ADVERTISEMENT

ಹುಬ್ಬಳ್ಳಿ ಮಹಿಳೆ ವಿವಸ್ತ್ರ: ಅವರ ವಿರುದ್ಧ 47 ಪ್ರಕರಣಗಳಿವೆ ಎಂದ ಲಕ್ಷ್ಮಣ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 10:20 IST
Last Updated 8 ಜನವರಿ 2026, 10:20 IST
<div class="paragraphs"><p>ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ</p></div>

ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ

   

ಮೈಸೂರು: ‘ಹುಬ್ಬಳ್ಳಿಯಲ್ಲಿ ಸುಜಾತಾ ಹಂಡಿ ಎಂಬಾಕೆಯನ್ನು ವಿವಸ್ತ್ರಗೊಳಿಸಲಾಗಿದೆ ಎಂಬುದು ಶುದ್ಧ ಸುಳ್ಳು. ಪೊಲೀಸರು ವಶಕ್ಕೆ ಪಡೆಯುವ ವೇಳೆ ದೊಡ್ಡ ನಾಟಕವನ್ನು ಆ ಮಹಿಳೆ ಮಾಡಿದ್ದಾರೆ. ಆಕೆಯ ವಿರುದ್ಧ ವಿವಿಧ 9 ಠಾಣೆಗಳಲ್ಲಿ ಪ್ರಮುಖ ಸೆಕ್ಷನ್‌ಗಳಡಿ 47 ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿವೆ’ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಕೆಯ ಹಿನ್ನೆಲೆ ಏನು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ರೌಡಿಶೀಟರ್, ಕೊಲೆ ಯತ್ನ, ನಿಂದನೆ, ಜೀವಬೆದರಿಕೆ, ಅಪಹರಣ‌, ವಂಚನೆ ಮೊದಲಾದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇದೆಲ್ಲವನ್ನೂ ಗಮನಿಸಿದರೆ ಆಕೆಗೆ ಪ್ರಚೋದನೆ ನೀಡುತ್ತಿರುವವರು ಯಾರು ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು’ ಎಂದರು.

ADVERTISEMENT

‘ಆಕೆಯ ಪರವಾಗಿ ಬಿಜೆಪಿಯವರು ಪ್ರತಿಭಟಿಸಿರುವುದು ನಾಚಿಕೆಗೇಡಿನ ಸಂಗತಿ’ ಎಂದರು.

ಎಷ್ಟರ ಮಟ್ಟಿಗೆ ನಡೆಯುತ್ತಿರಬಹುದು?:

‘ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಮುನ್ನ ನಡೆಸುವ ಕುಟುಂಬ ಸದಸ್ಯರ ಮ್ಯಾಪಿಂಗ್‌ ವೇಳೆ ಬಿಜೆಪಿ ಕಾರ್ಯಕರ್ತರೂ ಹೋಗಿದ್ದರು. ಅವರಲ್ಲಿ ಸುಜಾತಾ ಕೂಡ ಮನೆಗಳಿಗೆ ಹೋಗಿ ಹೆಸರು ತೆಗೆಸುವ ಕೆಲಸ ಮಾಡುತ್ತಿದ್ದರು. ಇದೆಲ್ಲವನ್ನೂ ಗಮನಿಸಿದರೆ ಚುನಾವಣಾ ಆಯೋಗದ ಮೂಲಕ ಮತಕಳವು ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಕಾಂಗ್ರೆಸ್‌ ಅಡಳಿತದಲ್ಲಿರುವ ಕರ್ನಾಟಕದಲ್ಲಿಯೇ ಈ ಕಥೆಯಾದರೆ, ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಮತಕಳವು ಯಾವ ಪ್ರಮಾಣದಲ್ಲಿ ಇರಬಹುದು ಎಂಬುದನ್ನು ಅರಿಯಬಹುದು’ ಎಂದು ಆರೋಪಿಸಿದರು.

‘ಸುಜಾತಾ ಸ್ವತಃ ಬಟ್ಟೆ ತೆಗೆದು ಹಾಕಿ, ತಮ್ಮನಿಂದ ವಿಡಿಯೊ ಮಾಡಿಸಿದ್ದಾಳೆ. ಇದೆಲ್ಲದಕ್ಕೂ ವಿಡಿಯೊ ದಾಖಲೆ ಇದೆ. ಬಿಜೆಪಿ ಕ್ರಿಮಿನಲ್ ಪಕ್ಷ. ಅಂತಹ ಕೃತ್ಯಗಳ ಮೂಲಕವೇ ಆ ಪಕ್ಷ ರಾಜಕಾರಣ ಮಾಡುತ್ತಿದೆ’ ಎಂದು ಆರೋಪಿಸಿದರು.

‘ಬಳ್ಳಾರಿ ಗಲಾಟೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕುಮ್ಮಕ್ಕು ನೀಡಿರುವುದೇ ಕಾರಣ. ಹೆಣ ಬಿದ್ದರೆ ಮೇಲೆ‌ ಬರಬಹುದು ಎಂಬ ಅವರ ಸೂಚನೆಯನ್ನು ಸಚಿವ ವಿ.ಸೋಮಣ್ಣ ಅವರು ಬಳ್ಳಾರಿಗೆ ಹೋಗಿ ಮುಖಂಡರಿಗೆ ಮುಟ್ಟಿಸಿದ್ದರು’ ಎಂದು ಆರೋಪಿಸಿದ ಅವರು, ‘ಸೋಮಣ್ಣ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸತ್ಯವೆಲ್ಲವೂ ಹೊರಬೀಳುತ್ತದೆ’ ಎಂದರು.

‘ಬಳ್ಳಾರಿ ಘಟನೆಯಲ್ಲಿ ರಾಜ್ಯ ಸರ್ಕಾರ ಕಾನೂನು ಪ್ರಕಾರ ನಡೆದುಕೊಳ್ಳುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ’ ಎಂದು ತಿಳಿಸಿದರು.

ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು:

‘ರಾಜ್ಯದಲ್ಲಿ ರೈತರ ಆತ್ಮಹತ್ಯೆ, ಅಪರಾಧ ಪ್ರಕರಣಗಳು ಹೆಚ್ಚಾಗಿವೆ ಎಂಬ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆ ಖಂಡನೀಯ. ಅವರು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಅವರು ಅಧಿಕಾರದಲ್ಲಿದ್ದಾಗ ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬುದನ್ನು ನೋಡಲಿ. ನಮ್ಮ ಸರ್ಕಾರ ಆತ್ಮಹತ್ಯೆ ತಪ್ಪಿಸಲು ಕ್ರಮ ಕೈಗೊಳ್ಳುತ್ತಿದೆ, ಅಪರಾಧ ಚಟುವಟಿಕೆಗಳ ಪ್ರಮಾಣವನ್ನು ತಗ್ಗಿಸುತ್ತಿದೆ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹಗುರುವಾಗಿ ಮಾತನಾಡಿರುವ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು, ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಈವರೆಗೆ ಎಷ್ಟು ಅನುದಾನ ತಂದಿದ್ದೇನೆ ಎಂಬುದರ ಶ್ವೇತಪತ್ರ ಹೊರಡಿಸಲಿ’ ಎಂದು ಸವಾಲು ಹಾಕಿದರು.

ಸಂಸದರ ವಿರುದ್ಧ ಆಕ್ರೋಶ:

‘ಮೈಸೂರು ನಗರದಲ್ಲಿ ಯೂನಿಟಿ ಮಾಲ್‌ ನಿರ್ಮಾಣವಾಗದಂತೆ ಕಲ್ಲು ಹಾಕಿದ್ದೀರಿ, ಚಾಮುಂಡಿಬೆಟ್ಟದಲ್ಲಿ ಪ್ರಸಾದ್ ಯೋಜನೆ ಅನುಷ್ಠಾನಕ್ಕೆ ಬಿಡುತ್ತಿಲ್ಲ. ಹೀಗಿರುವಾಗ ಮುಖ್ಯಮಂತ್ರಿ ವಿರುದ್ಧ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಅಲ್ಪಸ್ವಲ್ಪವನ್ನಾದರೂ ತಿಳಿದುಕೊಂಡು ಮಾತನಾಡಬೇಕು. ಮುಖ್ಯವಾಗಿ ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡಲು ಯೋಗ್ಯತೆ ಬೇಕು’ ಎಂದು ಹೇಳಿದರು.

‘ಸಿದ್ದರಾಮಯ್ಯ ಅವರು ಎರಡೂವರೆ ವರ್ಷಗಳಲ್ಲಿ ಮೈಸೂರು ನಗರವೊಂದಕ್ಕೇ ₹ 3,098 ಕೋಟಿ ಮೊತ್ತದ ಯೋಜನೆಗಳನ್ನು ನೀಡಿದ್ದಾರೆ’ ಎಂದು ಸಮರ್ಥಿಸಿಕೊಂಡರು.

ಕಾಂಗ್ರೆಸ್‌ ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಪದಾಧಿಕಾರಿಗಳಾದ ಹೇಮಂತ್, ಗಿರೀಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.