
ಬೆಂಗಳೂರು: ಒಳ ಮೀಸಲಾತಿ ಅನ್ವಯಿಸದೇ ನೇಮಕಾತಿ ಪ್ರಕ್ರಿಯೆ ನಡೆಸಿಯೇ ತೀರುವ ಹಟಕ್ಕೆ ಬಿದ್ದ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅವರಿಗೆ ಸಭಾ ಕೊಠಡಿಯಲ್ಲೇ ದಿಗ್ಬಂಧನ ಹಾಕಿದ ಪ್ರಸಂಗ ನಡೆದಿದೆ.
ಹಿಂದೆ ಹೊರಡಿಸಿದ್ದ ನೇಮಕಾತಿ ಅಧಿಸೂಚನೆಗಳನ್ನು ರದ್ದುಪಡಿಸಿ, ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಿ ಮರು ಅಧಿಸೂಚನೆ ಹೊರಡಿಸಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅದರ ಅನ್ವಯ ಮೋಟಾರು ವಾಹನ ನಿರೀಕ್ಷಕ ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹುದ್ದೆಗಳ ನೇಮಕಾತಿ ಅಧಿಸೂಚನೆಗಳು ತಿದ್ದುಪಡಿಯಾಗಿದ್ದವು.
ಎರಡೂ ಹುದ್ದೆಗಳಿಗೆ ಹೊರಡಿಸಿದ್ದ ನೇಮಕಾತಿ ಅಧಿಸೂಚನೆಗಳಿಗೆ ತಿದ್ದುಪಡಿ ಆಗಿರುವುದನ್ನು ಮರೆಮಾಚಿ, ಈ ನೇಮಕಾತಿ ಪ್ರಕ್ರಿಯೆಯನ್ನು ‘ವಿಶೇಷ ಪ್ರಕರಣ’ವೆಂದು ಮುಂದುವರಿಸಲು ಅಧ್ಯಕ್ಷ ಮತ್ತು ಕಾರ್ಯದರ್ಶಿ ಆರ್. ವಿಶಾಲ್ ಅವರು ಸರ್ಕಾರದಿಂದ ಅನುಮತಿ ಪಡೆದಿದ್ದಾರೆಂದು ಆಯೋಗದ ಸದಸ್ಯರು ಕೆರಳಿ ಕೆಂಡವಾಗಿದ್ದರು ಎಂದು ಗೊತ್ತಾಗಿದೆ.
ಈ ವಿಷಯ ಅ. 28ರಂದು ನಡೆದ ಆಯೋಗದ ಸಭೆಯಲ್ಲಿ ಚರ್ಚೆಗೆ ಬಂದು ಗದ್ದಲ ಉಂಟಾಗುತ್ತಿದ್ದಂತೆ, ಸಭೆಯನ್ನು ಅರ್ಧದಲ್ಲಿಯೇ ಮೊಟಕುಗೊಳಿಸಲು ಅಧ್ಯಕ್ಷರು ಮುಂದಾದರು. ಆಗ, ಸಾಹುಕಾರ ಅವರನ್ನು ಸಭಾ ಕೊಠಡಿಯಲ್ಲಿಯೇ ಕೂಡಿಹಾಕಿದ ಘಟನೆಯೂ ನಡೆದಿದೆ ಎಂದು ಮೂಲಗಳು ತಿಳಿಸಿವೆ.
‘ಸಚಿವ ಸಂಪುಟ ಸಭೆಯ ನಿರ್ಣಯಕ್ಕೆ ಪೂರಕವಾಗಿ ಆಯೋಗದ ಸಭೆಯಲ್ಲಿಯೂ ನಿರ್ಣಯ ತೆಗೆದುಕೊಳ್ಳಲಾಗಿದೆ. ಬಳಿಕ, ನಿರ್ಣಯವನ್ನು ತಿದ್ದುಪಡಿ ಮಾಡಿ, ಈ ಎರಡೂ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಅನುಮತಿ ಪಡೆಯಲಾಗಿದೆ. ಅಧ್ಯಕ್ಷ ಮತ್ತು ಕಾರ್ಯದರ್ಶಿಯ ಈ ವರ್ತನೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ತಪ್ಪು ಮಾಹಿತಿ ನೀಡಿರುವುದನ್ನು ಒಪ್ಪಿಕೊಂಡು, ಸರ್ಕಾರಕ್ಕೆ ಬರೆದಿರುವ ಪತ್ರವನ್ನು ವಾಪಸ್ ಪಡೆಯಲೇಬೇಕು. ಅಲ್ಲದೆ, ಈ ಎರಡೂ ಹುದ್ದೆಗಳಿಗೆ ಮರು ಅಧಿಸೂಚನೆ ಹೊರಡಿಸಬೇಕು ಎಂದು ಸದಸ್ಯರು ಪಟ್ಟು ಹಿಡಿದಿದ್ದಾರೆ’ ಎಂದೂ ಮೂಲಗಳು ಹೇಳಿವೆ.
ಏನಿದು ವಿವಾದ: 2024ರ ಅ. 28ಕ್ಕೂ ಮೊದಲು ನೇಮಕಾತಿಗೆ ಅಧಿಸೂಚನೆ ಹೊರಡಿಸಿ, ಆ ಅಧಿಸೂಚನೆಯಲ್ಲಿ ಅ. 28ರ ನಂತರ ಯಾವುದಾದರೂ ತಿದ್ದುಪಡಿ ಆಗಿದ್ದರೆ, ಅಂತಹ ಎಲ್ಲ ಅಧಿಸೂಚನೆಗಳನ್ನೂ ರದ್ದಪಡಿಸಬೇಕು. ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಅಳವಡಿಸಿಕೊಂಡು ಮರು ಅಧಿಸೂಚನೆ ಹೊರಡಿಸಿ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು 2025ರ ಸೆ. 4ರಂದು ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶದಂತೆ, ತಿದ್ದುಪಡಿಯಾದ ಎಲ್ಲ ಅಧಿಸೂಚನೆಗಳನ್ನು ರದ್ದುಪಡಿಸಿ ಮರು ಅಧಿಸೂಚನೆ ಹೊರಡಿಸಲು ಕೆಪಿಎಸ್‌ಸಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು.
ಸಾರಿಗೆ ಇಲಾಖೆಯಲ್ಲಿನ ಮೋಟಾರು ವಾಹನ ನಿರೀಕ್ಷಕರು ಒಟ್ಟು 76 (ಈ ಪೈಕಿ 6 ಹೈ–ಕ) ಹುದ್ದೆಗಳಿಗೆ ನೇಮಕಾತಿಗೆ ಕೆಪಿಎಸ್‌ಸಿ 2024ರ ಮಾರ್ಚ್ 14ರಂದು ಅಧಿಸೂಚನೆ ಹೊರಡಿಸಿದ್ದರೂ, 2024ರ ಅ. 30ರಂದು ತಿದ್ದುಪಡಿ ಅಧಿಸೂಚನೆ ಹೊರಡಿಸಲಾಗಿದೆ. ಅದೇ ರೀತಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಒಟ್ಟು 42 (ಈ ಪೈಕಿ 12 ಹೈ–ಕ) ಹುದ್ದೆಗಳ ನೇಮಕಾತಿಗೆ 2024ರ ಸೆ. 18ರಂದು ಅಧಿಸೂಚನೆ ಹೊರಡಿಸಿದ್ದರೂ, 2025ರ ಜ. 20ರಂದು ತಿದ್ದುಪಡಿ ಅಧಿಸೂಚನೆ ಹೊರಸಲಾಗಿದೆ. ಸಚಿವ ಸಂಪುಟ ಸಭೆಯ ನಿರ್ಣಯದಂತೆ, ಈ ಎರಡೂ ತಿದ್ದುಪಡಿ ಅಧಿಸೂಚನೆಗಳನ್ನು ರದ್ದುಪಡಿಸಲು ಕೆಪಿಎಸ್‌ಸಿ ನಿರ್ಣಯ ತೆಗೆದುಕೊಂಡಿತ್ತು.
ಅದಕ್ಕೆ ವಿರುದ್ಧವಾಗಿ ಮತ್ತು ಆಯೋಗದ ಸದಸ್ಯರ ಗಮನಕ್ಕೆ ತಾರದೆ ಅ. 6ರಂದು ಸರ್ಕಾರಕ್ಕೆ ಪತ್ರ ಬರೆದಿದ್ದ ಕೆಪಿಎಸ್‌ಸಿ ಕಾರ್ಯದರ್ಶಿ, ‘ವಿಶೇಷ ಪ್ರಕರಣ’ವೆಂದು ಪರಿಗಣಿಸಿ ಈ ಎರಡೂ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಅನುಮತಿ ಕೋರಿದ್ದರು. ಆಯೋಗದ ಸಭೆಯ ನಿರ್ಣಯವನ್ನು ಅಧ್ಯಕ್ಷರ ನಿರ್ದೇಶನದಂತೆ ತಿದ್ದುಪಡಿ ಎರಡೂ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಈ ಪತ್ರ ಬರೆದಿರುವುದಾಗಿ ಕಾರ್ಯದರ್ಶಿಯು ಸದಸ್ಯರಿಗೆ ಸ್ಪಷ್ಟನೆ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನೂ ಭೇಟಿ ಮಾಡಿ ಈ ಹುದ್ದೆಗಳ ನೇಮಕಾತಿ ಮುಂದುವರಿಸಲು ಅನುಮತಿ ನೀಡುವಂತೆ ಒತ್ತಡ ಹೇರಲಾಗಿತ್ತು ಎಂದು ಆರೋಪಿಸಲಾಗಿದೆ. ಕೆಪಿಎಸ್‌ಸಿ ಕಾರ್ಯದರ್ಶಿಗೆ ಇದೇ ಅ. 9ರಂದು ಪತ್ರ ಬರೆದಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ, ‘ಈ ಎರಡೂ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಮುಖ್ಯಮಂತ್ರಿಯ ಅನುಮೋದನೆ ಅನ್ವಯ ಅನುಮತಿ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.
ಎಂವಿಐ ಮತ್ತು ಎಇಇ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಂದುವರಿಸುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಬಹುತೇಕ ಸದಸ್ಯರು ತೀರ್ಮಾನ ತೆಗೆದುಕೊಂಡಿರುವುದರಿಂದ ನ. 4ರಂದು ನಡೆಯಬೇಕಿದ್ದ ಆಯೋಗದ ಸಭೆಯೇ ನಡೆದಿಲ್ಲ ಎಂದೂ ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.
‘ಒಳ ಮೀಸಲು ವಂಚಿಸಲು ಅವಕಾಶ ಕೊಡಲ್ಲ’
‘ಎಂವಿಐ ಮತ್ತು ಎಇಇ ಹುದ್ದೆಗಳ ನೇಮಕಾತಿಯ ಅಧಿಸೂಚನೆ ತಿದ್ದುಪಡಿ ಆಗಿರುವುದನ್ನು ಮರೆಮಾಚಲಾಗಿದೆ. ಅಲ್ಲದೆ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಈ ಹುದ್ದೆಗಳಿಗೆ ನೇಮಕಾತಿ ಮುಂದುವರೆಸಲು ಕೆಪಿಎಸ್‌ಸಿ ಅಧ್ಯಕ್ಷ ಮತ್ತು ಕಾರ್ಯದರ್ಶಿ ಅನುಮತಿ ಪಡೆದಿದ್ದಾರೆ. ಸಂಪುಟ ಸಭೆಯ ತೀರ್ಮಾನವನ್ನು ಉಲ್ಲಂಘಿಸಿ ಮತ್ತು ಸಮರ್ಪಕ ಮಾಹಿತಿ ನೀಡದೆ ಮುಖ್ಯಮಂತ್ರಿಯಿಂದ ಅನುಮೋದನೆ ಪಡೆಯಲಾಗಿದೆ. ಒಳ ಮೀಸಲಾತಿಯಿಂದ ಪರಿಶಿಷ್ಟ ಜಾತಿಯ ಕೆಲವು ವರ್ಗದ ಅಭ್ಯರ್ಥಿಗಳಿಗೆ ಸಿಗಬೇಕಾದ ಅವಕಾಶವನ್ನು ವಂಚಿಸುವ ಮೂಲಕ ಮೀಸಲಾತಿ ವಿರೋಧಿ ಧೋರಣೆಯನ್ನು ಈ ಇಬ್ಬರೂ ಅನುಸರಿಸುತ್ತಿದ್ದಾರೆ. ಈ ನಡೆಗೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ’ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.
ಎಂವಿಐ ಎಇಇ ಆಯಕಟ್ಟಿನ ಹುದ್ದೆ
ಎಂವಿಐ ಮತ್ತು ಎಇಇ ಆಯಕಟ್ಟಿನ ಹುದ್ದೆಗಳಾಗಿದ್ದು ಹೇಗಾದರೂ ಮಾಡಿ ಈ ಹುದ್ದೆಗಳನ್ನು ಗಿಟ್ಟಿಸಿಕೊಳ್ಳಬೇಕೆಂದು ಅಭ್ಯರ್ಥಿಗಳು ಪೈಪೋಟಿಗೆ ಬಿದ್ದಿದ್ದಾರೆ. ಕೆಲವು ಹುದ್ದೆಗಳು ಈಗಾಗಲೇ ‘ಮಾರಾಟ’ ಆಗಿವೆ ಎಂದೂ ಅಭ್ಯರ್ಥಿಗಳು ಆರೋಪಿಸಿದ್ದಾರೆ. ಈ ಕಾರಣಕ್ಕೆ ‘ವಿಶೇಷ ಪ್ರಕರಣ’ವೆಂದು ಪರಿಗಣಿಸಿ ಈ ಹಿಂದೆ ಹೊರಡಿಸಿದ್ದ ಅಧಿಸೂಚನೆ ಅನ್ವಯವೇ ನೇಮಕಾತಿ ಮುಂದುವರಿಸಲು ಯತ್ನ ನಡೆಸಲಾಗಿದೆ ಎಂಬ ಆರೋಪ ಕೆಪಿಎಸ್‌ಸಿ ಅಂಗಳದಲ್ಲಿಯೇ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.