ADVERTISEMENT

ಕೆಪಿಎಸ್‌ಸಿ ಕಾನೂನು ಕೋಶದ ಮುಖ್ಯಸ್ಥ ವಸ್ತ್ರದಮಠ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2024, 14:36 IST
Last Updated 7 ಆಗಸ್ಟ್ 2024, 14:36 IST
ಕೆಪಿಎಸ್‌ಸಿ
ಕೆಪಿಎಸ್‌ಸಿ    

ಬೆಂಗಳೂರು: ಕೆಪಿಎಸ್‌ಸಿ ಕಾನೂನು ಕೋಶದ ಮುಖ್ಯಸ್ಥ (ಎಚ್‌ಎಲ್‌ಸಿ) ಹುದ್ದೆಗೆ ನಿವೃತ್ತ ನ್ಯಾ‌ಯಾಧೀಶ ಎಸ್‌.ಬಿ. ವಸ್ತ್ರದಮಠ ಅವರು ರಾಜೀನಾಮೆ ನೀಡಿದ್ದಾರೆ.

ಎಚ್‌ಎಲ್‌ಸಿ ನೇಮಕ ವಿಚಾರದಲ್ಲಿ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಮತ್ತು ಕೆಲವು ಸದಸ್ಯರು ಮತ್ತು ನಿಕಟಪೂರ್ವ ಕಾರ್ಯದರ್ಶಿ ಕೆ.ಎಸ್‌. ಲತಾಕುಮಾರಿ ನಡುವೆ ತೀವ್ರ ಸಂಘರ್ಷ ನಡೆದಿತ್ತು. ಎಚ್‌ಎಲ್‌ಸಿ ನೇಮಕ ವಿಚಾರದಲ್ಲಿ ನಿಯಮ ಪಾಲನೆ ಆಗಿಲ್ಲವೆಂದು ಆಕ್ಷೇಪ ಎತ್ತಿದ್ದ ಲತಾಕುಮಾರಿ ಅವರನ್ನು ಕೆಪಿಎಸ್‌ಸಿಯಿಂದ ವರ್ಗಾವಣೆ ಮಾಡಲಾಗಿತ್ತು.

ಫೆ. 19 ರಂದು ಎಚ್‌ಎಲ್‌ಸಿ ಆಗಿ ಅಧಿಕಾರ ವಹಿಸಿಕೊಂಡಿದ್ದ ವಸ್ತ್ರದಮಠ ಅವರು ಆರು ತಿಂಗಳು ತುಂಬುವ ಮೊದಲೇ ರಾಜೀನಾಮೆ ನೀಡಿದ್ದಾರೆ. ಮಂಗಳವಾರ (ಆಗಸ್ಟ್‌ 6) ಕೆಪಿಎಸ್‌ಸಿ ಅಧ್ಯಕ್ಷರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿರುವ ಅವರು, ‘ಕೆಲವು ಸನ್ನಿವೇಶಗಳ ಕಾರಣಗಳಿಗೆ ನಾನು ಎಚ್‌ಎಲ್‌ಸಿ ಹುದ್ದೆಯಲ್ಲಿ ಮುಂದುವರಿಯುವ ಸ್ಥಿತಿಯಲ್ಲಿ ಇಲ್ಲ’ ಎಂದು ತಿಳಿಸಿದ್ದಾರೆ.

ADVERTISEMENT

ಎಚ್‌ಎಲ್‌ಸಿ ನೇಮಕಕ್ಕೆ 2023ರ ನ. 15ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಆಡಳಿತಾತ್ಮಕ ಕಾರಣ ನೀಡಿ ಲತಾಕುಮಾರಿ ಹಿಂಪಡೆದಿದ್ದರು. ಅಲ್ಲದೆ, ಜನವರಿ 9ರಂದು ಹೊಸ ಅಧಿಸೂಚನೆ ಹೊರಡಿಸಿದ್ದರು. ಮೊದಲ ಅಧಿಸೂಚನೆಯಂತೆ ನಡೆದಿದ್ದ ಎಚ್ಎಲ್‌ಸಿ ಆಯ್ಕೆಗೆ ಸಂಬಂಧಿಸಿದ ನಡಾವಳಿಯಲ್ಲಿ ಯಾವುದೇ ಸ್ಪಷ್ಟ ಮಾಹಿತಿ ಇಲ್ಲದೇ ಇರುವುದರಿಂದ, ಅದು ‘ಅಸಂವಿಧಾನಿಕ ಆಯ್ಕೆ’ ಪ್ರಕ್ರಿಯೆ ಎಂದು ಮುಖ್ಯ ಕಾರ್ಯದರ್ಶಿಗೆ ಲತಾಕುಮಾರಿ ಪತ್ರ ಬರೆದಿದ್ದರು.

ಈ ಮಧ್ಯೆ, ನ. 15ರ ಅಧಿಸೂಚನೆಯಂತೆ ಆಯೋಗದ ಆಯ್ಕೆ ಸಮಿತಿ ಶಿಫಾರಸು ಮಾಡಿದ್ದ ಅಭ್ಯರ್ಥಿಯನ್ನೇ ನೇಮಿಸಿ ಆದೇಶ ಹೊರಡಿಸದಿದ್ದರೆ ಯಾವುದೇ ಆಯ್ಕೆ ಪಟ್ಟಿ ಅಥವಾ ಕಡತಕ್ಕೆ ಅನುಮೋದನೆ ನೀಡುವುದಿಲ್ಲವೆಂದು ಆಯೋಗದ ಕೆಲವು ಸದಸ್ಯರು ಪಟ್ಟು ಹಿಡಿದಿದ್ದರು. ಹೀಗಾಗಿ ಸುಮಾರು ಒಂದೂವರೆ ತಿಂಗಳು ಆಯೋಗದ ಸಭೆಯೇ ನಡೆದಿರಲಿಲ್ಲ. ನಂತರದ ಬೆಳವಣಿಗೆಯಲ್ಲಿ, ಲತಾಕುಮಾರಿ ಅವರು ‘ಅಸಂವಿಧಾನಿಕ ಆಯ್ಕೆ’ ಎಂದಿದ್ದ ಪ್ರಕ್ರಿಯೆಗೇ ಅನುಮೋದನೆ ನೀಡಿ ನೇಮಕಕ್ಕೆ ಕೆಪಿಎಸ್‌ಸಿ ಅನುಮೋದನೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.