ADVERTISEMENT

ವಂಚಕರ ಆಸ್ತಿ ಮುಟ್ಟುಗೋಲಿಗೆ ಕಾಯ್ದೆ: ಸಚಿವ ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 19:45 IST
Last Updated 17 ಜೂನ್ 2019, 19:45 IST
ದೇಶಪಾಂಡೆ
ದೇಶಪಾಂಡೆ   

ಬೆಂಗಳೂರು: ಐಎಂಎ ವಂಚನೆ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು‘ಕರ್ನಾಟಕ ಪ್ರೊಟೆಕ್ಷನ್‌ ಆಫ್‌ ಇಂಟರೆಸ್ಟ್‌ ಆಫ್‌ ಡೆಪಾಸಿಟ್‌ ಫೈನಾನ್ಶಿಯಲ್‌’ (ಕೆಪಿಐಡಿ) ಕಾಯ್ದೆಗೆ ತಿದ್ದುಪಡಿ ತಂದು, ಮುಂದಿನ ಅಧಿವೇಶನದಲ್ಲಿ ಒಪ್ಪಿಗೆ ಪಡೆಯಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಈ ಸಂಬಂಧ ಈಗ ಇರುವ ಕಾಯ್ದೆಯ ಪ್ರತಿಯನ್ನು ಕಾನೂನು ಇಲಾಖೆಗೆ ಕಳುಹಿಸಲಾಗಿದೆ. ಐಎಂಎ ಮಾಲೀಕ ಮನ್ಸೂರ್‌ ಖಾನ್‌ನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕಾದರೆ, ಕಾಯ್ದೆಗೆ ತಿದ್ದುಪಡಿಯ ಅಗತ್ಯವಿದೆ. ಈ ಸಂಬಂಧ ಕಾನೂನು ಇಲಾಖೆ ಅಭಿಪ್ರಾಯ ಕೇಳಿರುವುದಾಗಿಯೂ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಸೋಮವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಕೆಪಿಐಡಿ ಕಾಯ್ದೆ ತಿದ್ದುಪಡಿಗಾಗಿ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರು ಈಗಾಗಲೇ ಕಾನೂನು ಇಲಾಖೆಗೆ ಸೂಚನೆ ನೀಡಿದ್ದಾರೆ. ತಾಂತ್ರಿಕ ಸಮಸ್ಯೆಯನ್ನು ಮುಂದಿಟ್ಟುಕೊಂಡು ಕೂರುವ ಬದಲು ಜನರಿಗೆ ಪರಿಹಾರ ಒದಗಿಸುವುದು ಮುಖ್ಯ. ಐಎಂಎ ಪ್ರಕರಣದಲ್ಲಿ ಹೂಡಿಕೆದಾರರನ್ನು ಷೇರುದಾರರನ್ನಾಗಿ ಮಾಡಿಕೊಂಡಿದ್ದರು. ಹೀಗಾಗಿ ಅದು ಕೆಪಿಐಡಿ ವ್ಯಾಪ್ತಿಗೆ ಬರುವುದಿಲ್ಲ ಎಂದು ಪೊಲೀಸರು ವರದಿ ನೀಡಿದ್ದರು ಎಂದು ದೇಶಪಾಂಡೆ ತಿಳಿಸಿದರು.

ADVERTISEMENT

ಈ ರೀತಿ ವಂಚನೆಯ ಪ್ರಕರಣಗಳು ಕೆಪಿಐಡಿ ಕಾಯ್ದೆ ಅಡಿ ದೂರು ದಾಖಲಾದರೆ, ವಂಚಕರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಾಗುತ್ತದೆ. ಕಳೆದ ನಾಲ್ಕೈದು ತಿಂಗಳಲ್ಲಿ 17 ಪ್ರಕರಣಗಳ ಪೈಕಿ 11 ಪ್ರಕರಣಗಳಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.