
ಕೊಲೆಯಾದ ತಂದೆ ಭೀಮರಾಜ್ , ತಾಯಿ ಜಯಮ್ಮ ಮತ್ತು ತಂಗಿ ಅಮೃತಾ
ಕೊಟ್ಟೂರು (ವಿಜಯನಗರ): ಮೂವರ ನಾಪತ್ತೆ ಪ್ರಕರಣದ ನಿಗೂಢತೆ ಶನಿವಾರ ಬಯಲಾಗಿದೆ. ಇಲ್ಲಿನ ಲಾಲ್ ಬಹಾದ್ದೂರ್ ಶಾಸ್ತ್ರಿ ಬಡಾವಣೆಯ ವಾಸವಿದ್ದ ಬಾಡಿಗೆ ಮನೆಯಲ್ಲಿ ತೋಡಿದ್ದ ಗುಂಡಿಯಲ್ಲಿ ದಂಪತಿ, ಅವರ ಪುತ್ರಿಯ ಶವಗಳು ಪತ್ತೆಯಾದವು.
‘ನಾಪತ್ತೆಯಾಗಿದ್ದಾರೆ ಎಂದು ಈ ಮೊದಲು ದೂರು ನೀಡಿದ್ದ ದಂಪತಿಯ ಪುತ್ರ ಅಕ್ಷಯ್ ಕುಮಾರ್‌ನನ್ನು ಸ್ಥಳಕ್ಕೆ ಕರೆತಂದ ಬೆಂಗಳೂರಿನ ಪೊಲೀಸರು, ಆತ ತೋರಿಸಿದ ಕಡೆ ಉಪ ವಿಭಾಗಾಧಿಕಾರಿ ಸಮಕ್ಷಮದಲ್ಲಿ ಮಣ್ಣು ಸರಿಸಿ, ಪರಿಶೀಲಿಸಿದರು. ಆಗ ಆತನ ತಂದೆ ಭೀಮರಾಜ್ (48), ತಾಯಿ ಜಯಮ್ಮ (44) ಮತ್ತು ತಂಗಿ ಅಮೃತಾ (18) ಅವರ ಶವಗಳು ಕಾಣಿಸಿದವು’ ಎಂದು ಎಸ್‌ಪಿ ಎಸ್.ಜಾಹ್ನವಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಮೊದಲಿಗೆ ಜಯಮ್ಮ ಶವ, ಬಳಿಕ ಅಮೃತಾ ಶವ ಮತ್ತು ಕೊನೆಯಲ್ಲಿ ಭೀಮರಾಜ್ ಶವ ಇಡಲಾಗಿತ್ತು. ಭೀಮರಾಜ್ ಶವವನ್ನು ಇಡಲಾಗದೇ, ತೊಡೆಯ ಭಾಗವನ್ನು ಕತ್ತರಿಸಿ ತುಂಬಿಸಲಾಗಿತ್ತು. ಜನವರಿ 27ರಂದು ಈ ಕೊಲೆ ನಡೆದಿರುವ ಸಾಧ್ಯತೆ ಇದೆ’ ಎಂದರು.
ಇಬ್ಬರ ಹೆಸರು: ‘ ತಂದೆ, ತಾಯಿ, ತಂಗಿ ನಾಪತ್ತೆಯಾಗಿದ್ದಾರೆ ಎಂದು ಆರೋಪಿ ಮೊದಲಿಗೆ ದೂರು ನೀಡಿದ್ದ. ಆತನ ವರ್ತನೆಯಲ್ಲಿ ಸಂಶಯ ಬಂದ ಕಾರಣ ತಿಲಕ್‌ನಗರ ಪೊಲೀಸರು ವಿಚಾರಣೆ ನಡೆಸಿದ್ದರು. ತಿಲಕ್‌ನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಎಫ್ಐಆರ್‌ನಲ್ಲಿ ಇಬ್ಬರ ಹೆಸರು ಉಲ್ಲೇಖ ಇದೆ’ ಎಂದು ತಿಳಿಸಿದರು.
ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ಸಂಬಂಧಿಕರಿಗೆ ಒಪ್ಪಿಸಲಾಯಿತು. ಮತ್ತೊಂದೆಡೆ ಆರೋಪಿಯನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಬೆಂಗಳೂರಿಗೆ ಕರೆದೊಯ್ದರು.
ಹತ್ಯೆಗೆ ಹಣ ಕಾರಣ?
ಜಗಳೂರಿನಲ್ಲಿದ್ದ ಭೀಮರಾಜ್ ಅವರಿಗೆ ಸೇರಿದ ಆಸ್ತಿಯೊಂದನ್ನು ಈಚೆಗೆ ಮಾರಾಟ ಮಾಡಿದ್ದು, ₹1.50 ಕೋಟಿ ಹಣ ಬಂದಿತ್ತು. ಅದನ್ನು ನೀಡುವಂತೆ ಅಕ್ಷಯ್ ಕುಮಾರ್ ಕೇಳಿದ್ದ. ಆತ ದುಶ್ಚಟಗಳಿಗೆ ದಾಸನಾಗಿದ್ದರಿಂದ ಹಣ ಕೊಡಲು ಪೋಷಕರು ಒಪ್ಪಿರಲಿಲ್ಲ. ‘ಮಗಳ ಮದುವೆ, ನಮ್ಮ ಖರ್ಚಿಗೆ ಬೇಕು’ ಎಂದು ತಮ್ಮಲ್ಲೇ ಇಟ್ಟುಕೊಂಡಿದ್ದರು. ಇದರಿಂದ ಸಿಟ್ಟಿಗೆದ್ದು, ಇನ್ನೊಬ್ಬರ ನೆರವು ಪಡೆದು ಕೊಲೆ ನಡೆಸಿರಬೇಕು’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಮೂವರನ್ನು ಕೊಂದಿದ್ದು ಹೇಗೆ, ಯಾವಾಗ ಮತ್ತು ಕಾರಣವೇನು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ. ಸದ್ಯ ಬೆಂಗಳೂರಿನ ತಿಲಕ್‌ನಗರ ಠಾಣೆ ಪೊಲೀಸರೇ ತನಿಖೆ ನಡೆಸುತ್ತಿದ್ದಾರೆ.– ಎಸ್.ಜಾಹ್ನವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಆರೋಪಿ ಪುತ್ರ ಅಕ್ಷಯ್ ಕುಮಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.