ADVERTISEMENT

ಕೆಪಿಎಸ್‌ಸಿ: 428 ಹುದ್ದೆಗಳ ಆಯ್ಕೆಯಲ್ಲೂ ‘ಅಕ್ರಮ’?

‘ವ್ಯಕ್ತಿತ್ವ ಪರೀಕ್ಷೆ’ ಪಟ್ಟಿಯಲ್ಲಿ ಪರೀಕ್ಷಾ ನಿಯಮ ಉಲ್ಲಂಘಿಸಿದ 129 ಅಭ್ಯರ್ಥಿಗಳು!

ರಾಜೇಶ್ ರೈ ಚಟ್ಲ
Published 19 ಜೂನ್ 2019, 20:00 IST
Last Updated 19 ಜೂನ್ 2019, 20:00 IST
   

ಬೆಂಗಳೂರು: ಅಕ್ರಮಗಳನ್ನೇ ಹೊದ್ದು ಮಲಗಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 2015ನೇ ಸಾಲಿನ 428 ಗೆಜೆಟೆಡ್‌ ಪ್ರೊಬೇಷನರಿ (ಕೆಎಎಸ್‌) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲೂ ‘ಅಕ್ರಮ’ಕ್ಕೆ ಅವಕಾಶ ಮಾಡಿಕೊಡುತ್ತಿದೆಯೇ?

ನೇಮಕಾತಿ ಪ್ರಕ್ರಿಯೆಯಲ್ಲಿನ ವಿಳಂಬಕ್ಕೆ ಕಾರಣಗಳನ್ನು ಬೆನ್ನು ಹತ್ತಿದಾಗ ಅಕ್ರಮ ನಡೆಯುತ್ತಿರುವುದಕ್ಕೆ ಪುಷ್ಟಿ ನೀಡುವ ಸಂಗತಿಗಳು ಪತ್ತೆಯಾಗಿವೆ. ಈ ಹಿಂದಿನ ಸಾಲುಗಳಲ್ಲಿ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟಗೊಂಡ ಬಳಿಕ ಭ್ರಷ್ಟಾಚಾರ ಬಯಲಿಗೆ ಬಂದಿದ್ದರೆ, ಇದೀಗ ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆಗೆ (ಸಂದರ್ಶನ) ಸಿದ್ಧತೆ ನಡೆಯುತ್ತಿರುವ ಹಂತದಲ್ಲೇ ಪ್ರಕ್ರಿಯೆ ದಾರಿತಪ್ಪಿರುವ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

ಮುಖ್ಯ ಪರೀಕ್ಷೆಯಿಂದ ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆಯಾಗಿರುವ 129 ಅಭ್ಯರ್ಥಿಗಳು ಉತ್ತರ ಪತ್ರಿಕೆಯಲ್ಲಿ ತಮ್ಮ ‘ಗುರುತು’ ನಮೂದಿಸುವ ಮೂಲಕ ಮೌಲ್ಯಮಾಪಕರ ಅಥವಾ ಮೌಲ್ಯಮಾಪನ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆ.

ADVERTISEMENT

ಪ್ರಶ್ನೆ ಮತ್ತು ಉತ್ತರ ಪತ್ರಿಕೆಯಲ್ಲಿ (ಓಎಂಆರ್‌ ರಕ್ಷಾ ಪುಟದಲ್ಲಿ ಹೊರತುಪಡಿಸಿ) ಎಲ್ಲಿಯೂ ಯಾವುದೇ ಗುರುತಿನ ಚಿಹ್ನೆ ಹಾಕುವುದು ಅಥವಾ ಏನನ್ನಾದರೂ ಬರೆಯುವುದು ಪರೀಕ್ಷಾ ನಿರ್ದೇಶನಗಳನ್ನು ಉಲ್ಲಂಘಿಸಿದಂತೆ. ಅಂಥ ಉತ್ತರ ಪತ್ರಿಕೆಯನ್ನು ಅಸಿಂಧು ಎಂದು ಪರಿಗಣಿಸಲಾಗುವುದು ಎಂದು ಕೆಪಿಎಸ್‌ಸಿ ನಿಯಮದಲ್ಲಿದೆ. ಆದರೆ, ನಿಯಮ ಉಲ್ಲಂಘನೆ ಗೊತ್ತಾದ ಬಳಿಕವೂ ಅಭ್ಯರ್ಥಿಗಳನ್ನು ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆ ಮಾಡಲಾಗಿದೆ.

ಹೀಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವ ಕ್ರಮವನ್ನು ಆಯೋಗದ ಕಾರ್ಯದರ್ಶಿ ಆರ್‌.ಆರ್‌. ಜನ್ನು ಸಮರ್ಥಿಸಿಕೊಂಡಿದ್ದಾರೆ. ತಮ್ಮ ಮತ್ತು ಈ ಹಿಂದಿನ ಪರೀಕ್ಷಾ ನಿಯಂತ್ರಕರಾಗಿದ್ದ ಕೃಷ್ಣ ಬಾಜಪೇಯಿ ಅವರ ತಪ್ಪು ಮುಚ್ಚಿ ಹಾಕಲು, ಈ ಅಭ್ಯರ್ಥಿಗಳನ್ನೊಳಗೊಂಡ ಪಟ್ಟಿಗೆ ಘಟನೋತ್ತರ ಅನುಮೋದನೆ ನೀಡುವಂತೆ ಆಯೋಗದ ಸಭೆಯಲ್ಲಿ ಪಟ್ಟು ಹಿಡಿದಿದ್ದಾರೆ. ಆದರೆ, ಕಾರ್ಯದರ್ಶಿಯ ಈ ನಡೆಗೆ ಆಯೋಗದ ಅಧ್ಯಕ್ಷ ಷಡಕ್ಷರಿ ಸ್ವಾಮಿ ಮತ್ತು ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಈ ಅಭ್ಯರ್ಥಿಗಳನ್ನು ವ್ಯಕ್ತಿತ್ವ ಪರೀಕ್ಷೆಗೆ ಪರಿಗಣಿಸಬಾರದು ಎಂದು ಒತ್ತಾಯಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಪರೀಕ್ಷಾ ನಿಯಮ ಉಲ್ಲಂಘಿಸಿದ ಅಭ್ಯರ್ಥಿಗಳನ್ನು ಆಯ್ಕೆ ಪಟ್ಟಿಯಲ್ಲಿ ಸೇರಿಸಿಕೊಂಡಿರುವ ಕಾರ್ಯದರ್ಶಿ, ಈ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಮತ್ತು ಅಡ್ವೊಕೇಟ್ ಜನರಲ್‌ (ಎ.ಜಿ) ಉದಯ್‌ ಹೊಳ್ಳ ಅವರಿಗೆ ಪತ್ರ ಬರೆದು ಅಭಿಪ್ರಾಯ ಕೇಳಿದ್ದಾರೆ. ‘ಕಣ್ಣುತಪ್ಪಿನಿಂದ ಈ ಪ್ರಮಾದವಾಗಿದೆ’ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ಗೊತ್ತಾಗಿದೆ.

ಮೇ 7ರಂದೇ ಈ ಪತ್ರ ಬರೆದಿದ್ದರೂ ಕಾರ್ಯದರ್ಶಿ ಈ ವಿಷಯವನ್ನು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಗಮನಕ್ಕೆ ತಂದಿಲ್ಲ. ಮೇ 30ರಂದು ನಡೆದ ಆಯೋಗದ ಸಭೆಯ ನಡಾವಳಿಯಲ್ಲಿ ಪತ್ರ ಬರೆದಿದ್ದ ವಿಷಯ ಪ್ರಸ್ತಾಪವಾಗಿತ್ತು. ಇದನ್ನು ಕಂಡು ಕೆಂಡಾಮಂಡಲವಾದ ಅಧ್ಯಕ್ಷರು ಮತ್ತು ಸದಸ್ಯರು, ‘ಯಾರ ಬಳಿ ಕೇಳಿ ಈ ಪತ್ರ ಬರೆದಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ‘ಈ 129 ಅಭ್ಯರ್ಥಿಗಳನ್ನು ಯಾವುದೇ ಕಾರಣಕ್ಕೂ ಆಯ್ಕೆಗೆ ಪರಿಗಣಿಸಬಾರದು’ ಎಂದು ಆಯೋಗದ ಎಲ್ಲ ಸದಸ್ಯರ ಸಹಿ ಸಮೇತ ಅಧ್ಯಕ್ಷರು, ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಈ ಗೊಂದಲಕ್ಕೆ ಅಂತ್ಯ ಹಾಡುವ ಸಂಬಂಧ ಕೆಪಿಎಸ್‌ಸಿ ಹಲವು ಸುತ್ತಿನ ಸಭೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬುಧವಾರ (ಜೂನ್‌ 19) ನಡೆದ ಸಭೆಯಲ್ಲೂ ಈ ವಿಷಯ ಪ್ರಸ್ತಾವವಾಗಿದ್ದು, ‘ಅಡ್ವೊಕೇಟ್ ಜನರಲ್‌ ಇನ್ನೂ ಯಾವುದೇ ಅಭಿಪ್ರಾಯ ನೀಡಿಲ್ಲ’ ಎಂದು ಕಾರ್ಯದರ್ಶಿ ತಿಳಿಸಿದ್ದಾರೆ ಎಂದು ಮೂಲಗಳು ವಿವರಿಸಿವೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕೆಪಿಎಸ್‌ಸಿ ಕಾರ್ಯದರ್ಶಿಗೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.

‘1998, 1999, 2004ನೇ ಸಾಲಿನ ಒಟ್ಟು 753 ಹಾಗೂ 2011ನೇ ಸಾಲಿನ 362 ಗೆಜೆಟೆಡ್‌ ಪ್ರೋಬೇಷನರಿ (ಗ್ರೂಪ್‌ ‘ಎ’ ಮತ್ತು ಗ್ರೂಪ್‌ ‘ಬಿ’ ) ಅಧಿಕಾರಿಗಳ ನೇಮಕಾತಿಯಲ್ಲಿ ನಡೆದ ವ್ಯಾಪಕ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಹೈಕೋರ್ಟ್‌ ನೀಡಿದ ತೀರ್ಪುಗಳು, ಕೆಪಿಎಸ್‌ಸಿ ಮೇಲಿನ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವ ಹಂತಕ್ಕೆ ಕೊಂಡೊಯ್ದಿದಿತ್ತು. ಇದೀಗ ಈ ಬೆಳವಣಿಗೆ ಕೆಪಿಎಸ್‌ಸಿ ಮೇಲಿನ ನಂಬಿಕೆಯೇ ಇಲ್ಲದಂತೆ ಮಾಡಿದೆ’ ಎಂದು ಕೆಲವು ಅಭ್ಯರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಭ್ಯರ್ಥಿಯೊಬ್ಬರಿಗೆ ಕೆಪಿಎಸ್‌ಸಿ ನೀಡಿದ ‘ಕಾರಣ ಕೇಳುವ ನೋಟಿಸ್‌’

ಉತ್ತರ ಪತ್ರಿಕೆಯಲ್ಲಿ ‘ಓಂ ನಮಃ ಶಿವಾಯ’, ‘ನಕ್ಷತ್ರ’!
129 ಅಭ್ಯರ್ಥಿಗಳ ಪೈಕಿ 121 ಮಂದಿ ತಮ್ಮ ಮುಖ್ಯ ಪರೀಕ್ಷೆಯ ಕಡ್ಡಾಯ ಕನ್ನಡ ಉತ್ತರ ಪತ್ರಿಕೆಯಲ್ಲಿ ವಿವಿಧ ಕಡೆ ‘ಓಂ ನಮಃ ಶಿವಾಯ’, ‘ನಕ್ಷತ್ರ’, ‘ಸಹಿ’ ಹೀಗೆ ಭಿನ್ನ ಭಿನ್ನ ಗುರುತುಗಳನ್ನು ನಮೂದಿಸಿದ್ದಾರೆ. ಅಭ್ಯರ್ಥಿಯೊಬ್ಬರು ತನ್ನ ಪ್ರತಿ ಉತ್ತರದ ಕೊನೆಯಲ್ಲಿ ತಮ್ಮ ಹೆಸರು ಬರೆದಿದ್ದಾರೆ. ಕೆಲವರು ತಮ್ಮ ‘ಇಷ್ಟ’ ದೇವರ ಹೆಸರನ್ನೂ ಬರೆದಿದ್ದಾರೆ. ಒಂದಿಬ್ಬರು ಹಿಂದಿ ಕವಿತೆ, ಚಿತ್ರಗೀತೆ, ಬರೆದಿದ್ದಾರೆ. ಒಬ್ಬ ಅಭ್ಯರ್ಥಿ ಉತ್ತರ ಪತ್ರಿಕೆಯನ್ನೇ ಹರಿದಿದ್ದಾರೆ!

ಉಳಿದ ಎಂಟು ಅಭ್ಯರ್ಥಿಗಳು ಉತ್ತರ ಪತ್ರಿಕೆಯಲ್ಲಿ ‘ಪತ್ರ ಲೇಖನ’ ಬರೆಯುವ ವೇಳೆ ತಮ್ಮದೇ ಹೆಸರು ಮತ್ತು ವಿಳಾಸ ನಮೂದಿಸಿದ್ದಾರೆ. ಈ ಅಭ್ಯರ್ಥಿಗಳಿಗೆ ಕೆಪಿಎಸ್‌ಸಿ ‘ಕಾರಣ ಕೇಳಿ ನೋಟಿಸ್‌’ ನೀಡಿದ್ದು, ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

**

129 ಅಭ್ಯರ್ಥಿಗಳ ವಿಷಯವನ್ನು ಕೆಪಿಎಸ್‌ಸಿ ಕಾರ್ಯದರ್ಶಿ ನನ್ನ ಗಮನಕ್ಕೆ ತಂದಿದ್ದಾರೆ. ಅಡ್ವೊಕೇಟ್‌ ಜನರಲ್‌ ಅವರಿಗೆ ಅಭಿಪ್ರಾಯ ಕೇಳಿ ಪತ್ರ ಬರೆದಿರುವುದಾಗಿಯೂ ತಿಳಿಸಿದ್ದಾರೆ.
-ಟಿ.ಎಂ. ವಿಜಯಭಾಸ್ಕರ್‌, ಮುಖ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.