ADVERTISEMENT

ಐ.ಟಿ ಮುಖ್ಯಸ್ಥ ಬಾಲಕೃಷ್ಣನ್‌ ವರ್ಗಾವಣೆಗೆ ಕೆಪಿಸಿಸಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 19:06 IST
Last Updated 14 ಏಪ್ರಿಲ್ 2019, 19:06 IST
   

ಬೆಂಗಳೂರು: ‘ಆದಾಯ ತೆರಿಗೆ (ಐ.ಟಿ) ಇಲಾಖೆಯ ಕರ್ನಾಟಕ ಮತ್ತು ಗೋವಾ ವೃತ್ತದ ಮಹಾನಿರ್ದೇಶಕ (ತನಿಖೆ) ಬಿ.ಆರ್‌. ಬಾಲಕೃಷ್ಣನ್‌ ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕು’ ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಕೆಪಿಸಿಸಿ ಮನವಿ ಸಲ್ಲಿಸಿದೆ.

‘ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸುವುದು ಆಯೋಗದ ಕರ್ತವ್ಯ. ಈ ಹಿನ್ನೆಲೆಯಲ್ಲಿ ನೀತಿಸಂಹಿತೆ ಅನುಷ್ಠಾನಗೊಳಿಸುವ ವಿಚಾರದಲ್ಲಿ ರಾಜಕೀಯ ಪಕ್ಷಗಳ ಮಧ್ಯೆ ಯಾವುದೇ ತಾರತಮ್ಯ ಮಾಡಬಾರದು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ಗುರಿ ಮಾಡಿ ಐ.ಟಿ ಇಲಾಖೆ ದಾಳಿ ನಡೆಸುತ್ತಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ

‘ಐ.ಟಿ ಇಲಾಖೆಯ ಈ ಧೋರಣೆಯನ್ನು ಖಂಡಿಸಿ ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿ ನೇತೃತ್ವದಲ್ಲಿ ಉಭಯ ಪಕ್ಷಗಳ ನಾಯಕರು ಮಾರ್ಚ್‌ 28ರಂದು ಐ.ಟಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಆದರೂ, ಇಲಾಖೆ ಅಧಿಕಾರಿಗಳು ದಾಳಿ ಮುಂದುವರಿಸಿದ್ದಾರೆ’

ADVERTISEMENT

‘ಬೆಂಗಳೂರು ಕೇಂದ್ರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್ ಅರ್ಷದ್, ಚಿಕ್ಕೋಡಿಯ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ, ಪಕ್ಷದ ಮುಖಂಡ ಎಸ್‌.ಎಸ್. ಮಲ್ಲಿಕಾರ್ಜುನ್‌ ಅವರ ಆಪ್ತರ ಮನೆ ಮತ್ತು ಕಚೇರಿಗಳ ಮೇಲೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚುನಾವಣೆಗಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು ಹಣ ಸಂಗ್ರಹಿಸುತ್ತಿದ್ದಾರೆ ಎಂಬ ಗುಮಾನಿ ಮೇಲೆ ಈ ದಾಳಿ ನಡೆಸಲಾಗುತ್ತಿದೆ’ ಎಂದೂ ಪತ್ರದಲ್ಲಿ ದೂರಿದ್ದಾರೆ.

‘ಉಭಯ ಪಕ್ಷಗಳ ನಾಯಕರು ನಡೆಸಿದ ಪ್ರತಿಭಟನೆಯನ್ನು ‘ಮಮತಾ ಬ್ಯಾನರ್ಜಿ ತಂತ್ರಗಾರಿಕೆ’ ಎಂದು ಉಲ್ಲೇಖಿಸಿ ಬಾಲಕೃಷ್ಣನ್‌ ಅವರು ರಾಜ್ಯ ಚುನಾವಣಾ ಅಧಿಕಾರಿಗೆ ಪತ್ರ ಬರೆದಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಡಿ ರಚನೆಯಾದ ಸರ್ಕಾರದ ವಿರುದ್ಧ ಅಧಿಕಾರಶಾಹಿ ವ್ಯವಸ್ಥೆ ಈ ರೀತಿ ಲಘುವಾಗಿ ಹೇಳಿಕೆ ನೀಡುವುದು ಎಷ್ಟು ಸರಿ. ಇಂಥ ಅಧಿಕಾರಿ ಈ ಹುದ್ದೆಯಲ್ಲಿ ಮುಂದುವರಿಯಲು ಯೋಗ್ಯರಲ್ಲ. ತಕ್ಷಣ ಅವರನ್ನು ರಾಜ್ಯದಿಂದ ಹೊರಗೆ ವರ್ಗಾವಣೆ ಮಾಡಬೇಕು’ ಎಂದೂ ಪತ್ರದಲ್ಲಿ ಒತ್ತಾಯಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.