ADVERTISEMENT

ಕೆಪಿಎಸ್‌ಸಿ 384 ಗೆಜೆಟೆಡ್‌ ಪ್ರೊಬೇಷನರ್‌ ನೇಮಕಾತಿ ಅಧಿಸೂಚನೆ ರದ್ದು!

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 6:21 IST
Last Updated 5 ಜೂನ್ 2025, 6:21 IST
<div class="paragraphs"><p>ಕೆಪಿಎಸ್‌ಸಿ </p></div>

ಕೆಪಿಎಸ್‌ಸಿ

   

ಬೆಂಗಳೂರು: ಸರ್ಕಾರಿ ನೇಮಕಾತಿಗಳಲ್ಲಿ ಮೀಸಲು ಪ್ರಮಾಣವನ್ನು ಶೇ 50ರಿಂದ ಶೇ 56ಕ್ಕೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶದ ಆಧಾರದಲ್ಲಿ, ಕರ್ನಾಟಕ ಲೋಕಸೇವಾ ಆಯೋಗವು 2024ರ ಫೆಬ್ರುವರಿ 26ರಂದು ಹೊರಡಿಸಿದ್ದ 384 ಗೆಜೆಟೆಡ್‌ ಪ್ರೊಬೇಷನರ್‌ ನೇಮಕ ಅಧಿಸೂಚನೆಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ರದ್ದುಪಡಿಸಿದೆ.

ಅಧಿಸೂಚನೆಯನ್ನು ಪ್ರಶ್ನಿಸಿ 3ಎ ಕೆಟಗರಿಗೆ ಸೇರಿದ ಚನ್ನಪಟ್ಟಣದ ಎಂ.ಟೆಕ್‌ ಪದವೀಧರ ಬಿ.ಎನ್.ಮಧು ಸಲ್ಲಿಸಿದ್ದ ಅರ್ಜಿಯನ್ನು ಕೆಎಟಿ ಅಧ್ಯಕ್ಷ ಆರ್.ಬಿ.ಬೂದಿಹಾಳ್‌ ಮತ್ತು ಆಡಳಿತಾತ್ಮಕ ಸದಸ್ಯ ರಾಘವೇಂದ್ರ ಔರಾದ್‌ಕರ್‌ ಅವರಿದ್ದ ಪೀಠವು ವಿಚಾರಣೆ ನಡೆಸಿ ಕಳೆದ ಮೇ 28ರಂದು ಈ ಕುರಿತಂತೆ ಆದೇಶ ಹೊರಡಿಸಿದೆ.

ADVERTISEMENT

ಕೆಎಎಸ್‌ ಹುದ್ದೆಗಳ ಭರ್ತಿ ಜತೆಗೆ 2022ರ ಡಿಸೆಂಬರ್ 12ರಂದು ಸರ್ಕಾರ ಮೀಸಲು ಹೆಚ್ಚಳಕ್ಕೆ ಹೊರಡಿಸಿದ್ದ ಆದೇಶವನ್ನೂ ರದ್ದುಗೊಳಿಸಿರುವ ಪೀಠವು, 'ಕಾನೂನು ಪ್ರಕಾರ ಹೊಸದಾಗಿ ನೇಮಕಾತಿ ಅಧಿಸೂಚನೆ ಹೊರಡಿಸಲು ಕೆಪಿಎಸ್‌ಸಿ ಸ್ವತಂತ್ರವಿದೆ’ ಎಂದು ಸ್ಪಷ್ಟಪಡಿಸಿದೆ.

‘ಅಂದಿನ ರಾಜ್ಯ ಸರ್ಕಾರ 2022ರ ಅಕ್ಟೋಬರ್ 23ರಂದು ಹೊರಡಿಸಿದ್ದ ಸುಗ್ರಿವಾಜ್ಞೆಯು ಮೀಸಲು ಪ್ರಮಾಣವನ್ನು ಶೇ 50ರಿಂದ ಶೇ 56ಕ್ಕೆ ಹೆಚ್ಚಿಸಿದೆ. ಇದನ್ನು ಆಧರಿಸಿ 2022ರ ಡಿಸೆಂಬರ್ 28ರಂದು ಅಧಿಸೂಚನೆ ಪ್ರಕಟಿಸಿ ರೋಸ್ಟರ್‌ ಅಂಕಗಳನ್ನು ನಿಗದಿಪಡಿಸಲಾಗಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಶಾಸನಸಭೆಯ ಅನುಮತಿ ಪಡೆದಿರಲಿಲ್ಲ ಎಂಬುದು ಗಮನಾರ್ಹ. ಹಾಗಾಗಿ, ಇದರ ಆಧಾರದಡಿ ರಚಿಸಲಾದ 2023ರ ನಿಯಮಾವಳಿ ಊರ್ಜಿತವಲ್ಲ’ ಎಂದು ಪೀಠವು ಅಭಿಪ್ರಾಯಪಟ್ಟಿದೆ.

ಏನಿದು ಪ್ರಕರಣ?

ಬಿಜೆಪಿ ಸರ್ಕಾರದ ಆಡಳಿತಾವಧಿಯ 2022ರಲ್ಲಿ; ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿ ಸೀಟು ಹಂಚಿಕೆ, ಮೀಸಲು ಮತ್ತು ರಾಜ್ಯ ಸೇವೆಯಲ್ಲಿ ನೇಮಕ ಹುದ್ದೆಗಳಿಗೆ ಮೀಸಲು) ಸುಗ್ರೀವಾಜ್ಞೆ ಜಾರಿಗೊಳಿಸಿತ್ತು. ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣವನ್ನು ಶೇ 18ರಿಂದ ಶೇ 24ಕ್ಕೆ ಹೆಚ್ಚಿಸಿ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಇದರ ಆಧಾರದಡಿ ಕರ್ನಾಟಕ ಸರ್ಕಾರಿ ಸೇವೆಯಲ್ಲಿ ರೋಸ್ಟರ್‌ ಮೀಸಲು ನಿಗದಿಪಡಿಸಲಾಗಿತ್ತು. ಇದನ್ನು ಆಧರಿಸಿ ಕೆಪಿಎಸ್‌ಸಿ 384 ಗ್ರೂಪ್‌ ‘ಎ’ ಮತ್ತು ‘ಬಿ’ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿತ್ತು. ಅರ್ಜಿದಾರರು ಇದನ್ನು ಕೆಎಟಿಯಲ್ಲಿ ಪ್ರಶ್ನಿಸಿದ್ದರು.

ವಾದ–ಪ್ರತಿವಾದ ಏನಿತ್ತು?

‘ಸರ್ಕಾರ ರಾಜಕೀಯ ಕಾರಣಕ್ಕಾಗಿ ಮೀಸಲು ಪ್ರಮಾಣವನ್ನು ಶೇ 56ಕ್ಕೆ ಹೆಚ್ಚಳ ಮಾಡಿದೆ. ಇದರಿಂದ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕೇವಲ ಶೇ 44ರಷ್ಟು ಮಾತ್ರವೇ ಅವಕಾಶ ಲಭಿಸುತ್ತದೆ. ಸಂವಿಧಾನಬದ್ಧವಾಗಿ ಅವರಿಗೆ ಸಿಗಬೇಕಾದ ಅವಕಾಶವನ್ನು ಈ ಮೂಲಕ ಕಸಿದುಕೊಳ್ಳಲಾಗಿದೆ. ಇದು ಸುಪ್ರಿಂ ಕೋರ್ಟ್‌ನ  ಸಾಂವಿಧಾನಿಕ ಪೀಠದ ಆದೇಶದ ಸ್ಪಷ್ಟ ಉಲ್ಲಂಘನೆ’ ಎಂದು ಅರ್ಜಿದಾರರ ಪರ ವಕೀಲರು ಪ್ರತಿಪಾದಿಸಿದ್ದರು.

ಸರ್ಕಾರದ ಪರ ವಕೀಲರು, ‘ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಖಚಿತಪಡಿಸಿಕೊಂಡು; ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ ದಾಸ್‌ ಆಯೋಗದ ಶಿಫಾರಸಿನಂತೆ ಮೀಸಲಾತಿ ಪ್ರಮಾಣ ಹೆಚ್ಚಿಸಲಾಗಿದೆ. ಆಯೋಗವು ವೈಜ್ಞಾನಿಕ ವರದಿ ನೀಡಿದ್ದು, ಹಲವಾರು ರಾಜ್ಯಗಳು ಈಗಾಗಲೇ ಜಾರಿಗೊಳಿಸಿದ ಮಾದರಿಯಲ್ಲಿ ಜನಸಂಖ್ಯೆಯನ್ನು ಆಧರಿಸಿ ಮೀಸಲಾತಿ ಪ್ರಮಾಣ ವಿಸ್ತರಿಸಲಾಗಿದೆ. ಆದ್ದರಿಂದ, ರಾಜ್ಯ ಶಾಸನಸಭೆ ರೂಪಿಸಿದ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಈ ಅರ್ಜಿಗೆ ಮಾನ್ಯತೆ ಇಲ್ಲ’ ಎಂಬ ಸಮರ್ಥನೆ ನೀಡಿದ್ದರು.

ಪೀಠದ ಅಭಿಪ್ರಾಯ

''ಶೇ 50ರ ಮಿತಿ ದಾಟುವಂತೆ ಸುಪ್ರಿಂ ಕೋರ್ಟ್‌ ಎಲ್ಲೂ ಹೇಳಿಲ್ಲ. ‌ಕೆಲವು ರಾಜ್ಯಗಳು ಮಾಡಿವೆ ಎಂಬುದನ್ನೇ ಮುಂದಿರಿಸಿಕೊಂಡು ಮಾಡಲಾಗುವ ಮೀಸಲು ಮಿತಿ ಹೆಚ್ಚಳಕ್ಕೆ ಯಾವುದೇ ಶಾಸನಾತ್ಮಕ ಬೆಂಬಲ ಇಲ್ಲ''

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.