರಣಕ್ಕಾಗಿ ಪಿಣರಾಯಿ ಟೀಕೆ ಮಾಡಿದ್ದಾರೆ’ ಎಂದು ದೂರಿದರು.
‘ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಹಲವು ವಿಚಾರಗಳ ಬಗ್ಗೆ ಸಲಹೆ ನೀಡಿದ್ದಾರೆ, ಆದರೆ, ಎಂದೂ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ. ವೇಣುಗೋಪಾಲ್ ನಮ್ಮ ನಾಯಕರು, ಸಲಹೆ ನೀಡುವ ಎಲ್ಲಾ ಅಧಿಕಾರ ಅವರಿಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.