ADVERTISEMENT

13ರಂದು ‘ಶಿವಮೊಗ್ಗ ಚಲೋ’: ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 21:49 IST
Last Updated 9 ಮಾರ್ಚ್ 2021, 21:49 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ರಾಜ್ಯ ಬಿಜೆಪಿ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಮೇಲೆ ಸುಳ್ಳು ಕೇಸು ಹಾಕಿಸಿ, ದೌರ್ಜನ್ಯ ನಡೆಸುತ್ತಿದೆ. ಇದನ್ನು ಖಂಡಿಸಿ ಇದೇ 13ರಂದು ‘ಶಿವಮೊಗ್ಗ ಚಲೋ’ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಕೊರೊನಾ ಹಾಗೂ ನಂತರದ ಸಮಯದಲ್ಲಿ ಬಿಜೆಪಿ ನಾಯಕರು ಶಾಂತಿಭಂಗದ ಹೇಳಿಕೆ ನೀಡಿದ್ದರೂ ಸರ್ಕಾರ ಯಾರ ಮೇಲೂ ಕೇಸು ದಾಖಲಿಸಲಿಲ್ಲ. ಆಗಲೂ ಅಧಿಕಾರ ದುರ್ಬಳಕೆ ಮಾಡಿಕೊಂಡು ಸರ್ಕಾರದ ಪದಾರ್ಥವನ್ನು ತಮ್ಮ ಪದಾರ್ಥ ಎಂಬಂತೆ ಹಂಚಿದ್ದನ್ನು ಬಯಲು ಮಾಡಿದರೂ ಕ್ರಮ ಕೈಗೊಳ್ಳಲಿಲ್ಲ’ ಎಂದರು.

‘ಬಿಜೆಪಿ ಸರ್ಕಾರದ ಈ ನಡೆಯ ವಿರುದ್ಧ ಪ್ರತಿಭಟನೆಗೆ ನಾವು ನಿರ್ಧರಿಸಿದ್ದೇವೆ. ಈ ಬಗ್ಗೆ ಸದನದಲ್ಲಿ ಹಾಗೂ ಇತರೆ ಕಡೆಗಳಲ್ಲಿ ಚರ್ಚೆ ಮಾಡಿದ್ದೇವೆ. ಈ ಮಧ್ಯೆ, ಪಕ್ಷದ ಶಾಸಕ ಬಿ.ಕೆ.ಸಂಗಮೇಶ್ವರ್‌ ಮತ್ತು ಅವರ ಕುಟುಂಬ ಸದಸ್ಯರು ಹಾಗೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ಹಾಕಲಾಗಿದೆ. ಅವರನ್ನು ಬಿಜೆಪಿಗೆ ಸೆಳೆಯಲು ಒತ್ತಡ ಹೇರಿದ್ದರು. ಅವರು ಆಪರೇಷನ್ ಕಮಲಕ್ಕೆ ಬಲಿಯಾಗಲಿಲ್ಲ ಎಂಬ ಕಾರಣಕ್ಕೆ ಕಿರುಕುಳ ನೀಡಲಾಗುತ್ತಿದೆ’ ಎಂದೂ ಆರೋಪಿಸಿದರು.

ADVERTISEMENT

‘ಶಿವಮೊಗ್ಗ ಜಿಲ್ಲೆಯಲ್ಲಿ ಒಬ್ಬ ಕಾಂಗ್ರೆಸ್ ಶಾಸಕ ಇದ್ದಾನೆ ಎಂದು ಪೊಲೀಸರ ಕೈಯಲ್ಲಿ ಎಫ್ಐಆರ್ ಹಾಕಿಸಿ, ತೊಂದರೆ ನೀಡುತ್ತಿದ್ದಾರೆ. ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಮಾತನಾಡಲು ಅವಕಾಶ ಕೊಡಿ ಎಂದು ಕೇಳಿದರೂ ಅವಕಾಶ ನೀಡಲಿಲ್ಲ. ಆಗ ನೋವಿನಿಂದ ತಮ್ಮ ಅಂಗಿ ಬಿಚ್ಚಿ, ಮೈಮೇಲಾಗಿರುವ ಗಾಯ ತೋರಿಸಲು ಮುಂದಾದಾಗ, ಅಸಭ್ಯ ವರ್ತನೆ ಎಂದು ಹೇಳಿ ಅವರನ್ನು ವಿಧಾನಸಭೆ ಕಲಾಪದಿಂದ ಅಮಾನತು ಮಾಡಲಾಗಿದೆ. ಆ ಮೂಲಕ ಅವರ ಹಕ್ಕಿಗೆ ಧಕ್ಕೆ ತರಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.