ADVERTISEMENT

ಪರಮೇಶ್ವರ- ದಿನೇಶ್ ಗುಂಡೂರಾವ್ ಮಧ್ಯೆ ಮುಸುಕಿನ ಗುದ್ದಾಟ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 9:33 IST
Last Updated 1 ಸೆಪ್ಟೆಂಬರ್ 2018, 9:33 IST
ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.   

ಬೆಂಗಳೂರು: ನಗರದ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಸಭೆ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನಡುವಿನ ಮುಸುಕಿನ ಗುದ್ದಾಟಕ್ಕೆ ಸಾಕ್ಷಿಯಾಯಿತು.

ಜಿಲ್ಲಾವಾರು ಮುಖಂಡರ ಪ್ರಮುಖ ಸಭೆಯನ್ನುಬಿಟ್ಟು ಪರಮೇಶ್ವರ ತುಮಕೂರಿಗೆ ತೆರಳಿದರು.

ತಮ್ಮ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಮೊದಲ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳ ತರಗತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ADVERTISEMENT

ಬಹುತೇಕ ಪರಮೇಶ್ವರ ಬೆಂಬಲಿಗರೇ ಇರುವ ನಿಷ್ಕ್ರಿಯ ಬ್ಲಾಕ್ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಗಳಲ್ಲಿ ಬದಲಾವಣೆ ಮಾಡಲು ದಿನೇಶ್ ಗುಂಡೂರಾವ್ ಮುಂದಾಗಿದ್ದಾರೆ. ಇದರಿಂದ ಪರಮೇಶ್ವರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜತೆಗೆ, ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ.

ಸಭೆಯಲ್ಲಿ ವೇಣುಗೋಪಾಲ್ ಮುಂದೆ ನಿಷ್ಕ್ರಿಯ ಸಮಿತಿಗಳ ಬಗ್ಗೆ ಪ್ರಸ್ತಾಪಿಸಬಹುದು ಎಂಬ ಕಾರಣಕ್ಕೆ ಪರಮೇಶ್ವರ ಸಭೆಯಿಂದ ದೂರ ಉಳಿದಿರಬಹುದು ಎಂದು ಹೇಳಲಾಗಿದೆ.

ಕೊಪ್ಪಳದಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಒತ್ತಾಯ
‘ಲೋಕಸಭಾ ಚುನಾವಣೆಗೆ ನೀವು ನಮ್ಮ ಜಿಲ್ಲೆಯಿಂದ ಸ್ಪರ್ಧಿಸುವುದಾದರೆ ಸಂಪೂರ್ಣ ಬೆಂಬಲ ಇದೆ. ನಾವೆಲ್ಲರೂ ಒಗ್ಗಟ್ಟಾಗಿ ನಿಂತು ನಿಮ್ಮನ್ನು ಗೆಲ್ಲಿಸುತ್ತೇವೆ’ ಎಂದು ಜಿಲ್ಲಾ ಕಾಂಗ್ರೆಸ್‌ ಮುಖಂಡರುಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ನಾನು ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ನೀಡಿದ್ದೇನೆ. ಆದರೂ ಪ್ರಮುಖ ನಾಯಕರನ್ನು ಜನರು ತಿರಸ್ಕರಿಸಿದ್ದಾರೆ. ಸ್ಪರ್ಧೆ ಬಗ್ಗೆ ಸದ್ಯಕ್ಕೆ ಏನೂ ಮಾತನಾಡುವುದಿಲ್ಲ’ ಎಂದು ಹೇಳಿದರು.

ಇದೇ ವೇಳೆ ಕೊಪ್ಪಳಕ್ಕೆ ಆರು ಮಂದಿ ಆಕಾಂಕ್ಷಿಗಳ ಹೆಸರು ಪ್ರಸ್ತಾಪವಾಯಿತು. ಬಸವರಾಜ್ ಬಾದರ್ಲಿ, ಬಸವರಾಜ್ ಹಿಟ್ನಾಳ್, ವಿರೂಪಾಕ್ಷಪ್ಪ, ಬಸವರಾಜ ರಾಯರೆಡ್ಡಿ, ಕರಿಯಣ್ಣ ಮತ್ತು ಇಕ್ಬಾಲ್ ಅನ್ಸಾರಿ ಲೋಕಸಭಾ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

‘ಸಭೆಗೆ ನಮ್ಮ ಎಲ್ಲಾ ಮುಖಂಡರು ಭಾಗಿಯಾಗಿದ್ದೆವು. ಪಕ್ಷ ಸಂಘಟನೆ, ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆದಿದೆ. ನಮ್ಮಲ್ಲಿ ಐದಾರು ಮಂದಿ ಆಕಾಂಕ್ಷಿಗಳಿದ್ದಾರೆ. ಹೀಗಾಗಿ ಒಗ್ಗಟ್ಟಾಗಿ ಆರಿಸುವಂತೆ ಸೂಚಿಸಿದ್ದಾರೆ. ಪಕ್ಷದ ಹಿರಿಯರು ಯಾರಿಗೆ ಟಿಕೆಟ್‌ ಕೊಡುತ್ತಾರೋ ಅವರ ಪರ ಕೆಲಸಮಾಡುತ್ತೇವೆ. ‌ಸಿದ್ದರಾಮಯ್ಯನವರು ಸ್ಪರ್ಧಿಸಿದರೆ ನಾವೆಲ್ಲ ಬೆಂಬಲಿಸುತ್ತೇವೆ’ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.