ADVERTISEMENT

ಸಿ.ಎಂ ಟಿಪ್ಪಣಿಗೂ ತಡೆ!

ಹಿಂಬಡ್ತಿ ಭೀತಿ: ಸಿಎಟಿ ತಡೆಯಾಜ್ಞೆ ತಂದ ಮೂವರು ಐಎಎಸ್ ಅಧಿಕಾರಿಗಳು

ರಾಜೇಶ್ ರೈ ಚಟ್ಲ
Published 27 ನವೆಂಬರ್ 2019, 19:45 IST
Last Updated 27 ನವೆಂಬರ್ 2019, 19:45 IST
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ   

ಬೆಂಗಳೂರು: ಹಿಂಬಡ್ತಿ ಭೀತಿ ಎದುರಿಸುತ್ತಿರುವ 11 ಐಎಎಸ್‌ ಅಧಿಕಾರಿಗಳ ಪೈಕಿ ಮೂವರು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಡಿಪಿಎಆರ್‌) ಕಡತದಲ್ಲಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಟಿಪ್ಪಣಿಗೆ ಕೇಂದ್ರೀಯ ಆಡಳಿತ ನ್ಯಾಯಮಂಡಳಿಯಿಂದ (ಸಿಎಟಿ) ತಡೆಯಾಜ್ಞೆ ತಂದಿರುವುದು ಚರ್ಚೆಗೆ ಗ್ರಾಸವಾಗಿದೆ.

1998ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ 383 ಹುದ್ದೆಗಳ ನೇಮಕಾತಿ ವಿವಾದಕ್ಕೆ ಸಂಬಂಧಿಸಿ ಹೈಕೋರ್ಟ್‌ ನೀಡಿದ್ದ ತೀರ್ಪಿನಂತೆ (ಸುಪ್ರೀಂ ಕೋರ್ಟ್ ಕೂಡಾ ಎತ್ತಿ ಹಿಡಿದಿತ್ತು) ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಆಯ್ಕೆ ಪಟ್ಟಿ ಪರಿಷ್ಕರಿಸಿತ್ತು. ಅದನ್ನು ಜಾರಿಗೊಳಿಸುವಂತೆ ಮುಖ್ಯಕಾರ್ಯದರ್ಶಿಗೆಕಡತದ ಮೂಲಕವೇ ಯಡಿಯೂರಪ್ಪ ಆದೇಶಿಸಿದ್ದರು.

ಮುಖ್ಯಮಂತ್ರಿ ಆದೇಶ ನೀಡಿದ ಬೆನ್ನಲ್ಲೇ, ಐಎಎಸ್‌ ಅಧಿಕಾರಿಗಳ ಪೈಕಿ ಅಕ್ರಂ ಪಾಶಾ, ವಸಂತಕುಮಾರ್‌ ಮತ್ತು ಮೀನಾ ನಾಗರಾಜ್‌ ಅವರು (ನ. 25) ಸಿಎಟಿ ಮೆಟ್ಟಿಲೇರಿದ್ದರು. ಆದರೆ, ಟಿಪ್ಪಣಿಯ ದೃಢೀಕೃತ ಪ್ರತಿಯನ್ನು ಅರ್ಜಿಯ ಜೊತೆ ಈ ಅಧಿಕಾರಿಗಳು ಸಲ್ಲಿಸಿಲ್ಲ.

ADVERTISEMENT

ದೃಢೀಕೃತ ಪ್ರತಿ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಇತರ ಎಂಟು ಐಎಎಸ್‌ ಅಧಿಕಾರಿಗಳ ಅರ್ಜಿಯನ್ನು ಸಿಎಟಿ ಪರಿಗಣಿಸಿಲ್ಲ ಎಂದು ಗೊತ್ತಾಗಿದೆ.

ಕೆಪಿಎಸ್‌ಸಿ ಪರಿಷ್ಕರಿಸಿದ್ದ ನೇಮಕಾತಿ ಪಟ್ಟಿಯ ವಿರುದ್ಧ ಐಎಎಸ್‌ ಅಧಿಕಾರಿಗಳು ಈ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಸಿಎಟಿ, ಆ ಪಟ್ಟಿಗೆ ತಡೆಯಾಜ್ಞೆ ನೀಡಿತ್ತು. ಆದರೆ, ಈ ತಡೆಯಾಜ್ಞೆಯನ್ನು ಪ್ರಶ್ನಿಸಿ ಕೆಲವು ಅಧಿಕಾರಿಗಳು ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದರು. ಅದನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಸಿಎಟಿ ನಡಾವಳಿಗೆ ತಡೆಯಾಜ್ಞೆ ನೀಡಿತ್ತು.

ಪರಿಷ್ಕೃತ ಆಯ್ಕೆ ಪಟ್ಟಿ ಜಾರಿಯಾದರೆ ಮೂಲ ಆಯ್ಕೆ ಪಟ್ಟಿ ಪ್ರಕಾರ 173 ಅಧಿಕಾರಿಗಳ ಹುದ್ದೆ ಬದಲಾಗುತ್ತದೆ. ಆದರೆ, ಈ ಪೈಕಿ ಸದ್ಯ ಕರ್ತವ್ಯದಲ್ಲಿರುವ 102 ಅಧಿಕಾರಿಗಳ ಹುದ್ದೆಗಳು ಬದಲಾಗಲಿವೆ. 36 ಅಧಿಕಾರಿಗಳು ಹುದ್ದೆ ಕಳೆದುಕೊಳ್ಳುತ್ತಾರೆ. ಅವರಲ್ಲಿ 15 ಅಧಿಕಾರಿಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿಯಿಂದ (ಕೆಎಟಿ) ತಡೆಯಾಜ್ಞೆ ತಂದಿದ್ದಾರೆ.

ವಿಳಂಬ ಧೋರಣೆ– ಆರೋಪ: ‘ಪರಿಷ್ಕೃತ ಆಯ್ಕೆ ಪಟ್ಟಿ ಜಾರಿಗೆ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ’ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಬಳಿ ಕೇಳಿದಾಗ, ‘ಓಕೆ. ಓಕೆ’ ಎಂದಷ್ಟೆ
ಪ್ರತಿಕ್ರಿಯಿಸಿದರು.

ಹೈಕೋರ್ಟ್‌ ನೀಡಿದ್ದ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಎಲ್ಲ ಮೇಲ್ಮನವಿಗಳೂ ವಜಾಗೊಂಡಿವೆ.

‘ಹೈಕೋರ್ಟ್‌ಗೆ ಹೋಗಬಹುದು’

‘ನ್ಯಾಯಮಂಡಳಿ ಕೂಡಾ ಕೋರ್ಟ್. ಅದರ ಬಗ್ಗೆ ಮಾತನಾಡುವುದು ನ್ಯಾಯಾಂಗದ ಅಧಿಕಾರಕ್ಕೆ ಚ್ಯುತಿಯಾಗುತ್ತದೆ. ಹೀಗಾಗಿ, ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ನೊಂದವರು ಹೈಕೋರ್ಟ್‌ಗೆ ಹೋಗಲು ಅವಕಾಶವಿದೆ’ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಹೇಳಿದರು.

‘ಸರ್ಕಾರ ಜಾರಿಗೊಳಿಸುವುದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿ ಪರಿಗಣಿಸಿ, ಸಿಎಟಿ ತಡೆಯಾಜ್ಞೆ ನೀಡಬಾರದು ಎಂದೇನೂ ಇಲ್ಲ. ಅರ್ಜಿ ಜೊತೆ
ದೃಢೀಕೃತ ಪ್ರತಿ ಸಲ್ಲಿಸಬೇಕು. ಅದನ್ನು ಸಲ್ಲಿಸದಿದ್ದರೆ, ನಿಯಮಾವಳಿಯಲ್ಲಿನ ಲೋಪ’ ಎಂದು ಹೈಕೋರ್ಟ್‌ ಹಿರಿಯ ವಕೀಲ ಚಂದ್ರಮೌಳಿ ಅವರು ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿಯವರ ಟಿಪ್ಪಣಿಗೆ ತಡೆಯಾಜ್ಞೆ ತಂದಿರುವ ಬಗ್ಗೆ ಕೆಲವರು ನನ್ನ ಬಳಿ ಹೇಳಿದ್ದಾರೆ. ಅಷ್ಟೆ ಗೊತ್ತು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ
-ಟಿ.ಎಂ. ವಿಜಯಭಾಸ್ಕರ್‌,ಮುಖ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.