ADVERTISEMENT

ಗೆಲುವಿಗೆ ಪಕ್ಷ, ಸಂಘಟನೆ ಮುಖ್ಯ: ಡಿ.ಕೆ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 22:47 IST
Last Updated 8 ಜೂನ್ 2021, 22:47 IST
ಶಿವಕುಮಾರ್‌
ಶಿವಕುಮಾರ್‌   

ಬೆಂಗಳೂರು: ‘ಯಾವುದೇ ಚುನಾವಣೆಯಲ್ಲಿ ಗೆಲುವು ಸಾಧಿಸಿ, ನಾಯಕನನ್ನು ಬೆಳೆಸಲು ಕೇವಲ ವ್ಯಕ್ತಿಯಿಂದ ಸಾಧ್ಯವಿಲ್ಲ. ಅದಕ್ಕೆ ಪಕ್ಷ ಹಾಗೂ ಸಂಘಟನೆ ಮುಖ್ಯ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಮಸ್ಕಿ ಕ್ಷೇತ್ರದಿಂದ ಆಯ್ಕೆಯಾದ ಬಸವನಗೌಡ ತುರುವಿಹಾಳ್ ಅವರನ್ನು ಕೆಪಿಸಿಸಿ ಕಚೇರಿಯಲ್ಲಿ ಸನ್ಮಾನಿಸಿ ಮಾತನಾಡಿದ ಅವರು, ‘ನಾನು ಪಕ್ಷದ ಅಧ್ಯಕ್ಷನಾಗಿ ಪ್ರತಿಜ್ಞೆ ತೆಗೆದುಕೊಳ್ಳುವ ದಿನ
ರಾಹುಲ್ ಗಾಂಧಿ ಕರೆ ಮಾಡಿ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕೆಂದು ಹೇಳಿದ್ದರು. ಜತೆಗೂಡುವುದು ಆರಂಭ. ಜತೆಗೂಡಿ ಆಲೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂದು ನಾನು ಅವರಿಗೆ ಹೇಳಿದ್ದೆ’ ಎಂದರು.

‘ಮಸ್ಕಿಯಲ್ಲಿ ಗೆಲುವು ಸಾಧಿಸಲು ಕಾರಣ ಅಭ್ಯರ್ಥಿ ಬಗ್ಗೆ ಇಡೀ ಜಿಲ್ಲೆಯ ನಾಯಕರಲ್ಲಿ ಒಕ್ಕೊರಲಿನ ಅಭಿಪ್ರಾಯ ಬಂದಿದ್ದು. ನಂತರ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದು. ಈ ಗೆಲುವಿಗೆ ಡಿ.ಕೆ. ಶಿವಕುಮಾರ್ ಆಗಲಿ, ಕಾರ್ಯಾಧ್ಯಕ್ಷರಾಗಲಿ ಕಾರಣ ಅಲ್ಲ. ನೀವು ಮತದಾರರ ಸ್ವಾಭಿಮಾನ ಉಳಿಸಿಕೊಂಡಿದ್ದು ಮುಖ್ಯ’ ಎಂದು ತುರುವಿಹಾಳ್ ಅವರನ್ನು ಹೊಗಳಿದರು.

ADVERTISEMENT

‘ಪ್ರತಿ ಕ್ಷೇತ್ರದಲ್ಲಿ ನಮಗೆ ಮಾಹಿತಿ ನೀಡುವ ತಂಡವಿದೆ. ಯಾರೇ ಪಕ್ಷದ ವಿರುದ್ಧ ಶಿಸ್ತು ಮೀರಿ ನಡೆದುಕೊಂಡರೆ ನಾನು ಸುಮ್ಮನೆ ಇರುವುದಿಲ್ಲ. ನಿಮಗೆ ಯಾರ ಬೆಂಬಲ ಇದ್ದರೂ ಸರಿ, ನಾನು ಮುಲಾಜು ನೋಡುವುದಿಲ್ಲ’ ಎಂದು ಪಕ್ಷದ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದರು.

ಕಾಂಗ್ರೆಸ್‌ ಹೋರಾಟದ ಫಲ: ‘ಲಸಿಕೆ ನೀಡುವ ಜವಾಬ್ದಾರಿ ರಾಜ್ಯ ಸರ್ಕಾರಗಳದ್ದಲ್ಲ. ಕೇಂದ್ರ ಸರ್ಕಾರ ಜವಾಬ್ದಾರಿ ಹೊರಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿದ್ದರಿಂದ ದೇಶದಲ್ಲಿ 18 ವರ್ಷ ದಾಟಿದವರಿಗೂ ಉಚಿತ ಲಸಿಕೆ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ’ ಎಂದು ಶಿವಕುಮಾರ್‌ ತಿಳಿಸಿದರು.

‘ಇದು ಕಾಂಗ್ರೆಸ್‌ ಹೋರಾಟದ ಫಲ. ನಾವು ನಮ್ಮ ಅಭಿಯಾನ ಆರಂಭಿಸಿ, ರಾಜ್ಯಪಾಲರನ್ನು ಭೇಟಿಯಾಗಿ, ಅವರ ಮೂಲಕ ರಾಷ್ಟ್ರಪತಿಗೆ ಪತ್ರ ರವಾನಿಸಲಾಗಿತ್ತು. ಜಿಲ್ಲಾ ಮಟ್ಟದಿಂದಲೂ ಒತ್ತಾಯ ಮಾಡಿದ್ದೆವು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.