ADVERTISEMENT

ಉಚಿತ ತರಬೇತಿ ಯೋಜನೆ: ಮನೆ ಬಾಗಿಲಿಗೆ ಬರಲಿದೆ ಕೌಶಲ್ಯ ರಥ!

ಹಳ್ಳಿಗರಿಗೆ ಬ್ಯೂಟಿಷಿಯನ್‌, ಟೆಕ್ನೀಷಿಯನ್‌ ಉಚಿತ ತರಬೇತಿ ಯೋಜನೆ

ರಾಜೇಶ್ ರೈ ಚಟ್ಲ
Published 20 ಫೆಬ್ರುವರಿ 2022, 19:31 IST
Last Updated 20 ಫೆಬ್ರುವರಿ 2022, 19:31 IST
ಮನೆ ಬಾಗಿಲಿಗೆ ಬರಲಿದೆ ಕೌಶಲ್ಯ ರಥ
ಮನೆ ಬಾಗಿಲಿಗೆ ಬರಲಿದೆ ಕೌಶಲ್ಯ ರಥ   

ಬೆಂಗಳೂರು: ನಿಮಗೆ ಬ್ಯೂಟಿಷಿಯನ್‌ (ಪ್ರಸಾದನ ಕಲಾವಿದೆ) ಆಗಬೇಕೆಂಬ ಕನಸಿದೆಯೇ, ‌ಫ್ಯಾನ್‌, ಮಿಕ್ಸಿ, ಗ್ಯಾಸ್ ಸ್ಟೌ, ಎಲೆಕ್ಟ್ರಿಕಲ್‌ ವಸ್ತುಗಳ ರಿಪೇರಿ ಕಲಿತು ಟೆಕ್ನಿಷಿಯನ್‌ ಆಗಬೇಕೆಂದಿದೆಯೇ? ಹಾಗಿದ್ದರೆ, ಇನ್ನು ಮುಂದೆ ಶುಲ್ಕ ಕಟ್ಟಿ ಈ ತರಬೇತಿ ಪಡೆಯಲು ಪಟ್ಟಣಕ್ಕೆ ಹೋಗಬೇಕೆಂದೇನೂ ಇಲ್ಲ. ನೀವಿರುವ ಹಳ್ಳಿಗೇ, ಮನೆ ಬಾಗಿಲಿಗೇ ಬರಲಿದೆ ‘ಕೌಶಲ್ಯ ರಥ’!

‘ಮುಖ್ಯಮಂತ್ರಿ ಕೌಶಲ ಕರ್ನಾಟಕ ಯೋಜನೆ’ ಅಡಿಯಲ್ಲಿ ಗ್ರಾಮೀಣ ಭಾಗದ ಮತ್ತು ಹಳ್ಳಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಯುವ ಜನತೆಗೆ ಈ ಎರಡೂ ಕೌಶಲಗಳ ತರಬೇತಿ ನೀಡಲು ರಾಜ್ಯ ಕೌಶಲ ಅಭಿವೃದ್ಧಿ ನಿಗಮ ಮುಂದಾಗಿದೆ. ಈ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೇ 23 ರಂದು ಚಾಲನೆ ನೀಡಲಿದ್ದಾರೆ.

‘ಹಳ್ಳಿಗಳಿಗೂ ಕೌಶಲ ತಲುಪಬೇಕು. ಅಲ್ಲಿನ ಯುವ ಜನರೂ ತರಬೇತಿ ಪಡೆದು ಸ್ವ ಉದ್ಯೋಗದಲ್ಲಿ ತೊಡಗಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕು’ ಎಂಬ ಗುರಿ ಇಟ್ಟು ಕೌಶಲ ಅಭಿವೃದ್ಧಿ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅವರು ನಿಗಮದ ಅಧಿಕಾರಿಗಳ ಜೊತೆ ಸಮಾಲೋಚಿಸಿ ಯೋಜನೆ ರೂಪಿಸಿದ್ದಾರೆ. ರಾಜ್ಯದ ಎಲ್ಲ ಹಳ್ಳಿಗೆ ಕೌಶಲ ಬಲ್ಲ ಪರಿಣತರು, ಪರಿಕರಗಳ ಜೊತೆ ‘ಕೌಶಲ್ಯ ರಥ’ದಲ್ಲಿ (ಬಸ್‌) ತೆರಳಿ, ಆಸಕ್ತರಿಗೆ ಉಚಿತವಾಗಿ ತರಬೇತಿ ನೀಡುವುದು ಯೋಜನೆಯ ಉದ್ದೇಶ.

ADVERTISEMENT

ಏನಿದು ತರಬೇತಿ: ರಾಜ್ಯದ ಪ್ರತಿ ಹಳ್ಳಿಗೆ ತೆರಳಲಿರುವ ಈ ‘ಕೌಶಲ್ಯ ರಥ’, ಸಹಾಯಕ ಬ್ಯೂಟಿ ಥೆರಾಪಿಸ್ಟ್‌ ಮತ್ತು ಎಲೆಕ್ಟ್ರಿಕಲ್‌ ಟೆಕ್ನಿಷಿಯನ್‌ ಎಂಬ ಎರಡು ವಿಧದ ಕೌಶಲ ತರಬೇತಿಯನ್ನು ತಲಾ 208 ಗಂಟೆ ಅವಧಿಯಲ್ಲಿ ನೀಡಲಿದೆ. ನಿತ್ಯ 8 ಗಂಟೆ ಅವಧಿ ತರಬೇತಿ ನೀಡಲಿದೆ. 18ರಿಂದ 35 ವಯೋಮಾನ, ಕನಿಷ್ಠ 8ನೇ ತರಗತಿ ಓದಿದವರು ಈ ತರಬೇತಿ ಪಡೆಯಬಹುದು. ಹೆಸರು ನೋಂದಾಯಿಸಿದವರನ್ನು ತಲಾ 15 ಮಂದಿಯ ತಂಡಗಳಾಗಿ ಮಾಡಿ ಒಂದು ತಿಂಗಳು ತರಬೇತಿ ನೀಡಲಾಗುವುದು.

ಮೊದಲ ಹಂತದಲ್ಲಿ ಉತ್ತರ ಕನ್ನಡ ಜಿಲ್ಲೆಯ 11, ಮೈಸೂರು ಜಿಲ್ಲೆಯ 12 ಕಡೆಗಳಲ್ಲಿ ಬ್ಯೂಟಿಷಿಯನ್ ತರಬೇತಿ, ಬಾಗಲಕೋಟೆ ಜಿಲ್ಲೆಯ 9 ಮತ್ತು ಚಾಮರಾಜನಗರ ಜಿಲ್ಲೆಯ 7 ಕಡೆಗಳಲ್ಲಿ ಎಲೆಕ್ಟ್ರಿಷಿಯನ್‌ ತರಬೇತಿ ನೀಡಲು ನಿಗಮ ಈಗಾಗಲೇ ರೂಪುರೇಷೆ ಸಿದ್ಧಪಡಿಸಿದೆ. ರಾಜ್ಯದಾದ್ಯಂತ ತರಬೇತಿ ನೀಡಲು ಈಗಾಗಲೇ ನಾಲ್ಕು ಬಸ್‌ಗಳನ್ನು ಸಿದ್ಧಪಡಿಸಲಾಗಿದೆ. ಸದ್ಯದಲ್ಲಿ ಇನ್ನೂ ನಾಲ್ಕು ಬಸ್‌ಗಳು ಸಿದ್ಧವಾಗಲಿದೆ.

ಎಲೆಕ್ಟ್ರಿಕಲ್‌ ಟೆಕ್ನಿಷಿಯನ್‌: ಈ ತರಬೇತಿಯಲ್ಲಿ ಮೊದಲ 88 ಗಂಟೆ ಅವಧಿಯಲ್ಲಿ ಬೇಸಿಕ್‌ ಕಲಿಸಲಾಗುತ್ತದೆ. ಬಳಿಕ ತಲಾ 40 ಗಂಟೆಯ ಅವಧಿಯಲ್ಲಿ ಎಲೆಕ್ಟ್ರಿಕಲ್‌ ವಸ್ತುಗಳ ದುರಸ್ತಿ, ಮೋಟಾರ್‌ ವೈಡಿಂಗ್‌, ಮನೆಯಲ್ಲಿ ಬಳಸುವ ಎಲೆಕ್ಟ್ರಿಕಲ್‌, ಗ್ಯಾಸ್‌ ಸ್ಟೌ, ಫ್ಯಾನ್‌ ಮುಂತಾದ ವಸ್ತುಗಳ ದುರಸ್ತಿ ಕುರಿತು ತರಬೇತಿ ನೀಡಲಾಗುವುದು.

ಸಹಾಯಕ ಬ್ಯೂಟಿ ಥೆರಾಪಿಸ್ಟ್‌: ಈ ತರಬೇತಿ ಪಡೆದವರು ಬೇಸಿಕ್‌ ಚರ್ಮದ ಆರೈಕೆ (ಸ್ಕಿನ್‌ ಕೇರ್‌) ಸೇವೆ, ಸರಳ ಮೇಕಪ್‌, ಪೆಡಿಕ್ಯೂರ್‌ (ಪಾದೋಪಚಾರ) ಮತ್ತು ಮನಿಕ್ಯೂರ್‌ (ಹಸ್ತಾಂಲಕಾರ), ಸರಳ ಮೆಹಂದಿ, ಕೇಶ ವಿನ್ಯಾಸ ಮಾಡಬಹುದು.

ಏನು ಲಾಭ: ‘ಎಲೆಕ್ಟ್ರಿಕಲ್‌ ಟೆಕ್ನಿಷಿಯನ್‌ ತರಬೇತಿ ಪಡೆದವರು ತಮ್ಮ ಮನೆಗಳಲ್ಲಿ ಕೆಟ್ಟು ಹೋದ ಎಲೆಕ್ಟ್ರಿಕಲ್‌ ವಸ್ತುಗಳನ್ನು ದುರಸ್ತಿ ಮಾಡಬಹುದು. ಬಲ್ಬ್‌, ಟ್ಯೂಬ್ ಲೈಟ್‌, ಎಲ್‌ಇಡಿ ಬಲ್ಬ್, ಸ್ವಿಚ್‌ಗಳು, ಸರ್ಕ್ಯೂಟ್‌ ಬ್ರೇಕರ್‌ಗಳನ್ನು ಬದಲಾಯಿಸಬಹುದು. ಇಸ್ತ್ರಿ ಪೆಟ್ಟಿಗೆ, ಕಾಲಿಂಗ್‌ ಬೆಲ್‌, ಮಿಕ್ಸಿ, ಗ್ಯಾಸ್‌ ಸ್ಟೌ ಮುಂತಾದವುಗಳನ್ನು ದುರಸ್ತಿ ಮಾಡಬಹುದು. ಫ್ಯಾನ್‌, ಮಿಕ್ಸಿ, ಸಬ್‌ ಮರ್ಸಿಬಲ್‌ ಪಂಪ್‌ ಮುಂತಾದವುಗಳ ಮೋಟಾರ್‌ ವೈಡಿಂಗ್‌, ದುರಸ್ತಿ ಕಾರ್ಯ ಮಾಡಬಹುದು. ಹೊಸ ವಿದ್ಯುತ್‌ ಅಳವಡಿಕೆ ಕೆಲಸಗಳನ್ನು ನುರಿತ ತಾಂತ್ರಿಕರ ಮೇಲ್ವಿಚಾರಣೆಯಲ್ಲಿ ಮಾಡುವ ಮೂಲಕ ಉದ್ಯೋಗವನ್ನು ಮಾಡಬಹುದು’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಅಶ್ವಿನ್‌ ಗೌಡ ಅವರು ತಿಳಿಸಿದರು.

ಪ್ರಮಾಣಪತ್ರ, ಪರಿಕರಗಳ ಕಿಟ್‌

‘ಎರಡೂ ಕೌಶಲಗಳ ತರಬೇತಿಯಲ್ಲಿ ಭಾಗವಹಿಸಿದವರಿಗೆ ಪ್ರಾಯೋಗಿಕ ಕಲಿಕೆಯ ಬಗ್ಗೆ ಕೊನೆಯ ದಿನ ತಟಸ್ಥ ಸಂಸ್ಥೆಯೊಂದರಿಂದ ಪರೀಕ್ಷೆ ನಡೆಸಲಾಗುವುದು. ಅದರಲ್ಲಿ ಉತ್ತೀರ್ಣರಾದವರಿಗೆ ಕೌಶಲ ಅಭಿವೃದ್ಧಿ ನಿಗಮದ ವತಿಯಿಂದ ಪ್ರಮಾಣಪತ್ರ ನೀಡಲಾಗುವುದು. ಅಲ್ಲದೆ, ತರಬೇತಿ ಪಡೆದ ಕೌಶಲಕ್ಕೆ ಸಂಬಂಧಿಸಿ ಪರಿಕರಗಳ ಕಿಟ್‌ ಉಚಿತವಾಗಿ ನೀಡಲಾಗುವುದು. ಹಳ್ಳಿಗಳಲ್ಲಿ ಬ್ಯೂಟಿಷಿಯನ್‌ ಮತ್ತು ಎಲೆಕ್ಟ್ರಿಕಲ್‌ ಟೆಕ್ನಿಷಿಯನ್‌ ಕೌಶಲ ಕಲಿತವರಿಗೆ ಹೆಚ್ಚಿನ ಬೇಡಿಕೆ ಇದೆ. ತರಬೇತಿ ಪಡೆದು ಸ್ವಾವಲಂಬಿಗಳಾಗಲು ಗ್ರಾಮೀಣ ಪ್ರದೇಶದವರಿಗೆ ಇದರಿಂದ ಅವಕಾಶ ಆಗಲಿದೆ’ ಎಂದು ಅಶ್ವಿನ್‌ ಗೌಡ ತಿಳಿಸಿದರು.

* ರಾಜ್ಯದ ಗ್ರಾಮೀಣ ಯುವ ವರ್ಗವನ್ನು ಸ್ವ ಉದ್ಯೋಗಿಗಳನ್ನಾಗಿಸುವ ಉದ್ದೇಶದಿಂದ ಈ ವಿನೂತನ ಕೌಶಲ ತರಬೇತಿ ಯೋಜನೆ ರೂಪಿಸಲಾಗಿದೆ.

-ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಐಟಿ ಬಿಟಿ, ಕೌಶಲಾಭಿವೃದ್ಧಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.