
ಬೆಂಗಳೂರು: ಮೋಟಾರು ವಾಹನ ನಿರೀಕ್ಷಕ (ಎಂವಿಐ) ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ‘ವಿಶೇಷ ಪ್ರಕರಣ’ವೆಂದು ಪರಿಗಣಿಸಿ ಮುಂದುವರಿಸಲು ಕೆಪಿಎಸ್‌ಸಿಗೆ ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.
ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಕೆಪಿಎಸ್‌ಸಿ ಕಾರ್ಯದರ್ಶಿಗೆ ಗುರುವಾರ ಪತ್ರ ಬರೆದಿದ್ದಾರೆ.
ಲೋಕೋಪಯೋಗಿ ಇಲಾಖೆಯ ಎಇಇ ಒಟ್ಟು 42 (ಈ ಪೈಕಿ 12 ಹೈಕ) ಹುದ್ದೆಗಳ ನೇಮಕಾತಿಗೆ 2024ರ ಸೆ. 18ರಂದು ಹಾಗೂ ಸಾರಿಗೆ ಇಲಾಖೆಯಲ್ಲಿನ ಎಂವಿಐ ಒಟ್ಟು 76 (ಈ ಪೈಕಿ 6 ಹೈಕ) ಹುದ್ದೆಗಳಿಗೆ ನೇಮಕಾತಿಗೆ 2024ರ ಮಾರ್ಚ್ 14ರಂದು ಕೆಪಿಎಸ್ಸಿ ಅಧಿಸೂಚನೆ ಹೊರಡಿಸಿತ್ತು.
ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಅಳವಡಿಸಬೇಕೆಂಬ ಕಾರಣಕ್ಕೆ 2024ರ ಅ. 28ಕ್ಕೂ ಮೊದಲು ನೇಮಕಾತಿಗೆ ಅಧಿಸೂಚನೆ ಹೊರಡಿಸಿ, ಆ ಅಧಿಸೂಚನೆಯಲ್ಲಿ ಅ. 28ರ ನಂತರ ಯಾವುದಾದರೂ ತಿದ್ದುಪಡಿ ಆಗಿದ್ದರೆ, ಅಂತಹ ಎಲ್ಲ ಅಧಿಸೂಚನೆಗಳನ್ನೂ ರದ್ದುಪಡಿಸಬೇಕು. ಒಳ ಮೀಸಲಾತಿ ಅಳವಡಿಸಿ ಮರು ಅಧಿಸೂಚನೆ ಹೊರಡಿಸಿ, ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು 2025ರ ಸೆ. 4ರಂದು ಸರ್ಕಾರ ಆದೇಶ ಹೊರಡಿಸಿತ್ತು.
ಈ ಆದೇಶದ ಅನ್ವಯ ಎರಡೂ ತಿದ್ದುಪಡಿ ಅಧಿಸೂಚನೆಗಳನ್ನು ರದ್ದುಪಡಿಸಲು ಕೆಪಿಎಸ್‌ಸಿ ನಿರ್ಣಯ ತೆಗೆದುಕೊಂಡಿತ್ತು. ಆದರೆ, ಆ ನಿರ್ಣಯವನ್ನು ಮರೆಮಾಚಿ ಈ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಕೆಪಿಎಸ್‌ಸಿ ಅಧ್ಯಕ್ಷ ಮತ್ತು ಕಾರ್ಯದರ್ಶಿ ಸರ್ಕಾರದಿಂದ ಅನುಮತಿ ಪಡೆದಿದ್ದಾರೆಂದು ಆರೋಪಿಸಿ ಆಯೋಗದ ಸಭೆಯಲ್ಲಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.