ADVERTISEMENT

ಕೆಪಿಎಸ್‌ಸಿ: ಹುದ್ದೆ ಬದಲು ಬೇಡವೆಂದ 19 ಅಧಿಕಾರಿಗಳು!

46 ಅಭ್ಯರ್ಥಿಗಳ ಅಂಕ ಹೆಚ್ಚಳ; 65 ಮಂದಿಯ ಅಂಕ ಕುಸಿತ

ರಾಜೇಶ್ ರೈ ಚಟ್ಲ
Published 17 ಏಪ್ರಿಲ್ 2019, 19:43 IST
Last Updated 17 ಏಪ್ರಿಲ್ 2019, 19:43 IST
   

ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಸಿದ್ಧಪಡಿಸಿದ 1998ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಪರಿಷ್ಕೃತ ಆಯ್ಕೆ ಪಟ್ಟಿ ಪ್ರಕಾರ, ಹೆಚ್ಚು ಅಂಕ ಗಳಿಸಿದ ಕಾರಣಕ್ಕೆ ಬೇರೆ ಹುದ್ದೆಗಳಿಗೆ ಸ್ಥಾನ ಪಲ್ಲಟಗೊಳ್ಳಬೇಕಿರುವ 19 ಅಧಿಕಾರಿಗಳು, ಹೊಸ ಹುದ್ದೆಯ ಬದಲು ಹಾಲಿ ಕರ್ತವ್ಯ ನಿರ್ವಹಿಸುವ ಹುದ್ದೆಯಲ್ಲೇ ಮುಂದುವರಿಯುವ ಇಚ್ಚೆ ವ್ಯಕ್ತಪಡಿಸಿದ್ದಾರೆ.

ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದಲ್ಲಿ ಕೆಪಿಎಸ್‌ಸಿ ರಾಜ್ಯಪತ್ರದಲ್ಲಿ ಪ್ರಕಟಿಸಿದ ಪರಿಷ್ಕೃತ ಆಯ್ಕೆ ಪಟ್ಟಿ ಅನ್ವಯ ಹುದ್ದೆ ಬದಲಾಗಲಿರುವ 115 ಅಧಿಕಾರಿಗಳ ಯಾದಿಯನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿದ್ದು, ಅದು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಯಲ್ಲಿಯೇ ಮುಂದುವರಿಯಲು ಬಯಸುತ್ತೀರಾ ಅಥವಾ ಪರಿಷ್ಕೃತ ಆಯ್ಕೆ ಪಟ್ಟಿ ಪ್ರಕಾರ ಹುದ್ದೆ ಬದಲಾವಣೆ ಬಯಸುತ್ತೀರಾ’ ಎಂದು ಸ್ಥಾನ ಪಲ್ಲಟಗೊಳ್ಳುವ ಎಲ್ಲ ಅಧಿಕಾರಿಗಳಿಂದ ಅಭಿಪ್ರಾಯ ಕೇಳಲಾಗಿತ್ತು. ಹಾಲಿ ಹುದ್ದೆಯಲ್ಲೇ ಮುಂದುವರಿಯಲು ಬಯಸುವುದಾಗಿ 19 ಅಧಿಕಾರಿಗಳು ತಿಳಿಸಿರುವುದರಿಂದ ಅವರು ಆಯ್ಕೆಯಾಗಿರುವ ಹೊಸ ಹುದ್ದೆಯನ್ನು ಪರಿಷ್ಕೃತ ಪಟ್ಟಿಯಲ್ಲಿ ತೋರಿಸಿಲ್ಲ’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಮೂಲಗಳು ತಿಳಿಸಿವೆ.

ADVERTISEMENT

ಪರಿಷ್ಕೃತ ಪಟ್ಟಿ ಪ್ರಕಾರ ಒಟ್ಟು 46 ಅಧಿಕಾರಿಗಳು ಈ ಹಿಂದೆ ಗಳಿಸಿದ್ದ ಅಂಕಗಳಿಗಿಂತ ಹೆಚ್ಚು ಅಂಕ ಪಡೆದು ಬೇರೆ ಹುದ್ದೆಗೆ ಅರ್ಹತೆ ಪಡೆದಿದ್ದಾರೆ. ಈ ಪೈಕಿ, 27 ಅಧಿಕಾರಿಗಳು ಪರಿಷ್ಕೃತ ಪಟ್ಟಿಯಲ್ಲಿರುವಂತೆ ತಾವು ಆಯ್ಕೆಯಾದ ಹೊಸ ಹುದ್ದೆಗೆ ಸ್ಥಾನಪಲ್ಲಟಗೊಳ್ಳಲಿದ್ದು, ‌ಅವರಲ್ಲಿ ಆರು ಮಂದಿ ಉಪ ವಿಭಾಗಾಧಿಕಾರಿ (ಎ.ಸಿ), ನಾಲ್ವರು ತಹಶೀಲ್ದಾರ್‌ ಹುದ್ದೆ ಪಡೆಯಲಿದ್ದಾರೆ. ಹೊಸ ಹುದ್ದೆಗಳಿಗೆ ನಿಯೋಜಿಸಿ ಸಕ್ಷಮ ಪ್ರಾಧಿಕಾರದ ಮಂಜೂರಾತಿಗೆ ಕಡತ ಸಲ್ಲಿಸಲಾಗಿದೆ ಎಂದೂ ಮೂಲಗಳು ಹೇಳಿವೆ.

65 ಅಧಿಕಾರಿಗಳು ಹಿಂದೆ ಗಳಿಸಿದ್ದ ಅಂಕಗಳಿಗಿಂತ ಕಡಿಮೆ ಅಂಕ ಪಡೆದಿದ್ದಾರೆ. ಹೊಸ ಹುದ್ದೆಗಳಿಗೆ ಸ್ಥಾನ ಪಲ್ಲಟಗೊಳ್ಳಲಿರುವ ಈ ಅಧಿಕಾರಿಗಳ ಪೈಕಿ ಏಳು ಮಂದಿ ಉಪ ವಿಭಾಗಾಧಿಕಾರಿ ಹುದ್ದೆ ಕಳೆದುಕೊಳ್ಳಲಿದ್ದು (ಆರು ಅಧಿಕಾರಿಗಳು ಕೆಪಿಎಸ್‌ಸಿ ಪ್ರಕಟಿಸಿದ ಪರಿಷ್ಕೃತ ಪಟ್ಟಿಗೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿಯಿಂದ (ಸಿಎಟಿ) ತಡೆಯಾಜ್ಞೆ ತಂದಿದ್ದಾರೆ), ಪರಿಣಾಮ ಅವರು ಬಡ್ತಿ ಪಡೆದ ಐಎಎಸ್‌ ಹುದ್ದೆಗೂ ಕುತ್ತು ಬಂದಿದೆ. ಕಡಿಮೆ ಅಂಕ ಪಡೆದ ಕಾರಣಕ್ಕೆ ಇಬ್ಬರು ಉಪ ವಿಭಾಗಾಧಿಕಾರಿ, ಏಳು ಮಂದಿ ತಹಶೀಲ್ದಾರ್‌ ಹುದ್ದೆಗೆ ಸ್ಥಾನಪಲ್ಲಟಗೊಳ್ಳಲಿದ್ದಾರೆ.

ಆದರೆ, ಪರಿಷ್ಕೃತ ಪಟ್ಟಿ ಪ್ರಕಾರ, ನಾಲ್ವರು ಅಧಿಕಾರಿಗಳ ಅಂಕಗಳಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಆದರೂ ಅವರ ಇಲಾಖೆಗಳು ಬದಲಾಗಲಿವೆ. ಈ ಅಧಿಕಾರಿಗಳನ್ನು ಬೇರೆ ಇಲಾಖೆಗಳಿಗೆ ಸ್ಥಳಾಂತರಗೊಳಿಸಬೇಕಿದೆ. ಈ ಪೈಕಿ, ಮೂವರು ತಹಶೀಲ್ದಾರ್‌ ಹುದ್ದೆ ಪಡೆಯಲಿದ್ದಾರೆ.

ಚುನಾವಣಾ ಕರ್ತವ್ಯದಲ್ಲಿ ಅಧಿಕಾರಿಗಳು: ಸ್ಥಾನಪಲ್ಲಟಗೊಳ್ಳಲಿರುವ 115 ಅಧಿಕಾರಿಗಳ ಪೈಕಿ ಸದ್ಯ 46 ಅಧಿಕಾರಿಗಳನ್ನು ಹಾಲಿ ನಿರ್ವಹಿಸುತ್ತಿರುವ ಹುದ್ದೆಗೆ ಅನುಗುಣವಾಗಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಉಳಿದ, 69 ಅಧಿಕಾರಿಗಳನ್ನೂ ಅವರು ಕರ್ತವ್ಯ ನಿರ್ವಹಿಸುವ ವ್ಯಾಪ್ತಿಯ ಜಿಲ್ಲಾ ಚುನಾವಣಾಧಿಕಾರಿಗಳು ಕರ್ತವ್ಯಕ್ಕೆ ನಿಯೋಜಿಸುವ ಸಾಧ್ಯತೆ ಇದೆ. ವರ್ಗಾವಣೆ ಮತ್ತು ಹೊಸ ಹುದ್ದೆಗೆ ನಿಯೋಜನೆ ಸಂಬಂಧಿಸಿದ ಕಡತಕ್ಕೆ ನೇಮಕಾತಿ ಪ್ರಾಧಿಕಾರಗಳು ಮಂಜೂರಾತಿ ನೀಡಿದ ತಕ್ಷಣ ಅನುಮೋದನೆಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸಲಾಗುವುದು. ಬಳಿಕ ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಡಿಪಿಎಆರ್‌ ಮೂಲಗಳು ತಿಳಿಸಿವೆ.

ಪರಿಷ್ಕೃತ ಪಟ್ಟಿಯಲ್ಲಿ ಹುದ್ದೆ ಕಳೆದುಕೊಂಡು 28 ಅಧಿಕಾರಿಗಳನ್ನು ಕೈಬಿಡುವಂತೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಕ್ಕೆ ಕಡತ ಸಲ್ಲಿಸಲಾಗಿದೆ.

‘ಮತ್ತೆ ಹೋರಾಟ’
‘19 ಅಧಿಕಾರಿಗಳಿಗೆ ಅವರ ಇಚ್ಚೆಯಂತೆ ಹಾಲಿ ಹುದ್ದೆಯಲ್ಲೇ ಸರ್ಕಾರ ಮುಂದುವರಿಸಿದರೆ, ‘ಸೇವಾ ಹಿರಿತನ’ಕ್ಕಾಗಿ ಮತ್ತೊಂದು ನ್ಯಾಯಾಂಗ ಹೋರಾಟ ನಡೆಯುವ ಸಾಧ್ಯತೆ ಇದೆ’ ಎಂದು ಸ್ಥಾನ ಪಲ್ಲಟಗೊಳ್ಳುವ ಪಟ್ಟಿಯಲ್ಲಿರುವಅಧಿಕಾರಿಯೊಬ್ಬರು ಹೇಳಿದರು.

28 ಅಧಿಕಾರಿಗಳ ಕೈಬಿಡಲು ಕಡತ ಸಿದ್ಧ
ಪರಿಷ್ಕೃತ ಪಟ್ಟಿಯಲ್ಲಿ ಹುದ್ದೆ ಕಳೆದುಕೊಂಡು 28 ಅಧಿಕಾರಿಗಳನ್ನು ಕೈಬಿಡುವಂತೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಕ್ಕೆ ಕಡತ ಸಲ್ಲಿಸಲಾಗಿದೆ. ಈ ಕುರಿತು ಸಕ್ಷಮ ಪ್ರಾಧಿಕಾರ ತೀರ್ಮಾನ ಕೈಗೊಂಡ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಿಪಿಎಆರ್‌ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.