ADVERTISEMENT

ಕೋಮು ಗಲಭೆ, ನಿರುದ್ಯೋಗ ಸಮಸ್ಯೆಗೆ ಬಿಜೆಪಿ ಸರ್ಕಾರದ ದೌರ್ಬಲ್ಯ ಕಾರಣ– ಡಿಕೆಶಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 8:37 IST
Last Updated 18 ಏಪ್ರಿಲ್ 2022, 8:37 IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌   

ಬೆಂಗಳೂರು: ‘ಇಡೀ ರಾಜ್ಯ, ದೇಶದಲ್ಲಿ ಕೋಮು ಗಲಭೆ, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಈ ಮಧ್ಯೆ, ಧಾರ್ಮಿಕ ದ್ವೇಷ ಹಬ್ಬಿಸಲಾಗುತ್ತಿದೆ. ಈ ಎಲ್ಲ ಪರಿಸ್ಥಿತಿಗೆ ಬಿಜೆಪಿ ಸರ್ಕಾರದ ದೌರ್ಬಲ್ಯವೇ ಕಾರಣ. ಬಿಜೆಪಿ ಸರ್ಕಾರ ಅವರ ಪಕ್ಷದವರ ಮೇಲೆ ಕ್ರಮ ತೆಗೆದುಕೊಂಡು, ಅವರನ್ನು ನಿಯಂತ್ರಣದಲ್ಲಿ ಇಟ್ಟಿದ್ದರೆ ಇಂಥ ಅನಾಹುತ ಸಂಭವಿಸುತ್ತಿರಲಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಹುಬ್ಬಳ್ಳಿಯಲ್ಲಿ ನಡೆದ ಘಟನೆಯನ್ನು ಕಾಂಗ್ರೆಸ್ ಉಗ್ರವಾಗಿ ಖಂಡಿಸುತ್ತದೆ. ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು‘ ಎಂದರು.

‘ಹುಬ್ಬಳ್ಳಿಯಲ್ಲಿ ಪೊಲೀಸ್ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡಿ ಪರಿಸ್ಥಿತಿ ನಿಭಾಯಿಸಿದ್ದಾರೆ. ಸಾರ್ವಜನಿಕ ಆಸ್ತಿಗಳ ಮೇಲೆ ಕಲ್ಲು ಎಸೆದು ಹಾನಿ ಮಾಡಲು ಇವರು ಯಾರು? ನಾನು ಹುಬ್ಬಳ್ಳಿಗೆ ಹೋಗುತ್ತೇನೆ. ರಾಜ್ಯದಲ್ಲಿ ಶಾಂತಿ ಕಾಪಾಡುವುದು ಅವಶ್ಯಕ. ರಾಜ್ಯದಲ್ಲಿ ಬಂಡವಾಳ ಹೂಡಿಕೆ ಆಗಬೇಕಾದರೆ ಇಂಥ ಘಟನೆ ನಡೆಯಬಾರದು’ ಎಂದರು.

ADVERTISEMENT

‘ಕಳೆದ ಒಂದು ವರ್ಷದಲ್ಲಿ ನೈತಿಕ ಪೊಲೀಸ್ ಗಿರಿ ಹೆಸರಲ್ಲಿ ಬಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು ಅನೇಕ ಬಾರಿ ಕಾನೂನು ಕೈಗೆತ್ತಿಕೊಂಡಿದ್ದಾರೆ. ನೈತಿಕ ಪೊಲೀಸ್ ಗಿರಿ ಮಾಡಿದರೆ ತಪ್ಪೇನೆಂದು ಮುಖ್ಯಮಂತ್ರಿ ಪ್ರೋತ್ಸಾಹ ನೀಡುತ್ತಿದ್ದಾರೆ. ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ಸಮವಸ್ತ್ರ ತ್ಯಜಿಸಿ ಕೇಸರಿ ವಸ್ತ್ರ ಧರಿಸಿದರೂ ಮುಖ್ಯಮಂತ್ರಿ, ಗೃಹಮಂತ್ರಿ ಸುಮ್ಮನಿದ್ದರು. ಹುಬ್ಬಳ್ಳಿಯಲ್ಲಿ ಚರ್ಚ್‌ಗೆ ನುಗ್ಗಿ ಬಲವಂತವಾಗಿ ಭಜನೆ ಮಾಡಿದರು. ಅನ್ಯಧರ್ಮಿಯರು ಜಾತ್ರೆಗಳಲ್ಲಿ ವ್ಯಾಪಾರ ಮಾಡಬಾರದು ಎಂದು ನಿರ್ಬಂಧ ಹೇರಿದರು’ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿ ಘಟನೆಯಲ್ಲಿ ಪ್ರಭಾವಿ ವ್ಯಕ್ತಿಗಳ ಕೈವಾಡದ ಬಗ್ಗೆ ಸರ್ಕಾರ ಶಂಕೆ ವ್ಯಕ್ತಪಡಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ, 'ಯಾವುದೇ ಪ್ರಭಾವಿ ವ್ಯಕ್ತಿಯ ಕೈವಾಡ ಇದ್ದರೂ ಅವರನ್ನು ಒದ್ದು ಒಳಗೆ ಹಾಕಲಿ. ನನ್ನ ಕೈವಾಡ ಇದ್ದರೂ ನನ್ನನ್ನು ಒಳಗೆ ಹಾಕಲಿ‘ ಎಂದರು.

‘ಮುಸ್ಲಿಮರಿಂದ ಅಂಗಡಿಗಳಿಂದ ಮಾಂಸ ಖರೀದಿ ಮಾಡಬೇಡಿ, ವ್ಯಾಪಾರ ಮಾಡಬೇಡಿ ಎಂದೆಲ್ಲ ಹೇಳಿದ ಪರಿಣಾಮ ರೈತರಿಂದ ಕುರಿ ಖರೀದಿ ಪ್ರಮಾಣ, ಬೆಲೆ ಕುಸಿದಿದೆ. ಈ ರೀತಿ ಜನರ ಹೊಟ್ಟೆ ಮೇಲೆ ಹೊಡೆದರೆ ಆಕ್ರೋಶ ಭುಗಿಲೇಳುತ್ತದೆ. ಎಲ್ಲ ಧರ್ಮದವರು ಅವರವರ ವೃತ್ತಿ ಮಾಡುತ್ತಾ ಸಾವಿರಾರು ವರ್ಷಗಳಿಂದ ಬದುಕುತ್ತಿದ್ದೇವೆ' ಎಂದರು.

‘ನಾವು (ಕಾಂಗ್ರೆಸ್‌) ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲು ಹೋದಾಗ ನಮ್ಮನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ. ಬಿಜೆಪಿ ನಾಯಕರು, ಕಾರ್ಯಕರ್ತರ ಕೂಗಾಟ, ಚೀರಾಟ ಮೂಲಕ ಮೆರವಣಿಗೆಯಲ್ಲಿ ಮುಖ್ಯಮಂತ್ರಿ ಮನೆಗೆ ಬಂದು ಈಶ್ವರಪ್ಪ ರಾಜೀನಾಮೆ ನೀಡಿದರೂ ಯಾವುದೇ ಪ್ರಕರಣ ದಾಖಲಿಸಿಲ್ಲ.‌ ಈಶ್ವರಪ್ಪನವರು ಶಿವಮೊಗ್ಗದಲ್ಲಿ ಸೆಕ್ಷನ್ 144 ಉಲ್ಲಂಘನೆ ಮಾಡಿ ಮೃತ ಹರ್ಷನ ಶವ ಯಾತ್ರೆ ಮಾಡಿದರೂ ಕೇಸ್ ಹಾಕಲಿಲ್ಲ. ಹೀಗೆ ಹಲವು ಬಾರಿ ಬಿಜೆಪಿ ನಾಯಕರು ಕಾನೂನು ಉಲ್ಲಂಘಿಸಿದರೂ ಅವರ ಮೇಲೆ ಕೇಸ್ ಹಾಕದೆ, ನಮ್ಮ ಮೇಲೆ ಮಾತ್ರ ದಾಖಲಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಮಾಧ್ಯಮಗಳ ವರದಿ ಪ್ರಕಾರ ಮಠಗಳಿಗೆ ನೀಡುವ ಅನುದಾನದಲ್ಲೂ ಶೇ 30ರಷ್ಟು ಕಮಿಷನ್ ಪಡೆಯಲಾಗುತ್ತಿದೆ. ಮಾಹಿತಿ ತಂತ್ರಜ್ಞಾನ, ನವೋದ್ಯಮ ರಾಜಧಾನಿಯಾಗಿದ್ದ ಕರ್ನಾಟಕವನ್ನು ಭ್ರಷ್ಟಾಚಾರ ರಾಜಧಾನಿಯನ್ನಾಗಿ ಮಾಡಿದ್ದಾರೆ. ಮೋದಿ ಅವರು ದೇಶದ ವ್ಯವಸ್ಥೆ ಸರಿಪಡಿಸುವುದಾಗಿ ಹೇಳಿದ್ದರು. ಆದರೆ, ಈಗ ಏನಾಗಿದೆ’ ಎಂದು ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದರು.

ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ಹಾಗೂ ಸಿಐಡಿ ತನಿಖೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, 'ನಾನು, ಪ್ರಿಯಾಂಕ್ ಖರ್ಗೆ ಅಭ್ಯರ್ಥಿಗಳ ಜತೆ ಮಾತನಾಡಿದ್ದೇವೆ. ಯಾವ ಕಾಲದಲ್ಲೂ ಇಂಥ ಅಕ್ರಮ ನಡೆದಿರಲಿಲ್ಲ. ಈ ಹಿಂದೆ ಕೆಲವು ಅಕ್ರಮ ನೋಡಿದ್ದೇವೆ. ನಾನು ಕೂಡ ಇಂಧನ ಸಚಿವ ಆಗಿದ್ದಾಗ 40 ಸಾವಿರ ಹುದ್ದೆಗಳ ಭರ್ತಿ ಮಾಡಿದ್ದು, ದೈಹಿಕ ಪರೀಕ್ಷೆಯನ್ನು ವಿಡಿಯೊ ಮಾಡಿಸಿದ್ದೆ. ಒಬ್ಬರೂ ನಮ್ಮ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಮಾಡಿಲ್ಲ’ ಎಂದರು.

‘ನನ್ನ ಕ್ಷೇತ್ರದವರಿಗೆ ಲೈನ್‌ಮ್ಯಾನ್ ಕೆಲಸ ಕೊಡಿಸಲು ಆಗಲಿಲ್ಲ. ಅಷ್ಟು ಪಾರದರ್ಶಕವಾಗಿ ನೇಮಕಾತಿ ಮಾಡಲಾಗಿತ್ತು. ಆದರೆ, ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ 21 ಪ್ರಶ್ನೆಗೆ ಉತ್ತರ ಬರೆದ ಅಭ್ಯರ್ಥಿಗೆ ಏಳನೇ ರಾಂಕ್ ನೀಡಲಾಗಿದೆ. ಅದರ ದಾಖಲೆಗಳು ನನ್ನ ಬಳಿ ಇವೆ. 52 ಸಾವಿರ ಯುವಕರು ಪರೀಕ್ಷೆ ಬರೆದಿದ್ದಾರೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಅನ್ಯಾಯವಾಗಿದೆ. ಮುಖ್ಯಮಂತ್ರಿ ಈ ಬಗ್ಗೆ ಗಮನಹರಿಸಿದ್ದಾರೋ ಇಲ್ಲವೋ, ಆದರೆ ಗೃಹಮಂತ್ರಿಗಳು ಅಕ್ರಮ ನಡೆದಿಲ್ಲ ಎಂದು ಹೇಳಿ ಸಿಐಡಿ ತನಿಖೆ ಮಾಡಿಸುತ್ತಿದ್ದಾರೆ. ಈ ವಿಚಾರವಾಗಿ ಹೋರಾಟ ಮಾಡಬೇಕಿದೆ. ಕಾಮಗಾರಿಗಳಲ್ಲಿ ಶೇ 40 ಕಮಿಷನ್ ಭ್ರಷ್ಟಾಚಾರ. ಆದರೆ, ನೇಮಕಾತಿಯಲ್ಲಿ ಈ ರೀತಿ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಇದರಲ್ಲಿ ಬಿಜೆಪಿ ನಾಯಕರೇ ಶಾಮೀಲಾಗಿದ್ದು, ಈ ಭ್ರಷ್ಟ ಸರ್ಕಾರ ರಾಜ್ಯವನ್ನು ಭ್ರಷ್ಟಾಚಾರದ ರಾಜಧಾನಿ ಮಾಡುತ್ತಿದೆ. ಇಡೀ ಸರ್ಕಾರವೇ ಇದರಲ್ಲಿ ಭಾಗಿಯಾಗಿದೆ' ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.